ಕನ್ನಡಪ್ರಭ ವಾರ್ತೆ ಚನ್ನಗಿರಿ
78ನೇ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ತಾಲೂಕು ಬಿಜೆಪಿ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಬುಧವಾರ ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು.ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ದೇಶವನ್ನು 70 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದ ಕಾಂಗ್ರೆಸ್ಸಿಗರು ಕಾಶ್ಮೀರಕ್ಕೆ ಪ್ರತ್ಯೇಕ ಕಾನೂನು ಮಾಡಿ ಭಾರತವನ್ನು ವಿಭಜಿಸಿದ್ದರು. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ತೆರವುಗೊಳಿಸಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತವನ್ನು ಒಗ್ಗೂಡಿಸಿದರು ಎಂದರು.
ಕಾಂಗ್ರೆಸ್ಸಿಗರು 70 ವರ್ಷ ಆಳ್ವಿಕೆ ಮಾಡಿದರೂ ದೇಶದಲ್ಲಿ ಯಾವುದೇ ಅಭಿವೃದ್ಧಿ ಸಾಧನೆ ತೋರಿಲ್ಲ. ಗಾಂಧಿ ಹೆಸರನ್ನು ಬಳಸಿಕೊಂಡು ಒಂದೇ ಕುಟುಂಬದವರು ಈ ದೇಶ ಆಳ್ವಿಕೆ ಮಾಡುತ್ತಿದ್ದರು. ಈ ದೇಶದ ಸಂವಿಧಾನದ ಆಶಯಕ್ಕೆ ಗೌರವ ಸಿಕ್ಕಿದ್ದು ನ.ಮೋ. ಅವರು ಪ್ರಧಾನಿಯಾದ ಮೇಲೆಯೇ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ. ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ್ದ ಭರವಸೆಗಳಿಗೆ ಹಣ ತುಂಬಲು ಪರಿಶಿಷ್ಟ ಜಾತಿ, ಪಂಗಡದ ಜನರ ಅಭಿವೃದ್ಧಿ ಇಟ್ಟಿದ್ದ ಹಣವನ್ನೇ ಬಳಕೆ ಮಾಡುತ್ತಿರುವುದು ರಾಜ್ಯದ ಜನತೆ ದುರಂತವಾಗಿದೆ ಎಂದರು.ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತರಕಾರಿ ಮಂಜುನಾಥ್, ಕುಬೇಂದ್ರೋಜಿ ರಾವ್, ಕಿರಣ್ ಕೋರಿ, ಮಂಗೇನಹಳ್ಳಿ ಲೋಹಿತ್, ಪಟ್ಲಿ ನಾಗರಾಜ್, ಕೆ.ಆರ್. ಗೋಪಿ, ಮಾಲತೇಶ್, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
- - --13ಕೆಸಿಎನ್ಜಿ3.ಜೆಪಿಜಿ: 78ನೇ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ಚನ್ನಗಿರಿ ತಾಲೂಕು ಬಿಜೆಪಿ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನದಡಿ ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು.