ಶರಣ ಸಾಹಿತ್ಯ ಕ್ಷೇತ್ರಕ್ಕೆ ಹಳಕಟ್ಟಿ ಕೊಡುಗೆ ಅಪಾರ: ಡಾ.ಶಿವಕುಮಾರ

KannadaprabhaNewsNetwork | Published : Jul 3, 2024 12:24 AM

ಸಾರಾಂಶ

ರಾಯಚೂರಿನಲ್ಲಿ ನಡೆದ ಡಾ. ಫ.ಗು.ಹಳಕಟ್ಟಿ ಜಯಂತಿ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಎಸ್ಪಿ ಡಾ.ಶಿವಕುಮಾರ ಅಭಿಮತ ವ್ಯಕ್ತಪಡಿಸಿದರು. ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದವರೆಗೆ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಡಾ.ಫ.ಗು.ಹಳಕಟ್ಟಿಯವರು ವಚನಗಳ ಹಸ್ತ ಪ್ರತಿಗಳನ್ನು ಸಂಗ್ರಹಿಸಿ, ಪ್ರಕಟಿಸಿ, ಶರಣ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ನಡೆದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸರಳ, ಸಜ್ಜನಿಕೆ, ಕ್ರಿಯಾಶೀಲತೆ, ವಿಶೇಷ ಆಸಕ್ತಿ, ಪರಿಶ್ರಮ ಮತ್ತು ಕನ್ನಡ ನಾಡು, ನುಡಿ, ಹಾಗೂ ಸಾಹಿತ್ಯದ ಬಗ್ಗೆ ಹಳಕಟ್ಟಿಗೆ ವಿಶೇಷ ಕಾಳಜಿ, ಪ್ರೀತಿ ಇದ್ದದ್ದನ್ನು ಗಮನಿಸಬಹುದು. ಅವರಲ್ಲಿಯ ಶಿಸ್ತು, ಶ್ರದ್ಧೆ, ಮಾಡುವ ಕೆಲಸದಲ್ಲಿನ ನಿಷ್ಠೆಯಿಂದಾಗಿ ವಚನ ಸಾಹಿತ್ಯ ಸಂಗ್ರಹಕ್ಕೆ ಅವರು ಮಾಡಿದ ಸಾಹಸ ಪೂರ್ಣ ಕಾರ್ಯ ಶ್ಲಾಘನೀಯ ಹಾಗೂ ಸ್ಮರಣೀಯವಾಗಿದೆ ಎಂದರು.

ರಾಯಚೂರು ಸಹಾಯಕ ಆಯುಕ್ತರಾದ ಮೈಬೂಬಿ ಅವರು ಮಾತನಾಡಿ, ಫ.ಗು.ಹಳಕಟ್ಟಿ ಕರ್ನಾಟಕದ ಮ್ಯಾಕ್ಸ್‌ಮುಲ್ಲರ್ ಎಂಬ ಕೀರ್ತಿಗೆ ಭಾಜನರಾದರು. ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿ ಸಂಶೋಧನಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಇಂದಿನ ಮಕ್ಕಳಲ್ಲಿ ಇಂಗ್ಲಿಷ್ ಶಿಕ್ಷಣದ ವ್ಯಾಮೋಹದಿಂದ ಕನ್ನಡ ಸಾಹಿತ್ಯ ಓದಲು ಹಿಂಜರಿಯುತ್ತಿದ್ದು, ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಹೆಚ್ಚಾಗಿ ಓದಿ ಕನ್ನಡ ಸಾಹಿತ್ಯವನ್ನು ಬೆಳೆಸಿ, ಫ.ಗು.ಹಳಕಟ್ಟಿ ಅವರ ಜೀವನದ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕೆಂದರು.

ಸಮಾರಂಭದಲ್ಲಿ ಉಪನ್ಯಾಸ ನೀಡಿದ ಸಾಹಿತಿ ವೀರಹನುಮಾನ್ ಅವರು, ವಚನ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆಗೆ ಸಂಘಟನೆ, ಬ್ಯಾಂಕಿಂಗ್, ಕೃಷಿ, ನೇಕಾರಿಕೆ, ಸಹಕಾರಿ ಹೀಗೆ ಎಲ್ಲದರಲ್ಲಿಯೂ ತಮ್ಮನ್ನು ತೊಡಗಿಸಿಕೊಂಡರು. 1910 ದಿಲ್ಲಿ ಬಿಜಾಪುರ ಜಿಲ್ಲಾ ಲಿಂಗಾಯತ ವಿದ್ಯಾವರ್ಧಕ ಸಂಘ (ಬಿ.ಎಲ್.ಡಿ.ಇ.), 1912ರಲ್ಲಿ ಶ್ರೀಸಿದ್ದೇಶ್ವರ ಅರ್ಬನ್ ಕೋ. ಆಪರೇಟಿವ್ ಬ್ಯಾಂಕ್‌, ಗ್ರಾಮೀಣ ಅಭಿವೃದ್ಧಿ ಸಂಘ, ಒಕ್ಕಲುತನ ಸಹಕಾರಿ ಸಂಘ, ನೇಕಾರರ ಸಂಘ, ಹತ್ತಿ ಮಾರಾಟಗಾರರು ಸಂಘ, ಸಹಕಾರ ಸಂಘಗಳನ್ನು ಸ್ಥಾಪಿಸಿ ಇವುಗಳ ಬೆಳವಣಿಗೆಗೆ ದುಡಿದರು. ಅಲ್ಲದೆ ಧಾರವಾಡ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿಯೂ ಇವರು ವಹಿಸಿದ ಪಾತ್ರ ಮಹತ್ವದ್ದಾಗಿದೆ ಎಂದರು.

ಇದಕ್ಕೂ ಮೊದಲು ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದವರಿಗೆ ಮೆರೆವಣಿಗೆ ಮಾಡಲಾಯಿತು. ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಸಾಹಿತಿಗಳು, ವಿವಿಧ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಅನೇಕರು ಇದ್ದರು.

Share this article