ಹರಪನಹಳ್ಳಿ: ಸ್ಥಳೀಯ ಸಮಸ್ತರು, ಆದರ್ಶ ಮಹಿಳಾ ಮಂಡಳಿ, ಸಂಪ್ರದಾಯ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಕಾಶಿಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ದಾದಯ್ಯನಾಯಕ ರಂಗ ಪ್ರಯೋಗ ಹರಪನಹಳ್ಳಿ ಇತಿಹಾಸವನ್ನು ಮರುಕಳಿಸಿತು.
ಉತ್ತಮ ಅಭಿನಯದಿಂದ ಪ್ರೇಕ್ಷಕರನ್ನು ಮೋಡಿ ಮಾಡಿದ ಹಾಗೆ ನಿಶಬ್ದವಾಗಿ ಚಿಂತನೆ ಹೆಚ್ಚಿಸಿದವು. ದಾದಾಯ್ಯ ನಾಯಕ ಚಿತ್ರದುರ್ಗದ ಮತ್ತಿ ತಿಮ್ಮಣ್ಣ ನಾಯಕನಿಗೆ ಓಲೆ ಕಳಿಸಿ, ನಮಗೆ ಬಸವಾಪಟ್ಟಣದ ಕೆಂಗಣ್ಣ ನಾಯಕ ಪದೇಪದೇ ದಾಳಿ ಮಾಡುತ್ತಿರುವುದರಿಂದ ನಮ್ಮ ಕೋಟೆಯ ದವಸ ಧಾನ್ಯಗಳು ಖಾಲಿಯಾಗುತ್ತಿವೆ. ಇದರಿಂದ ಹೆಚ್ಚು ಕಾಲ ನಮ್ಮಿಂದ ಪ್ರತಿರೋಧ ಒಡ್ಡಲು ಕಷ್ಟವಾಗುತ್ತದೆ. ಅವನನ್ನು ಹಿಮ್ಮೆಟ್ಟಿಸಲು ಸರ್ದಾರನೆಂದರೆ ನೀನೇ. ದಯವಿಟ್ಟು ನಮ್ಮ ನೆರವಿಗೆ ಬನ್ನಿ ಎಂದು ಕೋರಿದ್ದರಿಂದ ದಾದಾಯ್ಯನಾಯಕ ಹರಪನಹಳ್ಳಿಯಿಂದ ದವಸ ಧಾನ್ಯ ಹೊತ್ತು ಸೈನ್ಯದೊಂದಿಗೆ ಹೋಗಿ ಹೋರಾಡಿ ಕೆಂಗಣ್ಣನನ್ನು ಹಿಮ್ಮೆಟ್ಟಿಸಿದ.ಈತನ ಪರಾಕ್ರಮ ಮೆಚ್ಚಿ ಅಂದಿನ ಚಿತ್ರದುರ್ಗದ ತಿಮ್ಮಣ್ಣ ನಾಯಕ ತನ್ನ ಮಗಳಾದ ಹೊನ್ನವ್ವ ನಾಗತಿ ಕೊಟ್ಟು ವಿವಾಹ ಮಾಡಿಕೊಟ್ಟು ತಾಲೂಕಿನ ಉಚ್ಚಂಗಿ ದುರ್ಗದ ಕೋಟೆಯನ್ನು ಉಡುಗೊರೆಯಾಗಿ ಕೊಟ್ಟ. ಕಾಲ ಕಳೆದಂತೆ ತಿಮ್ಮಣ್ಣ ನಾಯಕನ ಮಗ ಕೊಟ್ಟ ಕೋಟೆ ವಾಪಸ್ ಪಡೆಯಲು ಸೆಡ್ಡು ಹೊಡೆಯತೊಡಗಿದ. ಹಾಗೆ ಯುದ್ಧ ಆರಂಭವಾಯಿತು.
ದಾದಾಯ್ಯ ನಾಯಕನ ಹೆಂಡತಿ ದುಖಃತಪ್ತಳಾಗಿ ಸಹೋದರರು ಹಾಗೂ ಪತಿ ಇಬ್ಬರ ಕದನದಲ್ಲಿ ಯಾರ ಸಾವೂ ನಾ ನೋಡಲಾರೆನೆಂದು ತಾನೇ ಉಚ್ಚಂಗಿದುರ್ಗದ ಕೋಟೆಯಿಂದ ಹಾರಿ ಪ್ರಾಣತ್ಯಾಗ ಮಾಡಿಕೊಳ್ಳುತ್ತಾಳೆ.ಯುದ್ಧದಲ್ಲಿ ಯಾವುದೇ ಪ್ರಾಣಹರಣ ಮಾಡದೇ ದಾದಾಯ್ಯನಾಯಕ ಚಿತ್ರದುರ್ಗದ ಸೈನ್ಯ ಹಿಮ್ಮೆಟ್ಟಿಸಿ ಮರಳಿದಾಗ ತನ್ನ ಮುದ್ದಿನ ಮಡದಿ ಸಾವನ್ನು ಕಂಡು ಉಚ್ಚೆಂಗೆಮ್ಮದೇವಿ ಮುಂದೆ ರೋದಿಸಿದ. ಅವಳೇ ಇಲ್ಲದ ಮೇಲೆ ಈ ಕೋಟೆಯಲ್ಲಿ ಇರುವುದು ಬೇಡವೆಂದು ಹರಿಪುರಕ್ಕೆ ಬರುತ್ತಾನೆ.
ಈ ಪ್ರಸಂಗವನ್ನು ರಂಗ ಪ್ರಯೋಗಕ್ಕೆ ಸಿದ್ಧಪಡಿಸಿಕೊಂಡ ಬಯಲಾಟ ಅಕಾಡೆಮಿ ಸದಸ್ಯ ಬಿ.ಪರಶುರಾಮ ತಾನೇ ದಾದಯ್ಯನಾಯಕನ ಪಾತ್ರ ಮಾಡಿ ಪಾತ್ರಕ್ಕೆ ಜೀವತುಂಬಿ ಪ್ರೇಕ್ಷಕರನ್ನು ಬೆರಗುಗೊಳಿಸಿದರು. ಹೊನ್ನವ್ವೆ ನಾಗತಿ ಪಾತ್ರಧಾರಿ ತಿಮ್ಮಲಾಪುರದ ರಕ್ಷಿತ ರಂಗಭೂಮಿ ಪ್ರವೇಶ ಇದೇ ಪ್ರಥಮವಾಗಿದ್ದರೂ ಉತ್ತಮ ಅಭಿನಯ ನೀಡಿ ಪ್ರೇಕ್ಷಕರನ್ನು ಮೆಚ್ಚಿಸಿದರು. ಉಚ್ಚಂಗಿದೇವಿ ಪಾತ್ರಧಾರಿ ಟಿ.ಐಶ್ವರ್ಯ ಹಾಗೂ ಬೆಳಕು ಅರುಣ, ಪ್ರಸಾದನ ಶಂಕರ್ ಸಹಾಯಕರಾಗಿ ಕುಮಾರ್, ಆನಂದ, ನಾಗರಾಜ್, ಹೀಮಣ್ಣ, ಮುಂತಾದವರ ಪರಿಶ್ರಮ ಎದ್ದು ಕಾಣುತ್ತಿತ್ತು. ಚಾನಪ್ಪ ಅರುಂಡಿ ನಾಗರಾಜ್ ಮುಂತಾದವರು ಪ್ರಯೋಗದ ಸಾರ್ಥಕತೆ ಬಗ್ಗೆ ತಿಳಿಸಿದರು.