ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಮಾರಿಕೊಪ್ಪದ ಹಳದಮ್ಮ ದೇವಿಯ ದೊಡ್ಡ ರಥೋತ್ಸವ ಶುಕ್ರವಾರ ಬೆಳಗ್ಗೆ 5.30ರ ಬ್ರಾಹ್ಮೀ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಸಮೂಹದ ನಡುವೆ ವೈಭವದಿಂದ ಜರುಗಿತು.
ಭಕ್ತರು ಗುರುವಾರವೇ ಮಾರಿಕೋಪ್ಪದ ಹಳದಮ್ಮ ದೇವಿಗೆ ರೊಟ್ಟಿ ಬುತ್ತಿ ಮಾಡಿ ರಥೋತ್ಸವಕ್ಕೆ ಆಗಮಿಸಿದ್ದರು. ಗುರುವಾರ ಬೆಳಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆಯೊಂದಿಗೆ ಹಳದಮ್ಮ ದೇವಿಗೆ ಆಭರಣ, ವಿಶೇಷ ಪೂಜೆ, ಮಹಾಮಂಗಳಾರತಿ ಸೇರಿ ಹಲವು ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು.
ಶುಕ್ರವಾರ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ರಥಕ್ಕೆ ಶಾಂತಿ ಪೂಜೆ ನಡೆಸಿ ಅರ್ಚಕರಿಂದ ರಥಕ್ಕೆ ಬಲಿ ಅನ್ನ ನೈವೇದ್ಯ ಮಾಡಿದ ನಂತರ ಮುಜರಾಯಿ ಅಧಿಕಾರಿಗಳು ಹಾಗೂ ಭಕ್ತರು ರಥಕ್ಕೆ ಪೂಜೆ ಸಲ್ಲಿಸಿದ ಮೇಲೆ ಹಳದಮ್ಮ ದೇವಿ ಮೂರ್ತಿಗೆ ವಿವಿಧ ಹೂವುಗಳಿಂದ ಅಲಂಕಾರಗೊಂಡಿದ್ದ ರಥದಲ್ಲಿ ಕೂರಿಸಲಾಯಿತು.
ರಥದಲ್ಲಿ ಹಳದಮ್ಮ ದೇವಿಯ ಕೂರಿಸುತ್ತಿದ್ದಂತೆ ಸಹಸ್ರಾರು ಭಕ್ತರು "ಹಳದಮ್ಮದೇವಿ ಊಧೋ ಎಂದು ಜಯಘೋಷದೊಂದಿಗೆ ರಥೋತ್ಸವದಲ್ಲಿ ತೇರು ಎಳೆದು ಭಕ್ತಿ ಸಮರ್ಪಿಸಿದರು.
ಭಕ್ತರು ರಥದ ಮೇಲೆ ಬಾಳೆಹಣ್ಣು, ಕಾಳುಮೆಣಸು, ಮಂಡಕ್ಕಿ ಮತ್ತಿತರ ವಸ್ತುಗಳ ತೂರುತ್ತಾ ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು. ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆದು, ಬಾಳೆಹಣ್ಣು ನೈವೇದ್ಯ ಮಾಡಿ ಕೃತಾರ್ಥರಾದರು.
ರಥೋತ್ಸದಲ್ಲಿ ಸೊರಟೂರು ಗ್ರಾಮದ ಹನುಮಂತ ದೇವರು, ಸುಂಕದಕಟ್ಟೆ ಮಂಜುನಾಥ ಸ್ವಾಮಿ ನರಸಿಹದೇವರು. ಪಟ್ಟಣದ ಗಾಳಿ ದುರ್ಗಮ್ಮ ದೇವಿ ದೇವರ ಉತ್ಸವ ಮೂರ್ತಿಗಳು ಪಲ್ಲಕ್ಕಿಯಲ್ಲಿ ಸಾಗಿ ರಥೋತ್ಸವಕ್ಕೆ ಮೆರುಗು ತಂದವು. ರಥೋತ್ಸದಲ್ಲಿ ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಶಿಕಾರಿಪುರ, ಹಿರೆಕೇರೂರು, ಚಿತ್ರದುರ್ಗ ಜಿಲ್ಲೆಗಳು ಸೇರಿ ನಾಡಿನ ವಿವಿಧ ಭಾಗಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಹರಕೆ, ಕಾಣಿಕೆ ಸಮರ್ಪಿಸಿದರು.
ರಥೋತ್ಸವದಲ್ಲಿ ಮುಜರಾಯಿ ಅಧಿಕಾರಿಗಳಾದ ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತಪ್ಪ, ರೂಪಾ ಚನ್ನೇಶ್, ಗ್ರಾಪಂ ಮಾಜಿ ಅಧ್ಯಕ್ಷ ಹಳದಪ್ಪ, ಚಿನ್ನಪ್ಪ, ಮೈಲಪ್ಪ, ಅರ್ಚಕ ಮಲ್ಲಿಕಾರ್ಜುನ, ಪುಟ್ಟನಗೌಡ, ಪ್ರಭುಗೌಡ, ಪಾಲಾಕ್ಷಪ್ಪ, ಮಾಳಗಿಕೆಂಚ್ಚಪ್ಪ ಮತ್ತು ಪೊಲೀಸರು, ಅಧಿಕಾರಿಗಳು ಸಾವಿರಾರು ಭಕ್ತರಿದ್ದರು.
ಮಲೇಬೆನ್ನೂರಿನಲ್ಲಿ ಬಸವೇಶ್ವರ ರಥೋತ್ಸವ
ಮಲೇಬೆನ್ನೂರು: ಪಟ್ಟಣದ ಬಸವೇಶ್ವರ ರಥೋತ್ಸವ ಗುರುವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು. ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಉಪತಹಸೀಲ್ದಾರ್ ಆರ್.ರವಿ ರಥಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ರಥೋತ್ಸವದಲ್ಲಿ ಭಜನಾ ಮಂಡಳಿ, ತಮಟೆ ತಂಡ, ನಂದಿಕೋಲು ಕುಣಿತ, ಮೆರುಗು ನೀಡಿದವು. ಮಲೇಬೆನ್ನೂರು, ಕೊಮಾರನಹಳ್ಳಿ, ಹಾಲಿವಾಣ, ಹರಳಹಳ್ಳಿ, ಕುಂಬಳೂರು, ನಿಟ್ಟೂರು, ಹೊಳೆಸಿರಿಗೆರೆ, ಪಾಳ್ಯ, ಬೂದಿಹಾಳು, ದಾವಣಗೆರೆ, ಹರಿಹರದ ಸಹಸ್ರಾರು ಭಕ್ತರು ಭಾಗವಹಿಸಿದ್ದರು.
ಕಲಾತಂಡಗಳು, ಆಟಿಕೆ ವಸ್ತುಗಳು ಮಕ್ಕಳ ಆಕರ್ಷಿಸಿದವು. ರಥೋತ್ಸವ ಪೂರ್ವದಲ್ಲಿ ಬೀರಲಿಂಗೆಶ್ವರ ಕಾರ್ಣಿಕ ನಡೆಯಿತು. ಗುರುವಾರ ಬೆಳಗ್ಗೆ ಮಹಾಗಣಪತಿ ಪೂಜೆ, ರುದ್ರಾಭಿಷೇಕ, ರಥಕ್ಕೆ ತೈಲಾಭಿಷೇಕ ಜರುಗಿತು.
ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಕ್ತರಿಗೆ ಉಚಿತ ಮಜ್ಜಿಗೆ ವಿತರಿಸಿದರು.