ಬಳ್ಳಾರಿ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿ ಮನೆ-ಮನೆ ಮೇಲೂ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಹರ್‌ಘರ್ ತಿರಂಗಾ ಅಭಿಯಾನ ಯಶಶ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್ ರಾವ್ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದ ಕಾರ್ಯಕ್ರಮದ ಬಳಿಕ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿ ನಿರ್ದೇಶನ ನೀಡಿದರು.ರಾಷ್ಟ್ರ ಧ್ವಜ ನಮ್ಮ ದೇಶದ ಹೆಮ್ಮೆ. ಪ್ರತಿಯೊಬ್ಬ ನಾಗರಿಕ ರಾಷ್ಟ್ರಧ್ವಜಕ್ಕೆ ಗೌರವಿಸಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ಹರ್ ಘರ್ ತಿರಂಗಾ ಅಭಿಯಾನವನ್ನು ಆ.13ರಿಂದ ಆ.15ರವರೆಗೆ ಹಮ್ಮಿಕೊಳ್ಳಲಾಗಿದೆ. ಕಳೆದ ಬಾರಿಯೂ ಜಿಲ್ಲೆಯಾದ್ಯಂತ ಈ ಅಭಿಯಾನ ಯಶಸ್ವಿಯಾಗಿತ್ತು. ಈ ಬಾರಿಯೂ ಹರ್‌ಘರ್ ತಿರಂಗಾ ಅಭಿಯಾನ ಮುಂದುವರಿಯಲಿದೆ. ಪ್ರತಿಯೊಬ್ಬರಲ್ಲೂ ದೇಶಭಕ್ತಿ, ದೇಶಾಭಿಮಾನವನ್ನು ಮೂಡಿಸುವ ಈ ಅಭಿಯಾನವನ್ನು ಎಲ್ಲರೂ ಸಮರ್ಥವಾಗಿ ನಿರ್ವಹಿಸಬೇಕು. ಇದರನ್ವಯ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಸಂಜೆ ಸೂರ್ಯಾಸ್ತದವರೆಗೆ ನಿರಂತರವಾಗಿ ಧ್ವಜ ಹಾರಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಹೇಳಿದರು.
ಅಭಿಯಾನದ ನಿಮಿತ್ತ ಜಿಲ್ಲಾ ಕೇಂದ್ರದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ಮೂಲಕ ರಾಷ್ಟ್ರಧ್ವಜದ ಗೌರವ ಮತ್ತು ಅದರ ಮೌಲ್ಯಗಳನ್ನು ಗಟ್ಟಿಗೊಳಿಸಿ ದೇಶಭಕ್ತಿ ಮೂಡಿಸಲು ಪ್ರೇರೇಪಿಸುತ್ತದೆ. ಜಿಲ್ಲೆಯಲ್ಲಿ ಎಲ್ಲ ಸಾರ್ವಜನಿಕರು ಮತ್ತು ತಮ್ಮ ನೆರೆಹೊರೆಯವರು ಕೂಡ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸಬೇಕು. ಆ.13ರಿಂದ 15ರವರೆಗೆ ತಮ್ಮ ಮನೆಗಳ ಮೇಲೆ ಸ್ವಯಂ ಪ್ರೇರಿತರಾಗಿ ಧ್ವಜ ಹಾರಿಸಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸಿದ ಸಾರ್ವಜನಿಕರು ತಮ್ಮ ಸೆಲ್ಫಿಗಳನ್ನು https://hargartiranga.com ನಲ್ಲಿ ಹಂಚಿಕೊಳ್ಳಬಹುದು ಎಂದರು.
ಸಂವಿಧಾನವನ್ನು ಪಾಲಿಸುವುದು ಮತ್ತು ಅದರ ಆದರ್ಶಗಳು ಮತ್ತು ಸಂಸ್ಥೆಗಳು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು. ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಈ ಎಲ್ಲ ಅಂಶಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲನೆ ಮಾಡಿ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.ಜಿಲ್ಲಾ ಮಟ್ಟದಲ್ಲಿ ವೈವಿಧ್ಯಮ ಕಾರ್ಯಕ್ರಮ ಆಯೋಜನೆ:
ಹರ್ ಘರ್ ತಿರಂಗಾ ಅಭಿಯಾನ ನಿಮಿತ್ತ ಜಿಲ್ಲಾ ಕೇಂದ್ರದಲ್ಲಿ ಆ.12 ಮತ್ತು 13ರಂದು ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಿದೆ. ಆ.12ರಂದು ಸಂಜೆ 6.30ಕ್ಕೆ ನಗರದ ಸಾಂಸ್ಕೃತಿಕ ಸಮುಚ್ಚಯ ಆವರಣದ ನಾಡೋಜ ಸುಭದ್ರಮ್ಮ ಮನ್ಸೂರ್ ಬಯಲು ರಂಗಮಂದಿರದಲ್ಲಿ ದೇಶಪ್ರೇಮ ಬಿಂಬಿಸುವ ತಿಂಗಳ ಸೊಬಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಆ.13ರಂದು ಬೆಳಿಗ್ಗೆ 6.30ಕ್ಕೆ ಬಳ್ಳಾರಿ ನಗರದ ಐತಿಹಾಸಿಕ ಕೋಟೆ ಮೇಲೆ ಧ್ವಜಾರೋಹಣ ನೆರವೇರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾರ್ವಜನಿಕರು ಭಾಗವಹಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.