ಹಂಪಿ ಉತ್ಸವ: ಸರ್ಕಾರದಿಂದ ₹11 ಕೋಟಿ ಬಾಕಿ!

KannadaprabhaNewsNetwork | Published : Jul 6, 2024 12:50 AM

ಸಾರಾಂಶ

ಹಂಪಿ ಉತ್ಸವ ನಡೆದು ಆರು ತಿಂಗಳು ಕಳೆದರೂ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳು ಹಾಗೂ ಕಲಾವಿದರಿಗೆ ಗೌರವಧನ ಬಂದಿಲ್ಲ. ಸಣ್ಣಪುಟ್ಟ ವೇದಿಕೆ ನಿರ್ಮಿಸಿದವರಿಗೂ ಹಣ ಪಾವತಿಸುವುದು ಬಾಕಿ ಇದೆ.

ರಾಮಮೂರ್ತಿ ನವಲಿ

ಗಂಗಾವತಿ: ಹಂಪಿ ಉತ್ಸವ ನಡೆದು ಆರು ತಿಂಗಳು ಕಳೆದರೂ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳು ಹಾಗೂ ಕಲಾವಿದರಿಗೆ ಗೌರವಧನ ಬಂದಿಲ್ಲ. ಸಣ್ಣಪುಟ್ಟ ವೇದಿಕೆ ನಿರ್ಮಿಸಿದವರಿಗೂ ಹಣ ಪಾವತಿಸುವುದು ಬಾಕಿ ಇದೆ. ಸರ್ಕಾರದಿಂದ ಇನ್ನೂ ₹11 ಕೋಟಿ ಅನುದಾನ ಬರಬೇಕಾಗಿದೆ!

ವಿಜಯನಗರ ವೈಭವವನ್ನು ಮತ್ತೆ ಪುನರುತ್ಥಾನಗೊಳಿಸಿ, ಈ ಭಾಗದ ಕಲಾವಿದರಿಗೆ, ಸಾಹಿತಿಗಳಿಗೆ, ಕವಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿ ವರ್ಷ ಸರ್ಕಾರ ವಿಶ್ವ ವಿಖ್ಯಾತ ಹಂಪಿ ಉತ್ಸವ ಹಾಗೂ ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವ ಏರ್ಪಡಿಸುತ್ತಿದ್ದು, ಅದಕ್ಕಾಗಿ ಕೋಟ್ಯಂತರು ರು. ಖರ್ಚು ಮಾಡುತ್ತಿದೆ. ಆದರೆ ಸರ್ಕಾರ ಘೋಷಣೆ ಮಾಡಿದಷ್ಟು ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ಉತ್ಸವದಲ್ಲಿ ಭಾಗವಹಿಸಿದ್ದ ಕಲಾವಿದರು ಮತ್ತು ಕವಿಗಳು ಗೌರವಧನಕ್ಕಾಗಿ ಪರದಾಡುವ ಪ್ರಸಂಗ ಒದಗಿದೆ.

ಫೆಬ್ರುವರಿ 2ರಿಂದ 4ರ ವರೆಗೆ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜರುಗಿದ ವೇದಿಕೆಯಲ್ಲಿ ಮಕ್ಕಳ ಹಾಗೂ ಯುವ ಕವಿಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಕೊಪ್ಪಳ, ರಾಯಚೂರು, ಬಳ್ಳಾರಿ, ಹೊಸಪೇಟೆ, ಗಂಗಾವತಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 100ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು. ಮೂರು ದಿನಗಳ ಕಾಲ ವಿವಿಧ ವೇದಿಕೆಗಳಲ್ಲಿ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದವು. ಕವಿಗಳಿಗೆ, ಕಲಾವಿದರಿಗೆ ಗೌರವಧನ ಇನ್ನೂ ಮರೀಚಿಕೆಯಾಗಿ ಉಳಿದಿದೆ ಎಂಬ ಆರೋಪ ಕೇಳಿ ಬಂದಿದೆ.

₹11 ಕೋಟಿ ಬಾಕಿ:

ಹಂಪಿ ಉತ್ಸವಕ್ಕಾಗಿ ಸರ್ಕಾರ ಒಟ್ಟು ₹14 ಕೋಟಿ ಅನುದಾನ ಘೋಷಣೆ ಮಾಡಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಹಭಾಗಿತ್ವದಲ್ಲಿ ಉತ್ಸವ ಜರುಗಿತು. ಸರ್ಕಾರ ₹14 ಕೋಟಿಗಳಲ್ಲಿ ಕೇವಲ ₹3 ಕೋಟಿ ಅನುದಾನ ನೀಡಿದೆ. ಸಣ್ಣ ಪುಟ್ಟ ವೇದಿಕೆ ನಿರ್ಮಿಸಿದವರಿಗೆ ಅನುದಾನ ವಿಳಂಬವಾಗಿದೆ ಎನ್ನಲಾಗಿದೆ.

ಉತ್ಸವದಲ್ಲಿ ಭಾಗವಹಿಸಿದ್ದ ನೂರಾರು ಕವಿಗಳ ಅಂಕೆಸಂಖ್ಯೆ ಮತ್ತು ಲೆಕ್ಕಪತ್ರಗಳ ಬಗ್ಗೆ ಕವಿಗೋಷ್ಠಿಯ ನೋಡಲ್ ಅಧಿಕಾರಿಗಳು ಉತ್ಸವದ ಸಮಿತಿಯವರಿಗೆ ಸರಿಯಾಗಿ ಮಾಹಿತಿ ನೀಡದೇ ಇರುವುದರಿಂದ ಗೌರವಧನ ಬಂದಿಲ್ಲ. ಭಾಗವಹಿಸಿದ್ದ ಕವಿಗಳಿಗೆ ಗೌರವಧನಕ್ಕಾಗಿ ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಪರ್ಕಿಸುವ ಪ್ರಸಂಗ ಒದಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುತುವರ್ಜಿ ವಹಿಸಿದರೆ ಭಾಗವಹಿಸಿದ ಕವಿಗಳಿಗೆ ಗೌರವ ನೀಡಿದಂತಾಗುತ್ತದೆ ಎಂಬುದು ಕವಿಗಳ ಒತ್ತಾಯವಾಗಿದೆ.

ಹಂಪಿ ಉತ್ಸವದಲ್ಲಿ ನಡೆದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ ಕವಿಗಳಿಗೆ ಗೌರವಧನ ನೀಡಬೇಕಾಗಿದೆ. ಇನ್ನೂ ₹11 ಕೋಟಿ ಅನುದಾನ ಬರಬೇಕಾಗಿದ್ದು, ಖ್ಯಾತ ಕಲಾವಿದರು, ಕವಿಗಳಿಗೆ ಗೌರವಧನ ನೀಡಬೇಕಾಗಿದೆ. ಕವಿಗೋಷ್ಠಿಯ ನೋಡಲ್ ಅಧಿಕಾರಿಗಳು ಸರಿಯಾದ ಸಮಯಕ್ಕೆ ಲೆಕ್ಕಪತ್ರಗಳ ಮಾಹಿತಿ ನೀಡದ ಕಾರಣ ಗೌರವಧನ ಬಿಡುಗಡೆಯಾಗಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊಸಪೇಟೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್ ಹೇಳಿದರು.

ಹಂಪಿ ಉತ್ಸವಕ್ಕಾಗಿ ಈ ಮೊದಲು ಅನುದಾನ ನೀಡಿದೆ. ಬಹಳಷ್ಟು ಕವಿಗಳಿಗೆ ಮತ್ತು ಖ್ಯಾತ ಕಲಾವಿದರಿಗೆ ಗೌರವಧನ ನೀಡಿಲ್ಲ ಎಂಬ ಮಾಹಿತಿ ಬಂದಿದೆ. ಇನ್ನು 2-3 ದಿನಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

Share this article