ಕೃಷ್ಣ ಎನ್. ಲಮಾಣಿ
ಹಂಪಿ ಮಹಾನವಮಿ ದಿಬ್ಬ ಹಂಪಿಯಲ್ಲಿ ನಡೆಯುತ್ತಿದ್ದ ನವರಾತ್ರಿ ಉತ್ಸವದ ಕುರುಹು ಆಗಿದೆ. ಸುಮಾರು 12 ಮೀಟರ್ ಎತ್ತರದ ಮಹಾನವಮಿ ದಿಬ್ಬವನ್ನು ದಸರಾ ದಿಬ್ಬ ಎಂದು ಕರೆಯಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ ಆಳರಸರ ಕಾಲದಲ್ಲಿ ನವರಾತ್ರಿ ಉತ್ಸವವನ್ನು ಈ ವೇದಿಕೆಯಲ್ಲೇ ನಡೆಸಲಾಗುತ್ತಿತ್ತು ಎಂದು ಆಗಿನ ವಿದೇಶಿ ರಾಯಭಾರಿಗಳು, ಪ್ರವಾಸಿಗರು ತಮ್ಮ ಪ್ರವಾಸ ಕಥನಗಳಲ್ಲಿ ಉಲ್ಲೇಖಿಸಿದ್ದಾರೆ.
ವಿಜಯನಗರ ಆಳರಸರ ಕಾಲದಲ್ಲಿ ಮಾಂಡಲೀಕರಾಗಿದ್ದ ಮೈಸೂರು ಅರಸರು, ಈ ಸಾಮ್ರಾಜ್ಯ ಪತನಗೊಂಡ ಬಳಿಕ ಮೈಸೂರಿನಲ್ಲಿ ನವರಾತ್ರಿ ಉತ್ಸವವನ್ನು ಪ್ರಾರಂಭಿಸಿದ್ದಾರೆ ಎಂಬುದು ಅಧ್ಯಯನಗಳಿಂದ ತಿಳಿದು ಬರುತ್ತದೆ.ವಿಜಯನಗರ ಸಾಮ್ರಾಜ್ಯದ ಆರಂಭಿಕ ಕಾಲದಿಂದಲೇ ನವರಾತ್ರಿ ಉತ್ಸವವನ್ನು ನಡೆಸಲಾಗುತ್ತಿತ್ತು. ಶ್ರೀಕೃಷ್ಣದೇವರಾಯನ ಕಾಲದಲ್ಲಿ ಈ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಮಹಾನವಮಿ ದಿಬ್ಬ ಹಾಗೂ ಹಜಾರರಾಮ ದೇಗುಲದ ಮೇಲೆ ಆಚರಣೆಯ ಕುರುಹುಗಳ್ಳುಳ್ಳ ಚಿತ್ರಗಳನ್ನು ಕೆತ್ತನೆ ಮಾಡಲಾಗಿದೆ. ಇನ್ನು ಅಕ್ಕ-ತಂಗಿಯರ ಗುಡ್ಡದ ಬಳಿಯ ಜಡೇಶಂಕರ್ ಹೆಬ್ಬಾಗಿಲಿನ ಮೇಲೆ ವಜ್ರಮುಷ್ಠಿ ಕಾಳಗದ ಕುರುಹುಗಳನ್ನು ಕೆತ್ತನೆ ಮಾಡಲಾಗಿದೆ.
ಮಹಾನವಮಿ ದಿಬ್ಬದ ವೇದಿಕೆಯ ಮೇಲೆ ವರ್ಣ ರಂಜಿತವಾದ ಅಲಂಕೃತವಾಗಿದ್ದ ಕಂಬಸಾಲುಗಳುಳ್ಳ ಹಜಾರವಿತ್ತೆಂದು ಹೇಳಲಾಗುತ್ತದೆ. ಇಡೀ ರಾಜಮನೆತನ ಸಂಭ್ರಮದಲ್ಲಿ ಭಾಗವಹಿಸುತ್ತಿತ್ತು. ರಾಜರು ಪ್ರಜೆಗಳೊಂದಿಗೆ ದಸರಾ ಹಬ್ಬವನ್ನು ಆಚರಣೆ ಮಾಡುತ್ತಿದ್ದುದು ವಿಶೇಷವಾಗಿತ್ತು. ವಿಜಯನಗರ ಸಾಮ್ರಾಜ್ಯ ಪತನದ ನಂತರ ಅಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ.
ಐತಿಹಾಸಿಕ ಮೈಸೂರು ದಸರೆಗೆ ಹಂಪಿಯ ಆಳರಸರ ಕಾಲದಲ್ಲಿನ ನವರಾತ್ರಿ ಉತ್ಸವವೇ ಪ್ರೇರಣೆಯಾಗಿದೆ. ಆಗಿನ ವಿದೇಶಿ ಪ್ರವಾಸಿಗರು ಹಾಗೂ ರಾಯಭಾರಿಗಳು ಹಂಪಿ ನವರಾತ್ರಿ ಉತ್ಸವದ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನುತ್ತಾರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ವಿರೂಪಾಕ್ಷಿ ಪೂಜಾರಹಳ್ಳಿ.