ಜಿಲ್ಲೆ ರಾಜಕೀಯದಲ್ಲಿ ಕಲಬುರಗಿ ನಾಯಕರ ಮೇಲು ಕೈ

KannadaprabhaNewsNetwork | Published : Mar 2, 2024 1:48 AM

ಸಾರಾಂಶ

ಜಿಲ್ಲೆ ರಾಜಕೀಯದ ಮೇಲೆ ಕಲಬುರಗಿ ನಾಯಕರು ಹಿಡಿತ ಸಾಧಿಸುತ್ತಿದ್ದಾರೆ ಎನ್ನುವ ಮಾತು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ರಾಜ್ಯ ಸರ್ಕಾರ ವಿವಿಧ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ 44 ಮಂದಿ ಕಾಂಗ್ರೆಸ್‌ ಕಾರ್ಯಕರ್ತರ ನೇಮಕಾತಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಡಿಸಿದ ಅಧಿಕೃತ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯಿಂದ ರಾಜಶೇಖರ ರಾಮಸ್ವಾಮಿ ಅವರಿಗೆ ಜೈವಿಕ ಇಂಧನ ಮಂಡಳಿ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.

ರಾಮಕೃಷ್ಣ ದಾಸರಿ

ರಾಯಚೂರು: ಜಿಲ್ಲೆ ರಾಜಕೀಯದ ಮೇಲೆ ಕಲಬುರಗಿ ನಾಯಕರು ಹಿಡಿತ ಸಾಧಿಸುತ್ತಿದ್ದಾರೆ ಎನ್ನುವ ಮಾತು ಇದೀಗ ಮತ್ತೊಮ್ಮೆ ಸಾಬೀತಾಗಿದೆ.

ರಾಜ್ಯ ಸರ್ಕಾರ ವಿವಿಧ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ 44 ಮಂದಿ ಕಾಂಗ್ರೆಸ್‌ ಕಾರ್ಯಕರ್ತರ ನೇಮಕಾತಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಡಿಸಿದ ಅಧಿಕೃತ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯಿಂದ ರಾಜಶೇಖರ ರಾಮಸ್ವಾಮಿ ಅವರಿಗೆ ಜೈವಿಕ ಇಂಧನ ಮಂಡಳಿ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.

ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆ ಮೇರೆಗೆ 24 ಗಂಟೆಯಲ್ಲಿ ಆದೇಶ ಬದಲಿಸಿ ಅವರನ್ನು ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇದು ಸ್ಥಳೀಯ ಕೈ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಆಡಳಿತ ನಡೆಸುತ್ತಿರುವ ಸಮಯದಲ್ಲಿ ರಾಯಚೂರು ಜಿಲ್ಲೆಯ ರಾಜಕೀಯದಲ್ಲಿ ಕಲಬುರಗಿ ನಾಯಕರು ಕೈ ಹಾಕುತ್ತಿದ್ದು, ಇದಕ್ಕೆ ಡಿಸಿಸಿಯಲ್ಲಿನ ಗುಂಪು ಸಂಘರ್ಷವೇ ಮುಖ್ಯ ಕಾರಣವೆಂದು ಕೈ ಕಾರ್ಯಕರ್ತರು ಕಸಿವಿಸಿಯನ್ನು ಹೊರಹಾಕುತ್ತಿದ್ದಾರೆ.

ವಿಧಾನಸಭಾ ಚುನಾವಣೆ ಸಮಯದಲ್ಲಿಯೂ ರಾಯಚೂರು ನಗರ ಕ್ಷೇತ್ರ ಸೇರಿ ವಿವಿಧ ಕಡೆ ಟಿಕೆಟ್‌ ಹಂಚಿಕೆಯಲ್ಲಿಯೂ ಕಲಬುರಗಿ ನಾಯಕರು ನಡುವೆ ಪ್ರವೇಶಿಸಿದ್ದರು. ಬಳಿಕ ಜಿಲ್ಲೆಯವರೇ ಆದ ಎನ್‌.ಎಸ್‌.ಬೋಸರಾಜು ಸಂಪುಟದಲ್ಲಿ ಸ್ಥಾನ ಪಡೆದಿದ್ದು, ಅವರಿಗೆ ರಾಯಚೂರು ಜಿಲ್ಲೆಯ ಉಸ್ತುವಾರಿ ವಹಿಸಬೇಕೆಂಬ ಒತ್ತಾಸೆ ಜನಸಾಮಾನ್ಯರು ವ್ಯಕ್ತಪಡಿಸಿದರು. ಆದರೆ ಕಲಬುರಗಿ ಜಿಲ್ಲೆ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಅವರಿಗೆ ರಾಯಚೂರು ಉಸ್ತುವಾರಿ ವಹಿಸಲಾಯಿತು. ಇದೀಗ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನದ ಮೇಲೆ ಅಲ್ಪಸಂಖ್ಯಾತರು ಸೇರಿ ಹಿರಿಯ ಮುಖಂಡರು ಕಣ್ಣಿಟ್ಟಿದ್ದರು. ರಾಜಶೇಖರ ರಾಮಸ್ವಾಮಿ ಅವರಿಗೆ ನೀಡಿದ್ದ ಜೈವಿಕ ಇಂಧನ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಒಂದೇ ದಿನದಲ್ಲಿ ಆದೇಶ ಬದಲಿಸಿ ಅವರಿಗೆ ಆರ್‌ಡಿಎ ಪಟ್ಟ ಕಟ್ಟಿಕೊಟ್ಟಿರುವುದು ಆ ಸ್ಥಾನದ ಮೇಲೆ ಕಣ್ಣೀಟ್ಟವರಲ್ಲಿ ಅಸಮಧಾನ ಮೂಡಿಸಿದೆ.

ನಾಲ್ವರಿಗೆ ಆದ್ಯತೆ: ನಿಗಮ-ಮಂಡಳಿಗೆ ಜಿಲ್ಲೆಯ ನಾಲ್ವರಿಗೆ ಆದ್ಯತೆ ನೀಡಿರುವುದು ಸಮಧಾನಕರ ಸಂಗತಿ. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ ಅವರಿಗೆ ರಾಜ್ಯ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ರಾಜ್ಯ ಕೈಗಾರಿಕಾ ಮೂಲ ಸವಲತ್ತು ಅಭಿವೃದ್ಧಿ ನಿಗಮ ಹಾಗೂ ಮಸ್ಕಿ ಶಾಸಕ ಆರ್‌.ಬಸನಗೌಡ ತುರ್ವಿಹಾಳ ಅವರಿಗೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇದೀಗ ಪಕ್ಷದ ಕಾರ್ಯಕರ್ತ ರಾಜಶೇಖರ ರಾಮಸ್ವಾಮಿ ಅವರಿಗೆ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿರುವುದು ಸ್ವಾಗತಾರ್ಹವಾದರೂ ಕಲಬುರಗಿ ನಾಯಕರು ಪದೇ ಪದೆ ರಾಯಚೂರು ಜಿಲ್ಲೆಯ ರಾಜಕೀಯದಲ್ಲಿ ಮೂಗು ತೂರಿಸುತ್ತಿರುವುದು ಸರಿಯಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್‌ ಹಿರಿಯ ಮುಖಂಡರು ತೀವ್ರ ಅಸಮಧಾನ ಹೊರಹಾಕಿದ್ದಾರೆ.

Share this article