ಕನ್ನಡಪ್ರಭ ವಾರ್ತೆ ಸಿರಿಗೆರೆ
ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಬಡ ಕುಟುಂಬದಲ್ಲಿ ಜನಿಸಿದ್ದರೂ ಯಾವುದೇ ಕಠಿಣ ಪರಿಸ್ಥಿತಿ ಇದ್ದರೂ ಸಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಿದೆ. ಕಠಿಣ ಪರಿಶ್ರಮವಿದ್ದರೆ ಸಾಧನೆ ಸಾಧ್ಯ ಎಂದು ಸಿವಿಲ್ ನ್ಯಾಯಾಧೀಶರಾಗಿ ನೂತನವಾಗಿ ಆಯ್ಕೆಯಾಗಿರುವ ಟಿ.ಸುಮಾ ಹೇಳಿದರು.ಸಮೀಪದ ಕಡ್ಲೆಗುದ್ದು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಥಮ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಜೀವನದಲ್ಲಿ ಸಾಧನೆ ಮಾಡಲು ಗುರಿ, ಆತ್ಮವಿಶ್ವಾಸ, ದೃಢ ನಿರ್ಧಾರ ಮುಖ್ಯ. ವಿದ್ಯಾರ್ಥಿಗಳು ಈ ದಿಸೆಯಿಂದಲೇ ಗುರಿಯನ್ನು ನಿರ್ಧರಿಸಿಕೊಂಡು ಕಾರ್ಯೋನ್ಮುಖರಾದರೆ ಯಶಸ್ಸಿನ ಸಾಧನೆಯ ಸವಿಯನ್ನು ಅನುಭವಿಸಬಹುದು. ಸಾಧನೆ ಮಾಡಲು, ಗುರಿ ಸಾಧಿಸಲು ಪೂರ್ವ ಸಿದ್ಧತೆ ಅಗತ್ಯ. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸ ಬಲ್ಲಳು ಎಂಬುದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಆ ದಿಕ್ಕಿನಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣದ ಸೌಲಭ್ಯಗಳನ್ನು ಒದಗಿಸಬೇಕು ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನ್ಯಾಯವಾದಿ ಪಾಪಣ್ಣ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಿಂದಲೇ ಗುರಿ ಮುಟ್ಟಲು ಪೂರ್ವ ನಿರ್ಧರಿತ ಯೋಜನೆ ಅತ್ಯಗತ್ಯ. ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಸುಮಾ ಅವರ ಸಾಧನೆ ನಿಮ್ಮೆಲ್ಲರಿಗೂ ಪ್ರೇರಣೆಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಡಾ.ಮಹೇಶ್, ಹೆಣ್ಣು ಜಗದ ಕಣ್ಣು. ಹೆಣ್ಣು ಸಮಾಜದ ಬದಲಾವಣೆಗೆ ನಾಂದಿ. ಸುಮಾ ಅವರ ಜೀವನ ಸಾಧನೆ ನಮ್ಮೆಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದರು.ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಸುಮಾ ಅವರನ್ನು ಪ್ರಥಮ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ಶಿಕ್ಷಕರಾದ ನಟರಾಜ್ ಮಂಜುನಾಥ್ ಮಂಜಪ್ಪ ನಾಗರಾಜ್ ಕರಿಬಸಪ್ಪ ಮಹಾಂತೇಶ್ ಹಾಗೂ ಅವರ ಸಹೋದರ ಶ್ರೀನಿವಾಸ್ ಹಾಜರಿದ್ದರು.