ಅರೆಬೆತ್ತಲೆ ಫಕೀರ, ಅಪರೂಪದ ಸಂತ ಗಾಂಧೀಜಿ

KannadaprabhaNewsNetwork |  
Published : Oct 19, 2025, 01:00 AM IST
18ಡಿಡಬ್ಲೂಡಿ8ಚಕೋರ ಸಾಹಿತ್ಯ ವಿಚಾರ ವೇದಿಕೆಯ ಉದ್ಘಾಟನೆಯಲ್ಲಿ ಡಾ.ಅರ್ಜುನ ಗೊಳಸಂಗಿ ಮತ್ತು ಡಾ.ವೈ.ಎಂ.ಭಜಂತ್ರಿ ಅವರನ್ನು ಸಾಹಿತ್ಯಾಸಕ್ತರಿಂದ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಜಾನ್ ರಸ್ಕಿನ್ ಹೆಸರಿನ ಪಾಶ್ಚಿಮಾತ್ಯ ಚಿಂತಕರ ಪ್ರಭಾವದಿಂದ ಗಾಂಧೀಜಿಯಲ್ಲಿ ಸರ್ವೋದಯ ಪರಿಕಲ್ಪನೆ ಉದಯವಾಯಿತು. ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಗಾಂಧೀಜಿಗೆ, ವಾಸ್ತವವಾದಿ ಡಾ. ಬಿ.ಆರ್. ಅಂಬೇಡ್ಕರ್‌ ಅವರು ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿದ್ದು ಈಗ ಇತಿಹಾಸ.

ಧಾರವಾಡ:

ಪಾಶ್ಚಿಮಾತ್ಯರಿಂದ ಅರೆಬೆತ್ತಲೆ ಫಕೀರನೆಂದು ಕರೆಸಿಕೊಂಡಿದ್ದ ಮಹಾತ್ಮ ಗಾಂಧೀಜಿ ಭಾರತದ ಅಪರೂಪದ ಸಂತರು ಎಂದು ಪ್ರಾಧ್ಯಾಪಕ ಡಾ. ವೈ.ಎಂ. ಭಜಂತ್ರಿ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಉದ್ಘಾಟನೆಯಲ್ಲಿ ಗಾಂಧೀಜಿಯವರ ಸರ್ವೋದಯ ಪರಿಕಲ್ಪನೆ ವಿಷಯದಲ್ಲಿ ಉಪನ್ಯಾಸ ನೀಡಿದ ಅವರು, ಜಾನ್ ರಸ್ಕಿನ್ ಹೆಸರಿನ ಪಾಶ್ಚಿಮಾತ್ಯ ಚಿಂತಕರ ಪ್ರಭಾವದಿಂದ ಗಾಂಧೀಜಿಯಲ್ಲಿ ಸರ್ವೋದಯ ಪರಿಕಲ್ಪನೆ ಉದಯವಾಯಿತು. ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಗಾಂಧೀಜಿಗೆ, ವಾಸ್ತವವಾದಿ ಡಾ. ಬಿ.ಆರ್. ಅಂಬೇಡ್ಕರ್‌ ಅವರು ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿದ್ದು ಈಗ ಇತಿಹಾಸ. ಇಬ್ಬರ ಗುರಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವುದಾಗಿದ್ದರೂ ಸವೆಸಿದ ದಾರಿ ಮಾತ್ರ ವಿಭಿನ್ನ ಎಂದರು.

ಸಂವಿಧಾನ ರಚನೆಯ ಸಂದರ್ಭದಲ್ಲಿ ಗಾಂಧೀಜಿ ಚಿಂತನೆಗಳನ್ನು ಬಾಬಾ ಸಾಹೇಬರು ರಾಜನಿರ್ದೇಶಕ ತತ್ವಗಳಲ್ಲಿ ಅಳವಡಿಸಿದ್ದನ್ನು ನಾವು ಗಮನಿಸಬೇಕು. ಗಾಂಧೀಜಿ ಸರ್ವೋದಯ ಪರಿಕಲ್ಪನೆಯನ್ನು ಬದಲಾದ ಈಗಿನ ಕಾಲಕ್ಕೆ ತಕ್ಕಂತೆ ಪರಿಷ್ಕರಿಸುವುದು ಅವಶ್ಯಕ ಎಂದು ಹೇಳಿದರು. ಚಕೋರ ಸಾಹಿತ್ಯ ವಿಚಾರ ವೇದಿಕೆ ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಗಾಂಧೀಜಿ ಎಂದೆಂದಿಗೂ ನಮಗೆ ಮಾದರಿ. ತಾಯಿ ಹೃದಯದ ಅವರು ಮಹಿಳೆಯರ ವಿಷಯದಲ್ಲಿ ರಾಮರಾಜ್ಯದ ಕನಸು ಕಂಡವರು. ಹಂತಕನ ಗುಂಡಿಗೆ ಬಲಿಯಾಗಿ ಕೊನೆಯುಸಿರೆಳೆಯುವಾಗಲೂ “ಹೇರಾಮ್” ಎಂದು ಹೇಳಿದ ಹುತಾತ್ಮರು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಅರ್ಜುನ ಗೊಳಸಂಗಿ, ಅಕಾಡೆಮಿಯು ರಾಜ್ಯದ ಎಲ್ಲ ಜಿಲ್ಲೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಚಕೋರ ವೇದಿಕೆಯ ಸಾಹಿತ್ಯ ಕಾರ್ಯಕ್ರಮ ರೂಪಿಸುವ ಮಹತ್ವದ ಯೋಜನೆ ರೂಪಿಸಿದೆ. ಹೊಸ ಪ್ರತಿಭೆಗಳಿಗೆ, ಯುವ ಸಮೂಹವನ್ನು ಸಾಹಿತ್ಯದೆಡೆಗೆ ಕರೆತರುವ ಮತ್ತು ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸುವ ಮಹತ್ವದ ಯೋಜನೆ ಇದು ಎಂದರು.

ಚಕೋರ ಸಾಹಿತ್ಯ ವೇದಿಕೆ ಸಂಚಾಲಕ ಸಿದ್ಧರಾಮ ಹಿಪ್ಪರಗಿ ಸ್ವಾಗತಿಸಿದರು. ಇನ್ನೊರ್ವ ಸಂಚಾಲಕ ಎಂ. ಮಂಜುನಾಥ ನಿರೂಪಿಸಿದರು. ಪ್ರಮೀಳಾ ಜಕ್ಕಣ್ಣವರ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಡಾ. ಅರ್ಜುನ ಗೊಳಸಂಗಿ ಮತ್ತು ಡಾ. ವೈ.ಎಂ. ಭಜಂತ್ರಿ ಅವರನ್ನು ಸಾಹಿತ್ಯಾಸಕ್ತರಿಂದ ಸನ್ಮಾನಿಸಲಾಯಿತು. ಮಹಾಂತೇಶ ನರೇಗಲ್ಲ, ಡಾ. ಸಂಗಮೇಶ ಛಲವಾದಿ, ಪೀರಸಾಬ ನದಾಫ್, ಡಾ. ಪ್ರಭಾಕರ ಲಗಮಣ್ಣವರ, ಮಲ್ಲಿಕಾರ್ಜುನ ಹಿರೇಮನಿ, ಎಸ್.ವೈ. ಸುಣಗಾರ, ಡಾ. ಶ್ರದ್ಧಾ ಬೆಳವಡಿ ಇದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ