ಬಿ. ರಾಮಪ್ರಸಾದ್ ಗಾಂಧಿ
ಹೌದು, ಪಟ್ಟಣದ ಹರಿಹರ-ಹೊಸಪೇಟೆ ರಸ್ತೆಗೆ ಹೊಂದಿಕೊಂಡಿರುವ ಕಲ್ಯಾಣ ಕನಾಟಕ ಸಾರಿಗೆ ನಿಗಮ ಹೊಸಪೇಟೆ ವಿಭಾಗಕ್ಕೆ ಒಳಪಟ್ಟಿರುವ ಹರಪನಹಳ್ಳಿ ಬಸ್ ನಿಲ್ದಾಣವು ಮೂಲಸೌಲಭ್ಯದ ಕೊರತೆಯಿಂದ ಬಳಲುತ್ತಿದೆ.
40 ವರ್ಷಗಳ ಹಿಂದೆ ಆರಂಭವಾದ ಈ ಬಸ್ ನಿಲ್ದಾಣವು ಹಲವು ವರ್ಷಗಳಿಂದ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುತ್ತ ಬಂದಿದೆಯಾದರೂ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಇದುವರೆಗೂ ಸಾಧ್ಯವಾಗುತ್ತಿಲ್ಲ.ರಾಯಚೂರು, ಗದಗ, ದಾವಣಗೆರೆ, ಬಳ್ಳಾರಿ, ಕಲುಬುರಗಿ, ಧರ್ಮಸ್ಥಳ, ಬೆಂಗಳೂರು ಸೇರಿದಂತೆ ವಿವಿಧ ಕಡೆಯಿಂದ ನಿತ್ಯ 425ಕ್ಕೂ ಹೆಚ್ಚು ಬಸ್‌ಗಳ ಸಂಚರಿಸುತ್ತವೆ. 5 ಸಾವಿರಕ್ಕೂ ಹೆಚ್ಚು ಪ್ರಯಾಣಿಕರಿಗೆ ಬಂದು ಹೋಗುತ್ತಾರೆ. ಆದರೆ ಇಲ್ಲಿ ಪ್ರಯಾಣಿಕರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ನಿಲ್ದಾಣದಲ್ಲಿ ಎರಡು ಕುಡಿಯುವ ನೀರಿನ ಘಟಕಗಳಿದ್ದರೂ ಬಂದ್ ಆಗಿವೆ. ಇದರಿಂದ ಪ್ರಯಾಣಿಕರು ಹಣ ಕೊಟ್ಟು ನೀರು ಖರೀದಿಸಬೇಕಾದ ಅನಿವಾರ್ಯತೆ ಬಂದೊದಗಿದೆ.
ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮಾಯವಾಗಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ಬಸ್ ನಿಲ್ದಾಣದಲ್ಲಿ ರಾತ್ರಿ ವಸತಿ ಮಾಡುವ ಸಾರಿಗೆ ಸಿಬ್ಬಂದಿ ಬಸ್‌ನಲ್ಲೇ ಮಲಗುವುದು ಅನಿವಾರ್ಯವಾಗಿದೆ.
ನಿಲ್ದಾಣದಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ಇದ್ದರೂ ಸ್ವಚ್ಛತೆ ಇಲ್ಲದೇ ದುರ್ವಾಸನೆಯಿಂದ ಕೂಡಿವೆ. ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ. ಸರಿಯಾದ ನಿರ್ವಹಣೆ ಇಲ್ಲದೇ ಕೆಲ ಶೌಚಾಲಯದ ಬಾಗಿಲುಗಳು ಸಹ ಮುರಿದು ಹೋಗಿವೆ.
ಶಿವಮೊಗ್ಗದಿಂದ ಪ್ರಯಾಣ ಮಾಡಿ ಬಂದಿದ್ದೆ. ಬಾಯಾರಿಕೆಯಿಂದ ಹರಪನಹಳ್ಳಿ ಬಸ್ ನಿಲ್ದಾಣದಲ್ಲಿ ಇಳಿದು ನೀರು ಕುಡಿಯಲು ಹೋದರೆ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಅನಿವಾರ್ಯವಾಗಿ ಹಣ ಕೊಟ್ಟು ನೀರು ಖರೀದಿಸಿದೆ. ಸಾರಿಗೆ ಇಲಾಖೆ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎನ್ನುತ್ತಾರೆ ಮರಿಯಮ್ಮನಹಳ್ಳಿ ಪ್ರಯಾಣಿಕ ಬಸವರಾಜ.