ರಿಯಾಜಅಹ್ಮದ ಎಂ. ದೊಡ್ಡಮನಿ ಕನ್ನಡಪ್ರಭ ವಾರ್ತೆ ಡಂಬಳ ಅನ್ನ, ಅರಿವು, ಅಕ್ಷರ, ಆರೋಗ್ಯ ಹಾಗೂ ವೃಕ್ಷ ದಾಸೋಹ ಒಳಗೊಂಡು ಪಂಚದಾಸೋಹಕ್ಕೆ ಹೆಸರಾದ ಪೇಠಾ ಆಲೂರಿನ ಹಾಲೇಶ್ವರ ಜಾತ್ರೆ ಏ. 10ರಿಂದ ಆರಂಭವಾಗಿದ್ದು, 14ರ ವರೆಗೆ ನಡೆಯಲಿದೆ.
ಹಾಲೇಶ್ವರ ಶರಣರು ಪ್ರತಿ ವರ್ಷ ಸಾಮಾಜಿಕ ಜಾಗೃತಿ ಮೂಡಿಸುತ್ತಾ ಜಾತ್ರಾ ಮಹೋತ್ಸವವನ್ನು ನಡೆಸುತ್ತಾ ಬಂದಿದ್ದಾರೆ.ಮುಂಡರಗಿ ತಾಲೂಕಿನ ಪೇಠಾ ಆಲೂರಿನ ಹಾಲೇಶ್ವರ ಮಠಕ್ಕೆ 1979ರ ಮೇ 9ರರಂದು ಪೀಠಾಧಿಪತಿಗಳಾದ ಹಾಲೇಶ್ವರ ಶರಣರು ಹಾವೇರಿ ತಾಲೂಕಿನ ನೆಗಳೂರು ಹಾಲೇಶ್ವರ ಮಠದ ಸದ್ಗುರು ಶಿವಾನಂದ ಶಿವಾಚಾರ್ಯ ಹಿರೇಮಠ ಮಹಾಸ್ವಾಮಿಗಳಿಂದ ಧಾರ್ಮಿಕ ದೀಕ್ಷೆ ಪಡೆದಿದ್ದಾರೆ.
ಮಠದ ಸರ್ವಾಂಗೀಣ ಅಭಿವೃದ್ಧಿ ಸೇರಿದಂತೆ ಹಿಂದು ಮುಸ್ಲಿಂರ ಭಾವ್ಯಕ್ಯತೆಯ ಸಂಗಮವಾಗಿ ಶ್ರೀಮಠವನ್ನು ಬೆಳೆಸಿದ್ದಲ್ಲದೆ ಧಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಶ್ರೀಮಠವನ್ನು ಜನಸಾಮಾನ್ಯರ ಮಠವನ್ನಾಗಿ ಪರಿವರ್ತಿಸಿದ ಕೀರ್ತಿಗೆ ಶ್ರೀಗಳು ಭಾಜನರಾಗಿದ್ದಾರೆ. ತ್ರಿವಿಧ ದಾಸೋಹಿಗಳಾದ ಹಾಲೇಶ್ವರ ಶ್ರೀಗಳ ನಡೆ ನುಡಿ ಭಕ್ತರ ಪಾಲಿಗೆ ವರದಾನವಾಗಿದೆ.ಶ್ರೀ ಮಠದ ಹಲವು ಶಿಕ್ಷಣ ಸಂಸ್ಥೆಗಳು: ಶ್ರೀಗಳು ಹಾಲೇಶ್ವರ ಮಠಕ್ಕೆ ಪೀಠಾಧಿಪತಿಗಳಾದ ತರುವಾಯ ಪೇಠಾ ಆಲೂರಿನಲ್ಲಿ ಶ್ರೀಹಾಲೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ, ಹಾಲೇಶ್ವರ ಪ್ರೌಢಶಾಲೆ, ಹಾಲೇಶ್ವರ ಹಿರಿಯ ಪ್ರಾಥಮಿಕ ಶಾಲೆ, ರೋಣ ತಾಲೂಕಿನ ಕುರಡಗಿ ಗ್ರಾಮದಲ್ಲಿ ಹಾಲೇಶ್ವರ ಪ್ರೌಢಶಾಲೆಗಳನ್ನು ಸ್ಥಾಪನೆ ಮಾಡಿ ಸಮಾಜದ ಆರ್ಥಿಕ ದುರ್ಬಲ ವರ್ಗದ ಮಕ್ಕಳ ಶೈಕ್ಷಣಿಕ ಏಳ್ಗೆಗಾಗಿ ಶ್ರೀ ಮಠದಿಂದ ಲಕ್ಷಾಂತರ ಹಣ ಖರ್ಚು ಮಾಡಿ ಶ್ರಮಿಸುತ್ತಿರುವುದು ವಿದ್ಯಾರ್ಥಿಗಳ ಪಾಲಿಗೆ ಬೆಳಕು ಚೆಲ್ಲಿದ್ದಾರೆ.
ಜಾತ್ರೆಯಲ್ಲಿ ಶೇಂಗಾ ಹೋಳಿಗೆ: 1. 20 ಕ್ವಿಂಟಲ್ ಶೇಂಗಾ ಕಾಳು, 1. 80 ಕ್ವಿಂಟಲ್ ಬೆಲ್ಲ, 60 ಕಿಲೋ ಮೈದಾಹಿಟ್ಟು, 15 ಕಿಲೋ ಗೋಧಿ ಹಿಟ್ಟು ಬಳಸಿ ಶೇಂಗಾ ಹೋಳಿಗೆಯನ್ನು ಗ್ರಾಮದ ನೂರಾರು ಮಹಿಳೆಯರು ಸಿದ್ಧಗೊಳಿಸಿದ್ದಾರೆ. 5 ಕ್ಷಿಂಟಲ್ ಬುಂದೆ ಉಂಡಿ, ಜೋಳದ ರೊಟ್ಟಿ, ವಿವಿಧ ತರಕಾರಿಗಳ ಮೂಲಕ ಪಲ್ಯೆ, ವಿವಿಧ ಕಾಳುಗಳ ಪಲ್ಯೆಯನ್ನು ತಯಾರಿಸಿ ಭಕ್ತರಿಗೆ ಸಿದ್ಧಗೊಳಿಸಲಾಗಿದೆ.ಜಾತ್ರೆಗೆ ಸೇರುವ ಭಕ್ತರಿಗೆ ವೈಜ್ಞಾನಿಕ ಮನೋಭಾವ ಬೆಳೆಸುವ ವಿವಿಧ ವೈಜ್ಞಾನಿಕ ವಸ್ತು ಪ್ರದರ್ಶನ ಸೇರಿದಂತೆ ಮೂಢನಂಬಿಕೆ ತೊಲಗಿಸಲು ಹತ್ತು ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರೀಮಠದ ಜಾತ್ರೆಯನ್ನು ವೈಜ್ಞಾನಿಕ ಮನೋಭಾವ ಬೆಳೆಸುವ ಜಾತ್ರೆಯನ್ನಾಗಿ ಬೆಳೆಸಿದ ಕೀರ್ತಿ ಶ್ರೀಗಳದ್ದು. ಶ್ರೀ ಮಠದಿಂದ ಸಾಮೂಹಿಕ ವಿವಾಹ:ಶ್ರೀ ಪೀಠಾಧಿಪತಿಗಳಾದಾಗಿನಿಂದ ಹಿಡಿದು ಇಲ್ಲಿಯವರೆಗೆ ಸರ್ವಧರ್ಮಗಳ ಸಾಮೂಹಿಕ ವಿವಾಹವನ್ನು ಶ್ರೀ ಮಠದ ಜಾತ್ರಾ ಮಹೋತ್ಸವದಂದು ಹಮ್ಮಿಕೊಂಡು ಸಾವಿರಾರು ಬಡ ವಧು ವರರ ಪಾಲಿಗೆ ಆರಾಧ್ಯ ದೇವರೆನಿಸಿದ್ದಾರೆ. ಭಕ್ತರ ಸಮಸ್ಯೆಗಳು ದೂರಾಗಲಿ. ರೈತರ ಬೆಳೆಗಳು ಉತ್ತಮವಾಗಿ ಬಂದು ಆರ್ಥಿಕ ಸದೃಢರಾಗಲಿ ಎನ್ನುವ ಸದುದ್ದೇಶವನ್ನಿಟ್ಟುಕೊಂಡು ಪ್ರತಿವರ್ಷವು ಶ್ರೀ ಗಳಿಂದ ಮುಳ್ಳುಗದ್ದುಗೆ ಉತ್ಸವ ಜರುಗುತ್ತಿದೆ.
ತ್ರಿವಿಧ ದಾಸೋಹಿಗಳಾದ ಹಾಲೇಶ್ವರ ಶಿವಶರಣರು ಮಠದ ಪೀಠಾಧಿಪತಿಗಳಾಗಿ ಬಂದಾಗಿನಿಂದ ಶ್ರೀ ಮಠದ ಭಕ್ತರು ಅವರಿಗೆ ನಾಣ್ಯಗಳ ತುಲಾಭಾರ ಮಾಡಿ ಭಕ್ತಿ ಸಮರ್ಪಿಸುತ್ತಾ ಬರುತ್ತಿದ್ದಾರೆ. ಜಾತಿರಹಿತ ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರೀ ಮಠದ ಶ್ರೀಗಳ ಕಾರ್ಯ ಪ್ರಶಂಸನೀಯವಾಗಿದೆ. ಶ್ರೀಗಳು ಧಾರ್ಮಿಕ, ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ಬರಲು ಹಲವು ಸಲಹೆ ಸೂಚನೆ ನೀಡುವ ಮೂಲಕ ನಮ್ಮ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದಾರೆ. ಗ್ರಾಮವನ್ನು ಶೈಕ್ಷಣಿಕ ಕಾಶಿಯಾಗಿಸಿ ಭಕ್ತರ ನೂವು ನಲಿವುಗಳಿಗೆ ಸ್ಪಂದಿಸಿದ ತ್ರಿವಿಧ ದಾಸೋಹಿಗಳಾದ ಹಾಲೇಶ್ವರ ಶ್ರೀಗಳಿಗೆ ನಾವು ಅಭಾರಿಯಾಗಿದ್ದೇವೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.