ಮುಡಾ ಹಗರಣ ಸಿಬಿಐಗೆ ಕೊಡಿ: ಕೇಂದ್ರ ಸಚಿವ ಜೋಶಿ ಆಗ್ರಹ

KannadaprabhaNewsNetwork | Published : Jul 7, 2024 1:21 AM

ಸಾರಾಂಶ

ಮುಡಾ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮುಡಾ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಆಗಿದೆ. ಸಿದ್ದರಾಮಯ್ಯನವರ ಗಮನಕ್ಕೆ ಇದ್ದೇ ಆಗಿರುವ ಹಗರಣವಿದು. ಇದು ನಿರ್ಧಾರವಾಗಿದ್ದು 2017ರಲ್ಲಿ ಎಂದರು.

ಸಿದ್ದರಾಮಯ್ಯ ಏನು ಮಾಡಿಲ್ಲ ಎಂದಾದರೆ ತರಾತುರಿಯಲ್ಲಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದ್ದು ಏಕೆ? ಸಿಎಂ ಸಿದ್ದರಾಮಯ್ಯ ಮತ್ತು ಅವರ ಮಗನ ಅನುಮತಿ ಇಲ್ಲದೇ ಇದು ನಡೆಯಲು ಸಾಧ್ಯವೇ ಇಲ್ಲ. ಸ್ವಂತಕ್ಕೆ ಲಾಭ ಮಾಡಿಕೊಳ್ಳಲು ನಡೆದ ದೊಡ್ಡ ಪ್ರಮಾಣದ ಭ್ರಷ್ಟಾಚಾರವಿದು. ಹೀಗಾಗಿ ಇದನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಮುಡಾ ಮತ್ತು ಎಸ್ಸಿ-ಎಸ್ಟಿ ಹಗರಣದಲ್ಲಿ ನೇರವಾಗಿ ಸಿಎಂ ಭಾಗಿಯಾಗಿದ್ದಾರೆ ಎನ್ನುವುದು ನನ್ನ ನೇರವಾದ ಆರೋಪ ಎಂದ ಅವರು, ಪ್ರಕರಣ ಮುಚ್ಚಿಹಾಕಲು ತರಾತುರಿಯಲ್ಲಿ ಒಂದಿಷ್ಟು ಬಂಧನ ಆಗುತ್ತಿದೆ. ಇಷ್ಟು ದಿನ ಮಾಜಿ ಸಚಿವ ನಾಗೇಂದ್ರ ತಪ್ಪಿಸಿಕೊಳ್ಳಲು ಅವಕಾಶ ನೀಡಿ ಈಗ ನೋಟಿಸ್ ನೀಡಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯರದ್ದು ಅತ್ಯಂತ ಭ್ರಷ್ಟ ಸರ್ಕಾರ. ಭ್ರಷ್ಟಾಚಾರ ನಡೆಸಲು ಹೊಸ ಹೊಸ ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯತ್ತ ಸಾಗುತ್ತಿದೆ. ಇದರಲ್ಲೂ ಭ್ರಷ್ಟಾಚಾರ ಹೇಗೆ ಮಾಡಬೇಕು ಅಂತ ಮುಖ್ಯಮಂತ್ರಿಗಳಿಗೆ ಗೊತ್ತು. ಬಣವೆಗೆ ಬೆಂಕಿ ಬಿದ್ದಾಗ ಬೀಡಿ ಅಥವಾ ಸಿಗರೇಟ್‌ ಹೇಗೆ ಹಚ್ಚಬೇಕು ಎನ್ನುವುದು ಸಿದ್ದರಾಮಯ್ಯಗೆ ಚೆನ್ನಾಗಿ ಗೊತ್ತು ಎಂದು ವ್ಯಂಗ್ಯವಾಡಿದರು.ಆರೋಪ ಮುಕ್ತರಾಗಿ ಅಹಿಂದ ಶಕ್ತಿ ಪ್ರದರ್ಶಿಸಿ

ಸಿದ್ದರಾಮಯ್ಯ ತಮ್ಮ ಸ್ವಾರ್ಥಕ್ಕೆ ಸಮಾಜವನ್ನು ಬಳಸಿಕೊಳ್ಳುತ್ತಿದ್ದಾರೆ. ಸಿಎಂ ಸ್ಥಾನಕ್ಕೆ ಯಾರು ಟವಲ್‌ ಹಾಕಿದ್ದಾರೋ ಗೊತ್ತಿಲ್ಲ. ಸಿಎಂ ವಿರುದ್ಧ ಡಿಸಿಎಂ, ಡಿಸಿಎಂ ವಿರುದ್ಧ ಸಿಎಂ ಪರಸ್ಪರ ಬತ್ತಿ ಇಡುವ ಕಾರ್ಯ ಮೊದಲಿನಿಂದಲೂ ಇದೆ ಎಂದು ಜೋಶಿ ಹೇಳಿದರು.

ಕಾಂಗ್ರೆಸ್ಸಿನಲ್ಲಿ ಆಂತರಿಕ ಕಚ್ಚಾಟ ಮೊದಲಿನಿಂದಲೂ ಇದೆ. ಆದರೆ ತಮ್ಮ ಸ್ವಾರ್ಥಕ್ಕೆ ಸಮಾಜವನ್ನು ಬಳಸಿಕೊಳ್ಳಬಾರದು. ದುಡ್ಡು ಕೊಟ್ಟು ಜನರನ್ನು ಕರೆಯಿಸಿ ಯಾರು ಬೇಕಾದರೂ ಶಕ್ತಿ ಪ್ರದರ್ಶನ ಮಾಡಬಹುದು. ಅಹಿಂದ ಬಳಸಿಕೊಂಡು ಶಕ್ತಿ ಪ್ರದರ್ಶನ ಮಾಡಬಹುದು ಎಂದು ಸಿಎಂ ಯೋಚನೆ ಮಾಡುತ್ತಿದ್ದಾರೆ. ಹೀಗೆ ಅಹಿಂದ ಶಕ್ತಿ ಪ್ರದರ್ಶನ ಮಾಡುವ ಬದಲು ನಿಮ್ಮ ಮೇಲಿನ ಹಗರಣ ಆರೋಪಗಳಿಂದ ಮುಕ್ತರಾಗಲಿ. ಆಮೇಲಷ್ಟೇ ಸಮಾವೇಶ ಮಾಡಬೇಕು ಎಂದು ಸಲಹೆ ಮಾಡಿದರು.

Share this article