ಕನ್ನಡಪ್ರಭ ವಾರ್ತೆ ಹಾನಗಲ್ಲ
ಹಾನಗಲ್ಲ ಪುರಸಭೆ ಮುಂದಿನ ವರ್ಷಕ್ಕಾಗಿ ₹೩೯.೮ ಕೋಟಿ ಮುಂಗಡ ಆಯವ್ಯಯ ಮಂಡಿಸಿತಾದರೂ ಮಂಡಿಸಿದ ಅಭಿವೃದ್ಧಿ ಕಾಮಗಾರಿ, ಸ್ವಚ್ಛತೆ ವಿಷಯದಲ್ಲಿ ಮುಖ್ಯಾಧಿಕಾರಿಗಳು ನಿರುತ್ತರವಾಗಿದ್ದರಿಂದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ಪುರಸಭೆ ಆಡಳಿತಾಧಿಕಾರಿ ಸವಣೂರು ಉಪವಿಭಾಗಾಧಿಕಾರಿ ಮೊಹಮ್ಮದ ಖೈಜರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂಗಡ ಆಯವ್ಯಯ ಮಂಡಿಸಲಾಯಿತು.
ಸಭೆಯಲ್ಲಿ ಸದಸ್ಯರು ಆಯವ್ಯಯಕ್ಕೆ ಒಪ್ಪಿಗೆ ನೀಡಿದರು. ಕಾರ್ಯ ಬಾಹುಳ್ಯದ ನಿಮಿತ್ತ ಸಭೆಯಿಂದ ನಿರ್ಗಮಿಸಿದ ಆಡಳಿತಾಧಿಕಾರಿ ಇತರ ವಿಷಯಗಳ ಚರ್ಚೆಗೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಅವರಿಗೆ ಸೂಚಿಸಿದರು.ನಂತರ ನಡೆದ ಚರ್ಚೆಯಲ್ಲಿ ಸದಸ್ಯ ನಾಗಪ್ಪ ಸವದತ್ತಿ, ಪುರಸಭೆಯ ಆದಾಯವನ್ನು ಅನಗತ್ಯ ಕೆಲಸಗಳಿಗೆ ಖರ್ಚು ಹಾಕಲಾಗುತ್ತಿದೆ. ವಿವಿಧ ಕಾರ್ಯಕ್ರಮ, ಉಪಾಹಾರದ ಹೆಸರಿನಲ್ಲಿ ಲಕ್ಷಾಂತರ ವೆಚ್ಚ ಮಾಡಲಾಗುತ್ತಿದೆ. ಮೊದಲೇ ಕೊರತೆ ಬಜೆಟ್‌ನಲ್ಲಿರುವ ಪುರಸಭೆ ಇಂತಹ ಖರ್ಚು ನಿಭಾಯಿಸುವುದು ಹೇಗೆ. ಮನೆ ಉತಾರ ಕೊಡಲು ಸತಾಯಿಸುತ್ತಿದ್ದೀರಿ. ಸಿಎ ಸೈಟ್ ಮಂಜೂರಿ ವಿಷಯದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರದೊಂದಿಗೆ ಚರ್ಚಿಸಿ ನಮ್ಮ ಬೇಡಿಕೆ ಹಾಗೂ ನಿಯಮಗಳ ಅಡಿಯಲ್ಲಿ ಮಂಜೂರು ಮಾಡಿ.ಇದರಿಂದ ಪುರಸಭೆಗೂ ಆದಾಯ ಸಾಧ್ಯ ಎಂದರು.
ಸದಸ್ಯೆ ಶೋಭಾ ಉಗ್ರಣ್ಣನವರ, ರಸ್ತೆ ಕಾಮಗಾರಿಗೆ ಪೂಜೆ ಮಾಡಿದರೇ ಮರಳಿ ಕಾಮಗಾರಿ ಮಾಡಲು ಬರುವುದೇ ಇಲ್ಲ. ರಸ್ತೆಯಲ್ಲಿ ಓಡಾಡದಂತಹ ಸ್ಥಿತಿ ಇದೆ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.ಪುರಸಭೆ ಸದಸ್ಯ ವಿರುಪಾಕ್ಷಪ್ಪ ಕಡಬಗೇರಿ ಹಾಗೂ ಜಮೀರ ಶೇಖ್, ಸ್ಲಂ ಬೋರ್ಡ್ ಯೋಜನೆ ಅಡಿ ೧ ಸಾವಿರ ಮನೆ ಮಂಜೂರಾಗಿವೆ. ಇವುಗಳ ಹೆಸರಿನಲ್ಲಿ ಊರಿನ ತುಂಬ ರಸ್ತೆ ಒಡೆದು, ಗಟಾರ ಮುಚ್ಚಿದ್ದರಿಂದ ನಳ ಬಂದಾಗಿವೆ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಈ ಮನೆ ನಿರ್ಮಾಣಕ್ಕೆ ಇರುವ ನಿಯಮ ಪಾಲಿಸಲು ಪುರಸಭೆ ಮುಂದಾಗಬೇಕು. ಇದರಲ್ಲಿ ಅಧಿಕಾರಿಗಳ ಪೂರ್ಣ ನಿರ್ಲಕ್ಷವಿದೆ ಎಂದು ದೂರಿದರು.
ಪುರಸಭೆ ಸದಸ್ಯೆ ವೀಣಾ ಗುಡಿ, ಅಕ್ರಮ ಕಟ್ಟಡಗಳ ಬಗ್ಗೆ ಕಳೆದ ಸಭೆಯಲ್ಲಿ ಗಂಭೀರ ಚರ್ಚೆಯಾಗಿದೆ. ಸಮಸ್ಯೆ ಪರಿಹರಿಸಿ ಅಕ್ರಮ ಕಟ್ಟಡ ತೆರವುಗೊಳಿಸುವ ಭರವಸೆ ನೀಡಿದ್ದೀರಿ. ಈವರೆಗೂ ಏನೂ ಆಗಿಲ್ಲ. ಇದು ಸರಿಯಾದ ಕ್ರಮವಲ್ಲ. ಇದಕ್ಕೆ ಉತ್ತರಿಸುವಂತೆ ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.ಸದಸ್ಯ ಅನಂತವಿಕಾಸ ನಿಂಗೋಜಿ, ಮಮತಾ ಆರೇಗೊಪ್ಪ, ಜನರು ಪಟ್ಟಣದಲ್ಲಿ ಕುಡಿಯುವ ನೀರನ್ನು ಮನೆ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬರಗಾಲದಲ್ಲಿ ನೀರಿನ ಕೊರತೆ ಇದೆ. ನೀರು ಪೋಲಾಗುತ್ತಿದೆ. ಅಧಿಕಾರಿಗಳೇ ಏನು ಮಾಡುತ್ತಿರುವಿರಿ ಎಂದು ಪ್ರಶ್ನಿಸಿದರು.
ಇಡೀ ಸಭೆ ಪ್ರಶ್ನೆಗಳಿಂದ ಕೂಡಿತ್ತು. ಉತ್ತರಗಳು ಮಾತ್ರ ಸದಸ್ಯರಿಗೆ ಯಾವುದೇ ರೀತಿಯ ವಿಶ್ವಾಸ ಮೂಡಿಸಲಿಲ್ಲ. ಒಂದು ಸಂದರ್ಭದಲ್ಲಿ ಮುಂಗಡ ಬಜೆಟ್ ವಿಷಯದಲ್ಲಿ ಸದಸ್ಯರೊಂದಿಗೆ ಚರ್ಚಿಸದೆ ನಿರ್ಣಯ ತೆಗೆದುಕೊಂಡಿದ್ದು ತಪ್ಪು. ನಾವು ಒಪ್ಪಿಗೆ ನೀಡಿದ್ದೇವೆ. ಆದರೆ ಇದಕ್ಕೆ ಸಂಬಂಧಿಸಿದ ವಿವರ ನೀಡಲಿಲ್ಲ ಎಂದು ಸದಸ್ಯ ಜಮೀರ ಶೇಖ ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ನೀವು ಕೇಳಿದರೆ ನಾವು ವಿವರಣೆ ನೀಡುತ್ತೇವೆ ಎಂದಷ್ಟೇ ಮುಖ್ಯಾಧಿಕಾರಿ ತಿಳಿಸಿದರು. ಪ್ರಶ್ನೆಗಳ ಗೊಂದಲದಲ್ಲಿಯೇ ಸಭೆ ಮುಕ್ತಾಯವಾಯಿತು.೨೩ಎಚ್‌ಎನ್‌ಎಲ್೨
ಹಾನಗಲ್ಲ ಪುರಸಭೆಯಲ್ಲಿ ಮುಂಗಡ ಬಜೆಟ್ ಪ್ರತಿಯೊಂದಿಗೆ ಅಧಿಕಾರಿಗಳು, ಸದಸ್ಯರು.