ಕನ್ನಡಪ್ರಭ ವಾರ್ತೆ ಚಾಮರಾಜನಗರಸತತ ಅಧ್ಯಯನ, ಆತ್ಮ ವಿಶ್ವಾಸ ಯಶಸ್ಸಿನ ಮೂಲವಾಗಿವೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಅಭಿಪ್ರಾಯ ಪಟ್ಟರು.ನಗರದ ಸಂತ ಪೌಲ್ ಪ್ರೌಢ ಶಾಲೆಯಲ್ಲಿ ಚಾಮರಾಜನಗರ ತಾಲೂಕು ಶಿಕ್ಷಣ ಇಲಾಖೆ ವತಿಯಿಂದ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮದೇಯಾದ ಗುರಿಯನ್ನಿಟ್ಟುಕೊಂಡು ವೇಳಾ ಪಟ್ಟಿ ಸಿದ್ಧಪಡಿಸಿಕೊಂಡು, ಅಧ್ಯಯನ ಮಾಡಿ ಪರೀಕ್ಷೆಗೆ ಸಿದ್ಧರಾಗಬೇಕು.ಕಠಿಣ ವಿಷಯಗಳನ್ನು ಬರೆದು ಅಭ್ಯಾಸ ಮಾಡಬೇಕು. ವರ್ಷವೆಲ್ಲ ಕೇಳಿದ, ಓದಿದ ವಿಷಯಗಳನ್ನು ಪರೀಕ್ಷೆಯ ದಿನದ ನಿಗದಿತ ಸಮಯದಲ್ಲಿ ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸುವುದೇ ಮುಖ್ಯವಾಗಿರುತ್ತದೆ. ಹಾಗಾಗಿ ಸಮಯ ನಿರ್ವಹಣೆ, ಅಂದವಾದ ಬರವಣಿಗೆ,ಅಂಕಗಳಿಗೆ ಅನುಸಾರ ಉತ್ತರ ಬರೆಯುವಿಕೆ ಕಡೆಗೆ ಹೆಚ್ಚಿನ ಗಮನ ನೀಡಿ ಎಂದು ತಿಳಿಸಿದರು.ಹಿಂದಿನ ವರ್ಷಗಳಲ್ಲಿ ಕೆಲವೇ ಅಂಕಗಳು ಕಡಿಮೆಯಾಗಿರುವ ಕಾರಣ ಜಿಲ್ಲೆಗೆ, ತಾಲೂಕಿಗೆ ಮೊದಲಿಗರಾಗಬೇಕಿದ್ದ ವಿದ್ಯಾರ್ಥಿಗಳು ಸ್ಥಾನ ವಂಚಿತರಾಗಿದ್ದು, ಈ ಬಗ್ಗೆ ವಿದ್ಯಾರ್ಥಿಗಳು ಮಾಡುವ ಸಣ್ಣ ಪುಟ್ಟ ತಪ್ಪುಗಳ ಬಗ್ಗೆ ಗಮನ ಹರಿಸಿ, ಸರಿಪಡಿಸಿಕೊಂಡರೆ ಉತ್ತಮ ಸಾಧನೆ ಮಾಡಬಹುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಿಇಒ ಸೋಮಣ್ಣೇಗೌಡ ಮಾತನಾಡಿ, ಹತ್ತನೇ ತರಗತಿ ವಾರ್ಷಿಕ ಪರೀಕ್ಷೆ ಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಗುಣ ಮಟ್ಟದ ಫಲಿತಾಂಶ ಪಡೆಯಲು ಇಂತಹ ಮಾರ್ಗದರ್ಶನ ಕಾರ್ಯಕ್ರಮ ಉಪಯುಕ್ತ ವಾಗಿದೆ.ಇದರ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ಶಿಕ್ಷಕರಾದ ಕೆಸ್ತೂರು ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಶಿವಕುಮಾರ ಸ್ವಾಮಿ, ಗೂಳಿಪುರ ಪ್ರೌಢ ಶಾಲೆಯ ಹೇಮಚಂದ್ರ, ಆದರ್ಶ ವಿದ್ಯಾಲಯದ ಹರವಿ ಬಸವರಾಜು, ಬಾಲಕರ ಪ್ರೌಢ ಶಾಲೆಯ ಬಸವಲಿಂಗಪ್ಪ, ಹರದನಹಳ್ಳಿ ಪ್ರೌಢ ಶಾಲೆಯ ನಾಗರಾಜು ವಿಷಯ ವಾರು ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆ ಬಗ್ಗೆ, ಪರೀಕ್ಷೆ ಯಲ್ಲಿ ಹೆಚ್ಚು ಅಂಕಗಳಿಸುವ ಬಗ್ಗೆ, ಮಾರ್ಗದರ್ಶನ ನೀಡಿದರು.
ಈ ವೇಳೆ ಶಿಕ್ಷಣ ಸಂಯೋಜಕ ಹಾಗೂ ಪರೀಕ್ಷಾ ನೋಡಲ್ ಅಧಿಕಾರಿ ಸಿದ್ದಮಲ್ಲಪ್ಪ, ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ನೇಮಿರಾಜ್, ಮುಖ್ಯ ಶಿಕ್ಷಕ ಕುಳಂದೈಸ್ವಾಮಿ, ಮಂಜುಳಾ, ಅರ್ಕಪ್ಪ, ನಟರಾಜು, ಸಿದ್ದರಾಜು, ಸುಮನ ಕುಮಾರಿ, ಗೌರಮ್ಮ , ರಾಜಶೇಖರ್ ಹಾಜರಿದ್ದರು. ತಾಲೂಕಿನ ಎಲ್ಲಾ ಪ್ರೌಢ ಶಾಲೆಗಳ ಸುಮಾರು 400 ವಿದ್ಯಾರ್ಥಿಗಳು ಭಾಗವಹಿಸಿದ್ದರು.