ಹುಬ್ಬಳ್ಳಿ: ಇಲ್ಲಿನ ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್) ಮೈದಾನದಲ್ಲಿ ಶುಕ್ರವಾರದಿಂದ ಪ್ರಾರಂಭವಾಗಲಿರುವ, ಕರ್ನಾಟಕ- ಪಂಜಾಬ್ ನಡುವಿನ ಪ್ರಸಕ್ತ ಸಾಲಿನ ರಣಜಿ ಪಂದ್ಯಾವಳಿಯ ಮೊದಲ ಪಂದ್ಯಕ್ಕಾಗಿ ಎರಡೂ ತಂಡಗಳು ಗುರುವಾರ ಕಠಿಣ ಅಭ್ಯಾಸ ನಡೆಸಿದವು.
ಜ.5 ರಿಂದ 8 ರ ವರೆಗೆ ಪಂದ್ಯಕ್ಕಾಗಿ ಈಗಾಗಲೇ ಹುಬ್ಬಳ್ಳಿಗೆ ಆಗಮಿಸಿರುವ ಕರ್ನಾಟಕ- ಪಂಜಾಬ್ ತಂಡಗಳೆರಡೂ ಗುರುವಾರ ಬೆಳಗ್ಗೆ ಫುಟ್‌ಬಾಲ್ ಹಾಗೂ ನೆಟ್ ಪ್ರ್ಯಾಕ್ಟಿಸ್ ಮಾಡಿದರು.ಕರ್ನಾಟಕದ ತಂಡದ ನಾಯಕ ಮಯಾಂಕ್ ಅಗರವಾಲ್, ಎಡಗೈ ಆಫ್ ಸ್ಪಿನ್ನರ್‌ಗಳಾದ ಶುಭಾಂಗ್ ಹೆಗಡೆ, ಹುಬ್ಬಳ್ಳಿಯ ಎ.ಸಿ. ರೋಹಿತಕುಮಾರ್ ಹಾಗೂ ಆಫ್ ಸ್ಪಿನ್ನರ್ ಕೆ. ಶಶಿಕುಮಾರ ಕಠಿಣ ಅಭ್ಯಾಸ ಮಾಡಿದರು.
ಬಳಿಕ ತಂಡದ ಕೋಚ್ ಪಿ.ವಿ. ಶಶಿಕಾಂತ್ ಅವರೊಂದಿಗೆ ಮಯಾಂಕ್ ಕೆಲಕಾಲ ಚರ್ಚೆ ನಡೆಸಿದರು. ಆರಂಭಿಕ ಆಟಗಾರ ಆರ್. ಸಮರ್ಥ ಅವರು, ವೇಗಿಗಳಾದ ವಿದ್ವತ್ ಕಾವೇರಪ್ಪ, ವೈಶಾಖ ವಿಜಯಕುಮಾರ ಬೌಲಿಂಗ್ ಎದುರಿಸಿದರು.ಮನೀಷ್ ಪಾಂಡೆ, ನಿಕಿನ್ ಜೋಸ್, ದೇವದತ್ತ ಪಡಿಕ್ಕಲ್ ಬ್ಯಾಟಿಂಗ್ ಅಭ್ಯಾಸ ಮಾಡಿದರು. ಬೆಳಗಾವಿಯ ಪ್ರತಿಭೆ ಸುಜಯ ಸಾತೇರಿ ವಿಕೆಟ್ ಕೀಪಿಂಗ್ ಅಭ್ಯಾಸ ಮಾಡಿದರು.
ಪಂಜಾಬ್ ತಂಡದ ಬಲಗೈ ಬ್ಯಾಟರ್‌ಗಳಾದ ಮನದೀಪ ಸಿಂಗ್, ಅನ್ಮೋಲ್‌ಪ್ರೀತ್ ಸಿಂಗ್ ಅಭ್ಯಾಸ ನಡೆಸಿದರು. ಎಡಗೈ ವೇಗಿ ಅರ್ಷದೀಪ್‌ಸಿಂಗ್ ಬೌಲಿಂಗ್ ಅಭ್ಯಾಸ ಮಾಡಿದರು. ಅಭಿನವ್ ಶರ್ಮಾ, ಅಭಿಷೇಕ ಶರ್ಮಾ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದರು. ನಂತರ ಎಲ್ಲ ಆಟಗಾರರು ಕ್ಷೇತ್ರ ರಕ್ಷಣೆಯ ಪ್ರ್ಯಾಕ್ಟಿಸ್ ನಡೆಸಿದರು.ಹುಬ್ಬಳ್ಳಿ ಹುಡುಗ ರೋಹಿತಕುಮಾರ್: ಹುಬ್ಬಳ್ಳಿಯ ಪ್ರತಿಭೆ ಎ.ಸಿ. ರೋಹಿತ್‌ಕುಮಾರ್ ಇದೇ ಮೊದಲ ಬಾರಿಗೆ ರಣಜಿ ಪಂದ್ಯದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಎಡಗೈ ಸ್ಪಿನ್ನರ್ ಆಗಿರುವ ರೋಹಿತ್, ಹುಬ್ಬಳ್ಳಿ ಕ್ರಿಕೆಟ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ತರಬೇತಿ ಪಡೆದವರು. ಈವರೆಗೆ ರಾಜ್ಯಮಟ್ಟದ ವಿವಿಧ ಪಂದ್ಯಾವಳಿಗಳಲ್ಲಿ ಕರ್ನಾಟಕ ಪ್ರತಿನಿಧಿಸಿರುವ ರೋಹಿತ್, 13 ಪಂದ್ಯಗಳಲ್ಲಿ 70 ವಿಕೆಟ್ ಪಡೆದು ತಮ್ಮ ಪ್ರತಿಭೆ ತೋರಿದ್ದಾರೆ. ಇದೀಗ ರಣಜಿ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.
ನಮ್ಮ ತಂಡದಲ್ಲಿ ಯುವಕರು, ಹೊಸಬರು ಇದ್ದರೂ ಅವರೆಲ್ಲ ಹಿಂದೆ 2023ರಲ್ಲಿ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದವರು. ರಣಜಿ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತೇವೆ ಎಂದು ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರವಾಲ್ ಹೇಳಿದ್ದಾರೆ.ರಣಜಿ ಟೋಫಿ ಪಂದ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶುಕ್ರವಾರ ಕರ್ನಾಟಕ ಮತ್ತು ಪಂಜಾಬ್ ತಂಡದ ಮಧ್ಯ ರಣಜಿಯ ಮೊದಲ ಪಂದ್ಯ ನಡೆಯಲಿದೆ. ಪ್ರೇಕ್ಷಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಕ್ರೀಡಾಂಗಣದ ಪ್ರವೇಶ ದ್ವಾರ ಸಂಖ್ಯೆ-3ರ ಮೂಲಕ ಕ್ರಿಕೆಟ್ ವೀಕ್ಷಣೆಗೆ ಆಗಮಿಸಬಹುದಾಗಿದೆ. ರಣಜಿಯ ಮೊದಲ ಪಂದ್ಯ ನಮ್ಮ ಹುಬ್ಬಳ್ಳಿ ಮೈದಾನದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕೆಎಸ್‌ಸಿಎ ಧಾರವಾಡ ವಲಯ ನಿಮಂತ್ರಕ ನಿಖಿಲ್ ಭೂಸದ ತಿಳಿಸಿದ್ದಾರೆ.
ಕರ್ನಾಟಕ ತಂಡ: ಮಯಾಂಕ್ ಅಗರವಾಲ್ (ನಾಯಕ), ಸಮರ್ಥ ಆರ್., ದೇವದತ್ತ ಪಡಿಕ್ಕಲ್, ನಿಕಿನ್ ಜೋಸ್ (ಉಪ ನಾಯಕ), ಮನೀಷ್ ಪಾಂಡೆ, ಶುಭಾಂಗ ಹೆಗಡೆ, ಶರತ್ ಶ್ರೀನಿವಾಸ, ವೈಶಾಖ ವಿ., ಕೌಶಿಕ್ ವಿ., ವಿದ್ವತ್ ಕಾವೇರಪ್ಪ, ಶಶಿಕುಮಾರ ಕೆ., ಸುಜಯ ಸಾತೇರಿ, ನಿಶ್ಚಲ್ ಡಿ., ವೆಂಕಟೇಶ ಎಂ., ಕಿಶನ್ ಬೆದರೆ ಹಾಗೂ ರೋಹಿತ್‌ಕುಮಾರ ಎ.ಸಿ. ತಂಡದಲ್ಲಿದ್ದಾರೆ.ಪಂಜಾಬ್ ತಂಡ: ಮನದೀಪ್ ಸಿಂಗ್ (ನಾಯಕ), ಅಭಿಷೇಕ ಶರ್ಮಾ, ಅನ್ಮೋಲ್‌ಪ್ರೀತ್ ಸಿಂಗ್, ಅರ್ಶದೀಪ್ ಸಿಂಗ್, ಬಾಲತೇಜ ಸಿಂಗ್, ಪ್ರೇರಿತ್ ದತ್ತಾ, ಜಾಸ್ಸಿಂದರ್ ಸಿಂಗ್, ಸಿದ್ಧಾರ್ಥ ಕೌಲ್, ಗೀತಂಶ್ ಖೇರಾ, ಮಯಾಂಕ್ ಮಾರ್ಕೇಂಡೆ, ನಮನ್ ಧೀರ, ಪ್ರಬ್‌ಸಿಮ್ರಾನ್ ಸಿಂಗ್, ಸನ್‌ವೀರ್ ಸಿಂಗ್, ಅಭಿನವ್ ಶರ್ಮಾ, ವಿಶ್ವನಾಥ ಪ್ರತಾಪ್ ಸಿಂಗ್, ನೆಹಾಲ್ ವಡೇಯರ್.