ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ । ವಿಧಾನಪರಿಷತ್ ಸದಸ್ಯೆ
ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಫ.ಗು.ಹಳಕಟ್ಟಿ ಅವರ ಸಾಧನೆ ಜಗತ್ತಿಗೆ ಮಾದರಿಯಾಗಿದೆ ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ಸಂಗ್ರಹಿಸಿ, ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ದಾಖಲೆ ಉಳಿಸುವಂತೆ, ವಚನಗಳ ಮಹತ್ವವನ್ನು ಜಗತ್ತಿಗೆ ಸಾರುವ ಕೆಲಸವನ್ನು ಫ.ಗು. ಹಳಕಟ್ಟಿಯವರು ಮಾಡಿದ್ದಾರೆ. ವಿಜಯಪುರದಲ್ಲಿ ಬಿಎಲ್‌ಡಿಇ ವಿಶ್ವವಿದ್ಯಾಲಯ ಸ್ಥಾಪಿಸುವುದರ ಮೂಲಕ ಅತ್ಯುನ್ನತ ಶಿಕ್ಷಣ ಸಂಸ್ಥೆಗೆ ಬುನಾದಿ ಹಾಕಿದರು. ಬ್ಯಾಂಕುಗಳನ್ನು ಸ್ಥಾಪಿಸಿದರು. ಹಳಕಟ್ಟಿಯವರ ಸ್ಮರಣೀಯ ಸಾಧನೆಗಾಗಿ ವಿಜಯಪುರದಲ್ಲಿ ಅವರ ಸ್ಮಾರಕ ನಿರ್ಮಿಸಲಾಗಿದೆ. ಅವರ ಸಾಧನೆಯನ್ನು ಶಾಶ್ವತವಾಗಿ ಉಳಿಸುವ ಸಲುವಾಗಿ ಸರ್ಕಾರ ಅವರ ಜನ್ಮದಿನಾಚರಣೆಯನ್ನು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನಾಗಿ ಆಚರಿಸುತ್ತಿದೆ. ಅವರ ಕಾರ್ಯವನ್ನು ಅರ್ಥಪೂರ್ಣವಾಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದಕ್ಕಾಗಿ ನಾವೆಲ್ಲರೂ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಅದರ ಸತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಮಾತನಾಡಿ, ಫ.ಗು. ಹಳಕಟ್ಟಿಯವರು ಸಾಹಿತಿಗಳು ಮಾತ್ರವಲ್ಲದೆ, ಸಮಾಜಮುಖಿ ಕೆಲಸ ಮಾಡಿದ್ದಾರೆ. ಶಿಕ್ಷಣ-ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಅವರ ಸಾಧನೆ ನಮಗೆಲ್ಲರಿಗೂ ಸ್ಪೂರ್ತಿಯಾಗಬೇಕು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಚನ ಸಾಹಿತ್ಯದೆಡೆಗೆ ಆಕರ್ಷಿತರಾಗಿ ಅವುಗಳನ್ನು ಸಂರಕ್ಷಿಸುವ ಕಾರ್ಯ ಮಾಡಿದರು. ವಚನಗಳನ್ನು ರಕ್ಷಿಸುವ ಸಲುವಾಗಿಯೇ ತಮ್ಮ ಮನೆಯನ್ನು ಮಾರಿದ ನಿಸ್ವಾರ್ಥ ಸಾಧಕ ಹಳಕಟ್ಟಿಯವರು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಡಾ. ಸಂಗಮೇಶ ಕಲಾಲ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಸಾಹಿತಿ ಸಾವಿತ್ರಿ ಮುಜಂದಾರ ನಿರೂಪಿಸಿದರು. ಗಂಗಾವತಿಯ ರಿಜ್ವಾನ ಮುದ್ದಾಬಳ್ಳಿ ಹಾಗೂ ಸಂಗಡಿಗರು ನಾಡಗೀತೆ ಹಾಗೂ ವಚನ ಗೀತೆ ಪ್ರಸ್ತುತ ಪಡಿಸಿದರು.