ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಆಡಳಿತದಲ್ಲಿ ಕಳೆದು ಹೋಗಿರುವ ಸಾಮರಸ್ಯವನ್ನು ಮತ್ತೊಮ್ಮೆ ಪುನರ್ ಸ್ಥಾಪಿಸುವ ಅಗತ್ಯವಿದೆ, ಜತೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳೂ ಆಗಬೇಕಿವೆ. ಇದಕ್ಕೆ ಪೂರಕವಾಗಿ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.ಮಂಗಳೂರಿನ ಬಿಜೈ ವಾರ್ಡ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಾಮರಸ್ಯ ಮರುಸ್ಥಾಪನೆಯ ಜತೆ ಜತೆಗೆ ಜಿಲ್ಲೆಯ ಸರ್ವತೋಮುಖ ಬೆಳವಣಿಗೆ ಆಗಬೇಕಿದೆ. ಪ್ರವಾಸೋದ್ಯಮ ಅಭಿವೃದ್ಧಿ, ಹೂಡಿಕೆಯಿಂದ ಉದ್ದಿಮೆಗಳ ಸ್ಥಾಪನೆ, ಈ ಮೂಲಕ ವಿದ್ಯಾವಂತರಿಗೆ ಜಿಲ್ಲೆಯೊಳಗೆ ಉದ್ಯೋಗ ಸೃಷ್ಟಿ ಮಾಡಬೇಕಿದೆ. ತನಗೆ ಜಿಲ್ಲೆಯ ಅಭಿವೃದ್ಧಿ ವಿಚಾರವೇ ಮುಖ್ಯ ಎಂದು ಪದ್ಮರಾಜ್ ತಿಳಿಸಿದರು.
ಜನರ ಜತೆಗಿರುತ್ತೇನೆ: ಬಳಿಕ ಕಲ್ಲಾಪು ಆಟೋ ನಿಲ್ದಾಣದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮತದಾರ ಪ್ರಭುಗಳು, ಪ್ರೀತಿಯ ಕಾರ್ಯಕರ್ತರ ನಿರಂತರ ಶ್ರಮವೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಜನರು ನೀಡಿದ ಪ್ರೀತಿಗೆ ಆಭಾರಿಯಾಗಿದ್ದೇನೆ. ಮುಂದೆಯೂ ಜನರೊಂದಿಗೆ ಇದ್ದು ಪ್ರೀತಿ ಹಂಚುವ ಕೆಲಸ ಮಾಡಲಿದ್ದೇನೆ ಎಂದು ಹೇಳಿದರು.ಮಂಗಳೂರು ನಗರ ದೇಶದ ಬಲಿಷ್ಠ ನಗರಗಳಲ್ಲಿ ಒಂದಾಗಬೇಕು ಎನ್ನುವುದು ನನ್ನ ಗುರಿ. ಮಂಗಳೂರಿನಲ್ಲಿ ಸುಸಜ್ಜಿತ ಅಂತಾರಾಷ್ಟ್ರೀಯ ಮಾದರಿಯ ಮಾರುಕಟ್ಟೆ ನಿರ್ಮಾಣಕ್ಕೆ, ನಗರದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುವುದಾಗಿ ತಿಳಿಸಿದರು.
ಇದೇ ಸಂದರ್ಭ ಅವರು ಕ್ಷೇತ್ರದ ವಿವಿಧ ದೇವಾಲಯ, ದೈವಸ್ಥಾನಗಳಿಗೆ ಭೇಟಿ ನೀಡಿದರು.ಮಾಜಿ ಶಾಸಕಿ ಆಶೀರ್ವಾದ:
ಪದ್ಮರಾಜ್ ಅವರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಈ ವೇಳೆ ಮಾತನಾಡಿದ ಶಕುಂತಳಾ ಶೆಟ್ಟಿ, 30 ವರ್ಷಗಳ ಬಳಿಕ ಮತ್ತೊಮ್ಮೆ ಕಾಂಗ್ರೆಸ್‌ನ ಗತವೈಭವವನ್ನು ಕಾಣುವಂತೆ ಮಾಡಬೇಕು. ಮಾಜಿ ಸಚಿವ ಜನಾರ್ದನ ಪೂಜಾರಿ ಅವರಂತೆ ಆರ್ಥಿಕವಾಗಿ ಹಿಂದುಳಿದವರ ಸೇವೆ ಮಾಡಬೇಕು ಎಂದು ಹಾರೈಸಿದರು.ಮುಂಬೈ ಭಾರತ್ ಬ್ಯಾಂಕ್‌ಗೆ ಭೇಟಿ:
ಮುಂಬೈ ಗೋರೆಗಾಂವ್‌ನಲ್ಲಿರುವ ಭಾರತ್ ಬ್ಯಾಂಕ್‌ನ ಕೇಂದ್ರ ಕಚೇರಿಗೆ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿದರು. ಈ ವೇಳೆ ಜನಾರ್ದನ ಪೂಜಾರಿ ಅವರ ಪುತ್ರ ಸಂತೋಷ್ ಜನಾರ್ದನ ಪೂಜಾರಿ, ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಮಂಗಳೂರು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಬ್ಯಾಂಕ್‌ನ ನಿರ್ದೇಶಕರು, ಆಡಳಿತ ನಿರ್ದೇಶಕರು, ಸಮಾಜ ಬಾಂಧವರು ಇದ್ದರು.