ಅರ್ಧ ಊರಿಗೆ ನೀರ್ ಬರೋದಿಲ್ರೀ...!

KannadaprabhaNewsNetwork |  
Published : Aug 04, 2024, 01:16 AM IST
೧ಕೆಎನ್‌ಕೆ-೧-ಎ                                                                                   ಕನಕಗಿರಿ ತಾಲೂಕಿನ ಬಂಕಾಪುರ ಗ್ರಾಮದ ಸರ್ಕಾರಿ ಶಾಲೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದು. ೧ಕೆಎನ್‌ಕೆ-೧-ಬಿ                                                                                            ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದ ಬಂಕಾಪುರದ ಶುದ್ಧ ನೀರಿನ ಘಟಕ.  | Kannada Prabha

ಸಾರಾಂಶ

ಅರ್ಧ ಊರಿಗೆ ಮಾತ್ರ ನೀರು ಸಪ್ಲೈ ಐತ್ರೀ ಇನ್ನರ್ಧ ಊರಿಗೆ ನೀರು ಬರೋದಿಲ್ರಿ. ಹಳ್ಳಿ ಮಂದಿ ಗೋಳು ಯಾರ್ ಕೇಳಬೇಕ್ರೀ. ಎಲ್ರಿಗೂ ಹೇಳಿ ಸಾಕಾಗೈತ್ರಿ, ಕೆಲಸ ಆಗಲಾರದಕ್ಕ ಸುಮ್ನಾಗಿವಿ ನೋಡ್ರಿ.!

ಇದು ಕನಕಗಿರಿ ತಾಲೂಕಿನ ಬಂಕಾಪುರ ಗ್ರಾಮದ ದುಸ್ಥಿತಿ

ಎಂ. ಪ್ರಹ್ಲಾದ್

ಕನ್ನಡಪ್ರಭ ವಾರ್ತೆ ಕನಕಗಿರಿ

ಅರ್ಧ ಊರಿಗೆ ಮಾತ್ರ ನೀರು ಸಪ್ಲೈ ಐತ್ರೀ ಇನ್ನರ್ಧ ಊರಿಗೆ ನೀರು ಬರೋದಿಲ್ರಿ. ಹಳ್ಳಿ ಮಂದಿ ಗೋಳು ಯಾರ್ ಕೇಳಬೇಕ್ರೀ.

ಎಲ್ರಿಗೂ ಹೇಳಿ ಸಾಕಾಗೈತ್ರಿ, ಕೆಲಸ ಆಗಲಾರದಕ್ಕ ಸುಮ್ನಾಗಿವಿ ನೋಡ್ರಿ.!

ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ವ್ಯಾಪ್ತಿಯ ಬಂಕಾಪುರ ಗ್ರಾಮಸ್ಥರು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳ ವಿರುದ್ಧದ ವ್ಯಕ್ತಪಡಿಸಿದ ಬೇಸರದ ನುಡಿಗಳಿವು.

ಹಲವು ವರ್ಷಗಳಿಂದ ನಮ್ ಊರಾಗ ಸರಿಯಾಗಿ ನೀರು ಬರ‍್ತಿಲ್ಲ. ಒಂದ್ ಓಣಿಗೆ ಬಂದ್ರ ಇನ್ನೊಂದು ಓಣ್ಯಾಗ ನೀರು ಬರಲ್ಲ. ಈಗಲೂ ಇದೇ ಪರಿಸ್ಥಿತಿ ಐತ್ರಿ. ನಾವು ಪಂಚಾಯ್ತಿ ಸದಸ್ಯರಿಗೆ, ಪಿಡಿಒಗೆ ತಿಳಿಸಿದರೂ ಕೆಲ್ಸ ಆಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಸದ್ಯ ಬಂಕಾಪುರದ ಅರ್ಧ ಊರಿಗೆ ಮಾತ್ರ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಇನ್ನರ್ಧ ಗ್ರಾಮಕ್ಕೆ ನೀರು ಸರಬರಾಜು ಆಗದೆ ಹಲವು ವರ್ಷಗಳೇ ಗತಿಸಿವೆ. ನೀರಿನ ಸಮಸ್ಯೆ ಗ್ರಾಪಂ ಸದಸ್ಯರ ಹಾಗೂ ಪಿಡಿಒ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈಗಲೂ ಸಮಸ್ಯೆಗೆ ಪರಿಹಾರ ದೊರೆತಿಲ್ಲವಾಗಿದ್ದು, ಗ್ರಾಮಸ್ಥರು ಓಣಿ ಬಿಟ್ಟು ಓಣಿಗೆ ಹೋಗಿ ನೀರು ತರುವ ಪರಿಸ್ಥಿತಿ ಮುಂದುವರೆದಿದೆ. ಇತ್ತ ಶಾಲೆಯಲ್ಲೂ ನೀರಿನ ಅಭಾವ ನೀಗಿಸಲು ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕವೂ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

ಬೋರ್‌ವೆಲ್‌ಗಳಲ್ಲಿ ನೀರಿಲ್ಲ:

ಗ್ರಾಮಕ್ಕೆ ನೀರು ಸರಬರಾಜು ಆಗುವ ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ತೀರಾ ಕುಸಿದಿದೆ. ಈ ಮೊದಲು ಇದ್ದ ನೀರಿನ ಪ್ರಮಾಣ ಈಗ ಇಲ್ಲವಾಗಿದ್ದರಿಂದ ಗ್ರಾಮಕ್ಕೆ ನೀರು ಪೂರೈಸಲು ತೀವ್ರ ಸಮಸ್ಯೆಯಾಗಿದೆ. ಈ ನಡುವೆ ಬೋರ್‌ವೆಲ್ ಪಂಪ್‌ಗಳು ಕೈಕೊಡುತ್ತಿದ್ದರಿಂದ ಗ್ರಾಮಕ್ಕೆ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಕೆಲ ಬೋರ್‌ವೆಲ್‌ಗಳಲ್ಲಿ ನೀರಿದ್ದರೂ ನಲ್ಲಿಗಳಲ್ಲಿ ನೀರೇ ಬರುತ್ತಿಲ್ಲ. ಗೊಲ್ಲರು, ಕುರುಬರು, ಗಂಗಾಮತ ಹಾಗೂ ಮುಸ್ಲಿಮರು ವಾಸಿಸುವ ಓಣಿಗಳಲ್ಲಿ ನೀರಿನ ಅಭಾವ ಉಂಟಾಗಿದೆ.

ಅರ್ಧ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯ ಇರುವ ಪೈಪ್‌ಲೈನ್‌ನಲ್ಲಿ ನೀರು ಸರಬರಾಜು ಆಗುತ್ತಿಲ್ಲ. ಇದರಿಂದ ನೀರು ಬರುವಲ್ಲಿ ಹೋಗಿ ಬಿಂದಿಗೆ ತುಂಬಿಕೊಂಡು ಬರುವುದು ಅನಿವಾರ್ಯವಾಗಿದೆ. ಎರಡ್ಮೂರು ದಿನಗಳಿಂದ ಮೋಟಾರ್ ಸುಟ್ಟಿದ್ದರಿಂದ ಶಾಲೆ, ಗ್ರಾಮದಲ್ಲಿಯೂ ನೀರಿನ ಅಭಾವವಾಗಿದ್ದು, ನಮ್ಮೂರಿನ ನೀರಿನ ಸಮಸ್ಯೆಗೆ ಅಧಿಕಾರಿಗಳು ಶಾಶ್ವತ ಪರಿಹಾರ ನೀಡಬೇಕು ಎನ್ನುತ್ತಾರೆ ಗ್ರಾಮಸ್ಥ ನಾಗರಾಜ ಗುರುವಿನ್.

ಕಳೆದೆರೆಡು ದಿನಗಳಿಂದ ಬೋರ್‌ವೆಲ್ ಪಂಪ್ ಸುಟ್ಟಿದ್ದರಿಂದ ನೀರಿನ ಸಮಸ್ಯೆಯಾಗಿದೆ. ಈಗಾಗಲೇ ಪಂಪ್ ಸರಿಪಡಿಸಿ ನೀರು ಪೂರೈಸಲಾಗುತ್ತಿದೆ. ಅರ್ಧ ಗ್ರಾಮಕ್ಕೆ ನೀರು ಸರಬರಾಜು ಆಗದಿರುವ ಕುರಿತು ಭೇಟಿ ನೀಡಿ ಪರಿಶೀಲಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುವುದು ಎಂದು ತಾಪಂ ಇಒ ಟಿ. ರಾಜಶೇಖರ ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ