ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಶ
ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿಮನೆಯ ಸುತ್ತಮುತ್ತ ಹಂದಿಗಳ ಹಾವಳಿಯಿಂದಾಗಿ ಮನನೊಂದು ಹೆಂಡತಿ, ಮಕ್ಕಳು ಮನೆ ಬಿಟ್ಟು ಹೋಗಿದ್ದು, ಇದರಿಂದಾಗಿ ಮನ ನೊಂದ ಪತಿಯೊಬ್ಬರು ಇಲ್ಲಿನ ಪಪಂ ಆವರಣದಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು.
1ನೇ ವಾರ್ಡ್‌ನ ಮಾಸೂರು ರಸ್ತೆಯ ನಿವಾಸಿ ವೀರೇಶ ಬೆಣ್ಣಿ ಈ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಂದಿ ಹಿಡಿಯುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಪಪಂ ಆವರಣದಲ್ಲಿ ಅರೆ ಬೆತ್ತಲೆ ಪ್ರತಿಭಟನೆ ಮಾಡುವುದಾಗಿ ೧೫ ದಿನಗಳ ಗಡುವು ನೀಡಿದ್ದೆ. ಕ್ಯಾರೆ ಎನ್ನದ ಅಧಿಕಾರಿಗಳ ವಿರುದ್ಧ ಬೇಸತ್ತು ಅರೆ ಬೆತ್ತಲೆ ಪ್ರತಿಭಟನೆ ಕೈಗೊಂಡಿದ್ದೇನೆ. ಹಂದಿಗಳು ಮನೆಯ ಆವರಣದಲ್ಲಿ ಇಟ್ಟಂತಹ ಜೋಳ, ಅಕ್ಕಿ ಇತರ ವಸ್ತುಗಳನ್ನು ತಿಂದು ಹಾಳು ಮಾಡಿ ನಷ್ಟ ಉಂಟು ಮಾಡಿವೆ. ಇದರ ಪರಿಹಾರ ನೀಡುವವರು ಯಾರು?. ಅಲ್ಲದೆ ಹಂದಿಗಳ ಹಾವಳಿಯಿಂದಾಗಿ ಮಕ್ಕಳು ಶಾಲೆ ಬಿಟ್ಟು, ತಾಯಿ ಜೊತೆ ತವರು ಮನೆ ಸೇರಿಕೊಂಡಿದ್ದಾರೆ ಇದರಿಂದಾಗಿ ಮಕ್ಕಳ ಶಿಕ್ಷಣದ ಮೇಲೂ ಪರಿಣಾಮ ಬೀರಿದೆ ಎಂದರು.
ಪ್ರತಿಭಟನೆ ಕಾವು ಹೆಚ್ಚುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೆಣ್ಣಿ ಅವರಿಗೆ ಬೆಂಬಲಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಇದರಿಂದಾಗಿ ವಿಚಲಿತಗೊಂಡ ಪಪಂ ಸಿಬ್ಬಂದಿ ತರಾತುರಿಯಲ್ಲಿ ಹಂದಿ ಹಿಡಿಯುವವರ ಮನೆಗೆ ತೆರಳಿ ಹಂದಿ ಹಿಡಿಯಲು ಮನವಿ ಮಾಡಿದರು. ಯಾರೂ ಬರದ ಕಾರಣ ಸ್ವತಃ ಪಪಂ ಸಿಬ್ಬಂದಿ ಹಂದಿ ಹಿಡಿಯುವ ಬಲೆ ತಂದು ಹಂದಿ ಹಿಡಿಯಲು ಮುಂದಾಗುತ್ತೇವೆ. ಆದ್ದರಿಂದ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದ ಸಾರ್ವಜನಿಕರು ಬಲೆಯನ್ನು ಸಿಬ್ಬಂದಿಯಿಂದ ಕಸಿದು ರಸ್ತೆಯಲ್ಲಿ ಬಿಸಾಕಿ ಆಕ್ರೋಶ ಹೊರಹಾಕಿದರು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಉಂಟಾಯಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಜಗದೀಶ ಪ್ರತಿಭಟನಾಕಾರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾದರು.ಸ್ಥಳಕ್ಕಾಗಮಿಸಿದ ಶಾಸಕ:
ಬಳಿಕ ಸ್ಥಳಕ್ಕಾಗಮಿಸಿದ ಶಾಸಕ ಯು.ಬಿ. ಬಣಕಾರ ಪ್ರತಿಭಟನಾನಿರತ ವೀರೇಶ ಬೆಣ್ಣಿ ಹಾಗೂ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಬುಧವಾರ ಮಧ್ಯಾಹ್ನ ೧೨ ಗಂಟೆಯವರೆಗೆ ಕಾಲಾವಕಾಶ ನೀಡಿ ಪಟ್ಟಣದ ಎಲ್ಲ ಹಂದಿಗಳನ್ನು ೨೪ ತಾಸಿನಲ್ಲಿ ಹಿಡಿದು ದೂರದ ಊರಿಗೆ ಸ್ಥಳಾಂತರಿಸಲು ಹಂದಿಯ ಮಾಲೀಕರಿಗೆ ತಾಕೀತು ಮಾಡಲಾಗುವುದು. ಆದ್ದರಿಂದ ಪ್ರತಿಭಟನೆ ಕೈಬಿಡುವಂತೆ ಶಾಸಕರು ಭರವಸೆ ನೀಡಿದರು. ಇದಕ್ಕೆ ಒಪ್ಪಿ ಪ್ರತಿಭಟನೆ ಕೈಬಿಡಲಾಯಿತು.ನಗ್ನ ಪ್ರತಿಭಟನೆಯ ಎಚ್ಚರಿಕೆ:
ಅಧಿಕಾರಿಗಳು ೨೪ ಗಂಟೆಯೊಳಗೆ ಹಂದಿ ಹಿಡಿಯದೆ ಹೋದರೆ ಇಂದು ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದೇನೆ. ಬುಧವಾರ ನಗ್ಮವಾಗಿ ಪ್ರತಿಭಟಿಸಿ ಪಟ್ಟಣ ಪಂಚಾಯಿತಿ ಆವರಣದಲ್ಲೇ ವಿಷ ಕುಡಿದು ಪ್ರಾಣ ಕಳೆದುಕೊಳ್ಳುತ್ತೇನೆ. ಇದಕ್ಕೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ವೀರೇಶ ಬೆಣ್ಣಿ ಎಚ್ಚರಿಸಿದರು.