ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡಗಿನ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರವಾಸಿಗರಿಗೆ ಮತ್ತಷ್ಟು ಮನರಂಜನೆ ನೀಡಲು ಹಾರಂಗಿ ಜಲಾಶಯದ ಹಿನ್ನೀರಿನಲ್ಲಿರುವ ಆನೆ ಕ್ಯಾಂಪ್ ಬಳಿ ಜಲ ಸಾಹಸ ಕ್ರೀಡೆ ಆರಂಭಿಸಲಾಗಿದ್ದು, ಗುರುವಾರ ಚಾಲನೆ ದೊರೆಯಲಿದೆ. ಇದರಿಂದ ಕೊಡಗಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಮೆರುಗು ದೊರೆಯಲಿದೆ. ರಾಜ್ಯ ಸರ್ಕಾರ ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಯಮಿತ ಮೂಲಕ ಏಸ್ ಪ್ಯಾಡ್ಲರ್ಸ್ ಪ್ರೈಲಿ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಜಲ ಕ್ರೀಡೆ ನಡೆಸಲಾಗುತ್ತಿದೆ. ಹಾರಂಗಿ ಜಲಾಶಯ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈಗಾಗಲೇ ಹಾರಂಗಿ ಹಿನ್ನೀರಿನಲ್ಲಿ 2022ರ ಅಕ್ಟೋಬರ್ ತಿಂಗಳಲ್ಲಿ ಆನೆ ಶಿಬಿರ ಆರಂಭವಾಗಿದೆ. ಇದರೊಂದಿಗೆ ಟ್ರೀಪಾರ್ಕ್ ಕೂಡ ಲೋಕಾರ್ಪಣೆಗೊಂಡಿತ್ತು. ಇದೀಗ ಜಲ ಸಾಹಸ ಕ್ರೀಡೆ ಹಾಗೂ ಸಾಹಸ ಪ್ರವಾಸೋದ್ಯಮ ಚಟುವಟಿಕೆ ಆರಂಭವಾಗಿರುವುದು ಪ್ರವಾಸಿಗರ ಮನರಂಜನೆಗೆ ಮತ್ತಷ್ಟು ಅವಕಾಶ ನೀಡಿದಂತಾಗಿದೆ. ಸಾಹಸ ಜಲ ಕ್ರೀಡೆಯಲ್ಲಿ ಮುಖ್ಯ ಆಕರ್ಷಣೆಯಾಗಿ ಸ್ಪೀಡ್ ಬೋಟ್, ಬನಾನ ರೈಡ್, ಕಯಾಕಿಂಗ್, ಬಂಪರ್ ರೈಡ್, ಝಾರ್ಬಿಂಗ್ ಹಾಗೂ ಸ್ಟಿಲ್ ವಾಟರ್ ರ್‍ಯಾಫ್ಟಿಂಗ್ ಕೂಡ ಇರಲಿದೆ. ಈಗಾಗಲೇ ಖಾಸಗಿ ಸಂಸ್ಥೆಯಿಂದ ಸಂಪೂರ್ಣ ಕೆಲಸಗಳು ಆಗಿದ್ದು, ಪ್ರವಾಸಿಗರಿಗಾಗಿ ಶೌಚಾಲಯ, ಟಿಕೆಟ್ ಕೌಂಟರ್ ಸೇರಿದಂತೆ ವಿವಿಧ ಮೂಲ ಸೌಕರ್ಯ ವ್ಯವಸ್ಥೆ ಮಾಡಲಾಗಿದೆ.ಈ ಹಿಂದೆ ಆನೆ ಕ್ಯಾಂಪ್ ಹಿನ್ನೀರು ಪ್ರದೇಶದಲ್ಲಿ ಸೂರ್ಯಾಸ್ತ ವೀಕ್ಷಿಸಲು ವ್ಯೂ ಪಾಯಿಂಟ್ ಸಿದ್ಧಪಡಿಸಿ ಪ್ರವಾಸಿಗರಿಗೆ ಕುಳಿತುಕೊಳ್ಳಲು ಬೆಂಚ್‌ಗಳನ್ನು ಹಾಕಲಾಗಿದೆ. ಜಲ ಕ್ರೀಡೆಗಳಿಗೆ ದರ ನಿಗದಿ ಪಡಿಸಲಾಗಿದೆ. ಇಲ್ಲಿ ಟಿಕೆಟ್ ಪಡೆದ ನಂತರ ಲೈಫ್ ಜಾಕೆಟ್ ಹಾಕಿಕೊಂಡ ನಂತರವಷ್ಟೇ ಹಿನ್ನೀರಿನ ಬಳಿ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ಸಾಹಸ ಕ್ರೀಡೆ ನಡೆಸಲಾಗುತ್ತದೆ. 1.5 ಕೋಟಿ ರು ವೆಚ್ಚದ ಯೋಜನೆ:
ಹಾರಂಗಿ ಹಿನ್ನೀರಿನಲ್ಲಿ ಸಾಹಸ ಜಲ ಕ್ರೀಡೆಗೆ ಸಂಬಂಧಿಸಿದ ಬೋಟ್ ಗಳು, ಮೂಲ ಸೌಕರ್ಯ ಮತ್ತಿತರ ಕೆಲಸಗಳಿಗೆ ಏಸ್ ಪ್ಯಾಡ್ಲರ್ಸ್ ಪ್ರೈಲಿ ಸಂಸ್ಥೆ ರು.40 ಲಕ್ಷ ವೆಚ್ಚ ತಗುಲುತ್ತದೆ ಅಂದಾಜಿಸಲಾಗಿತ್ತು. ಆದರೆ ಈ ಜಲ ಕ್ರೀಡೆ ಯೋಜನೆಗೆ ಸುಮಾರು 1.5 ಕೋಟಿ ರುಪಾಯಿ ವೆಚ್ಚ ಆಗಿದ್ದು, ಇನ್ನೂ ಖರ್ಚಾಗುವ ಸಾಧ್ಯತೆಯಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.ಏಸ್ ಪ್ಯಾಡ್ಲರ್ಸ್ ಪ್ರೈಲಿ ಸಂಸ್ಥೆ ಹಲವು ಕಡೆಗಳಲ್ಲಿ ಜಲ ಸಾಹಸ ಕ್ರೀಡೆ ಹಾಗೂ ಸಾಹಸ ಪ್ರವಾಸೋದ್ಯಮ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದೆ. ಕೊಡಗು ಜಿಲ್ಲೆಯ ಬರಪೊಳೆಯಲ್ಲಿ 2007ರಲ್ಲಿ ರ್‍ಯಾಫ್ಟಿಂಗ್ ಕೂಡ ಆರಂಭಿಸಿದೆ. ---------------ಪೆಟ್ರೋಲ್ ಎಂಜಿನ್ ಮಾತ್ರ ಬಳಕೆ ಹಾರಂಗಿ ಹಿನ್ನೀರಿನಲ್ಲಿ ಆರಂಭಗೊಳ್ಳುತ್ತಿರುವ ಜಲ ಸಾಹಸ ಕ್ರೀಡೆಯಲ್ಲಿ ಪೆಟ್ರೋಲ್ ಎಂಜಿನ್ ಬೋಟ್ ಗಳನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ. ಇದರಿಂದ ಜಲ ಮಾಲಿನ್ಯ ಉಂಟಾಗುವುದಿಲ್ಲ. ಬೋಟ್ ಮೋಟಾರ್ ಗಳು ಚಲಿಸಿದರೆ ಇದರಿಂದ ಅಲ್ಲಿನ ಮೀನುಗಳಿಗೆ ಆಕ್ಸಿಜನ್ ಕೂಡ ದೊರಕಿದಂತಾಗುತ್ತದೆ ಎಂದು ಸಂಸ್ಥೆಯ ಪ್ರಮುಖರು ಹೇಳುತ್ತಾರೆ.---------
12 ಕಿ.ಮೀ. ಬೋಟಿಂಗ್ ಗೆ ಅವಕಾಶ ಪ್ರವಾಸಿಗರು ಹೆಚ್ಚು ದೂರ ಬೋಟಿಂಗ್ ಮಾಡಲು ಇಚ್ಚಿಸಿದಲ್ಲಿ ಹಾರಂಗಿ ಹಿನ್ನೀರಿನ ಸುಮಾರು 12 ಕಿ.ಮೀ. ವರೆಗೆ ಬೋಟಿಂಗ್ ಅವಕಾಶ ನೀಡಲಾಗಿದೆ. ಹಾರಂಗಿ ಹಿನ್ನೀರಿನ ಪ್ರದೇಶವಾದ ನಾಕೂರು ಶಿರಂಗಾಲ, ಹೇರೂರು, ಗರಗಂದೂರು ಸೇತುವೆ ವರೆಗೂ ಬೋಟಿಂಗ್ ಗೆ ಅನುಮತಿ ಪಡೆದುಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಮುಖರು ಮಾಹಿತಿ ನೀಡಿದ್ದಾರೆ. ---------ಹಾರಂಗಿ ಹಿನ್ನೀರಿನಲ್ಲಿ ರು.1.5 ಕೋಟಿ ವೆಚ್ಚದಲ್ಲಿ ಜಲ ಸಾಹಸ ಕ್ರೀಡೆಗಳು ಮತ್ತು ಸಾಹಸ ಪ್ರವಾಸೋದ್ಯಮ ಚಟುವಟಿಕೆ ನಡೆಸಲಾಗುತ್ತಿದೆ. ಗುರುವಾರ ಇದಕ್ಕೆ ಚಾಲನೆ ದೊರೆಯಲಿದೆ. ಈಗಾಗಲೇ ಪ್ರವಾಸಿಗರಿಗೆ ಮೂಲ ಸೌಕರ್ಯ ವ್ಯವಸ್ಥೆ ಕೂಡ ಮಾಡಲಾಗಿದೆ. ಸ್ಪೀಡ್ ಬೋಟ್, ಬನಾನ ರೈಡ್, ಕಯಾಕಿಂಗ್, ಬಂಪರ್ ರೈಡ್, ಝಾರ್ಬಿಂಗ್ ಹಾಗೂ ಸ್ಟಿಲ್ ವಾಟರ್ ರ್‍ಯಾಫ್ಟಿಂಗ್ ಕೂಡ ಇರಲಿದೆ.-ಸೌಮ್ಯ ಎಚ್.ಎಸ್. ನಿರ್ದೇಶಕರು, ಏಸ್ ಪ್ಯಾಡ್ಲರ್ಸ್.
-----------ರಾಜ್ಯದ 24 ಕಡೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸಾಹಸ ಜಲ ಕ್ರೀಡೆಗೆ ಖಾಸಗಿ ಸಹಭಾಗಿತ್ವದಲ್ಲಿ ಮಾಡಲಾಗುತ್ತದೆ. ಇದೀಗ ಕೊಡಗಿನ ಹಾರಂಗಿ ಜಲಾಶಯದ ಹಿನ್ನೀರಿನಲ್ಲೂ ಖಾಸಗಿ ಸಂಸ್ಥೆಯಿಂದ ಜಲ ಕ್ರೀಡೆ ಆರಂಭವಾಗಿದ್ದು, ಇದು ಕೊಡಗಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಮೆರುಗು ನೀಡಿದಂತಾಗುತ್ತದೆ. ಪ್ರವಾಸಿಗರ ಮನರಂಜನೆಗೆ ಅನುಕೂಲವಾಗಲಿದೆ. -ಅನಿತಾ, ಉಪ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ.