ಪ್ರಾಮಾಣಿಕ ಸೇವೆ ಮಾಡದಿದ್ರೆ ಕಠಿಣ ಕ್ರಮ

KannadaprabhaNewsNetwork | Published : Aug 8, 2024 1:32 AM

ಸಾರಾಂಶ

ಸರ್ಕಾರಿ ನೌಕರರು ಜನಸೇವಕರಿದ್ದು, ಸಾರ್ವಜನಿಕ ಸೇವೆಗೆ ಬದ್ಧರಿದ್ದರೆ ಜಿಲ್ಲೆಯಲ್ಲಿ ಉಳಿದು ಪ್ರಾಮಾಣಿಕ ಸೇವೆ ಮಾಡಿರಿ. ಇಲ್ಲವಾದಲ್ಲಿ ನಿಮಗೆ ಬೇಕಾದಲ್ಲಿ ಹೊರನಡೆಯಿರಿ. ಇಲ್ಲವೇ ಕಠಿಣ ಕ್ರಮ ಎದುರಿಸಿ ಎಂದು ಸಚಿವ ಆರ್.ಬಿ.ತಿಮ್ಮಾಪುರ ವೈದ್ಯರು ಹಾಗೂ ವೈದ್ಯ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸರ್ಕಾರಿ ನೌಕರರು ಜನಸೇವಕರಿದ್ದು, ಸಾರ್ವಜನಿಕ ಸೇವೆಗೆ ಬದ್ಧರಿದ್ದರೆ ಜಿಲ್ಲೆಯಲ್ಲಿ ಉಳಿದು ಪ್ರಾಮಾಣಿಕ ಸೇವೆ ಮಾಡಿರಿ. ಇಲ್ಲವಾದಲ್ಲಿ ನಿಮಗೆ ಬೇಕಾದಲ್ಲಿ ಹೊರನಡೆಯಿರಿ. ಇಲ್ಲವೇ ಕಠಿಣ ಕ್ರಮ ಎದುರಿಸಿ ಎಂದು ಸಚಿವ ಆರ್‌.ಬಿ.ತಿಮ್ಮಾಪುರ ವೈದ್ಯರು ಹಾಗೂ ವೈದ್ಯ ಸಿಬ್ಬಂದಿಗೆ ಖಡಕ್‌ ಸೂಚನೆ ನೀಡಿದರು.

ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಹಾಲಿಂಗಪುರ ಆಸ್ಪತ್ರೆ ಬಗ್ಗೆ ವಿವರಣೆ ಕೇಳಿ ದಂಗಾದ ಸಚಿವರು, ಕೆಲಸ ಮಾಡದೇ ತಿಕ್ಕಾಟದಲ್ಲಿ ನಿರತ ವೈದ್ಯರನ್ನು ತಕ್ಷಣ ಬಿಡುಗಡೆಗೊಳಿಸಿ ಬೇರೆ ವೈದ್ಯರ ಸೇವೆ ಬಳಸುವಂತೆಯೂ ಮತ್ತು ಈ ಬಗ್ಗೆ ಜಿಪಂ ಸಿಇಒ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.

ಸಿಬ್ಬಂದಿ ಕೊರತೆ ನಡುವೆ ರಬಕವಿ-ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಕಾರ್ಯ ವೈಖರಿ ಸರಿಯಾಗಿದೆ. ಆದರೆ ಪೂರ್ಣ ಸಿಬ್ಬಂದಿ ಇದ್ದರೂ ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಬರುತ್ತಿಲ್ಲವೇಕೆ? ಎಂದು ಪ್ರಶ್ನಿಸಿದಾಗ ಡಾ.ಮಲಘಾಣ ಅಲ್ಲಿನ ವೈದ್ಯರಲ್ಲಿನ ತಿಕ್ಕಾಟದಿಂದ ಕಳಪೆ ಸಾಧನೆಯಾಗಿದೆ. ಕಳೆದ ಕೆಡಿಪಿ ಸಭೆಯಲ್ಲಿ ಶಾಸಕರು ನೀಡಿದ ಸೂಚನೆ ಮೇರೆಗೆ ವೈದ್ಯರಿಗೆ ನೊಟೀಸ್ ನೀಡಲಾಗಿದ್ದು, ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳಿಸದಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದರು.

ಟಿಎಚ್‌ಒ ಅಸಹಾಯಕತೆ:

ವೈದ್ಯರುಗಳಲ್ಲಿ ಪರಸ್ಪರ ಹೊಂದಾಣಿಕೆಯಿಲ್ಲದೇ ಇರುವುದರಿಂದ ಮತ್ತು ಸರಿಯಾಗಿ ಕಾರ್ಯನಿರ್ವಹಣೆ ಮಾಡದ್ದರಿಂದ ಮಹಾಲಿಂಗಪೂರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಕುಸಿತಗೊಂಡಿದ್ದು, ಈಗಾಗಲೇ ಎರಡು ಬಾರಿ ನೋಟೀಸ್ ನೀಡಲಾಗಿದ್ದರೂ ಆಸ್ಪತ್ರೆಯಲ್ಲಿನ ವ್ಯವಸ್ಥೆ ಸರಿಯಾಗಿಲ್ಲವೆಂದು ಮುಧೋಳ ತಾಲೂಕು ಆರೋಗ್ಯಾಧಿಕಾರಿ ಡಾ. ಮಲಘಾಣ ಮಂಗಳವಾರ ನಡೆದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೊಂದು ನುಡಿದರು.

16 ಪುರುಷರು, 8 ಮಹಿಳೆಯರಲ್ಲಿ ಎಚ್‌ಐವಿ ಪಾಜಿಟಿವ್‌:

ಆರೋಗ್ಯ ಇಲಾಖೆಗೆ ಸಂಬಂಧಿತ ಮಾಹಿತಿಗಳನ್ನು ರಬಕವಿ-ಬನಹಟ್ಟಿ ತಾಲೂಕಿನ ಆರೋಗ್ಯಾಧಿಕಾರಿ ಡಾ.ಜಿ.ಎಸ್.ಗಲಗಲಿ ೧೪೬೦ ಗರ್ಭಿಣಿಯರು, ೫೦೧೩ ಹೆಣ್ಣುಮಕ್ಕಳಿಗೆ ಪರೀಕ್ಷೆ ನಡೆಸಲಾಗಿದೆ. ಲಸಿಕಾಕರಣ ಪೂರ್ಣಗೊಳಿಸಲಾಗಿದೆ. ೩೫೯೭ ಪರೀಕ್ಷೆಗಳಲ್ಲಿ ೩೭ ಕ್ಷಯರೋಗಿಗಳು ಮತ್ತು ಮೂವರು ಕುಷ್ಠರೋಗಿಗಳು ಪತ್ತೆಯಾಗಿದ್ದು. ಅವರಿಗೆ ಚಿಕಿತ್ಸೆ ನೀಡಲಾಗಿದೆ. ೩೭ ಶಂಕಿತ ಡೆಂಘೀ ಪ್ರಕರಣಗಳಲ್ಲಿ ೧೨ ಜನರಿಗೆ ಖಚಿತವಾಗಿದೆ. ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಿದೆ. ಎಚ್‌ಐವಿ ಪರೀಕ್ಷೆಗೆ ೫೧೯ ಪರೀಕ್ಷಿತ ಪುರುಷರಲ್ಲಿ ೧೬, ೫೩೭ ಮಹಿಳೆಯರಲ್ಲಿ ೮ ಜನರಿಗೆ ಪಾಸಿಟಿವ್‌ ಬಂದಿದೆ. ೧೫೮ ಗರ್ಭಿಣಿಯರಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯರಲ್ಲಿ ಸ್ತನ, ಗರ್ಭಕೋಶ ಕ್ಯಾನ್ಸರ್ ತಡೆಗಟ್ಟಲು ಲಸಿಕಾಕರಣ ನಿರಂತರ ಸಾಗಿದೆ ಎಂದು ವಿವರಿಸಿದರು.

ಸಚಿವ ತಿಮ್ಮಾಪುರ ಶಿಬಿರಗಳಲ್ಲಿ ಲಸಿಕಾಕರಣ ತೀವ್ರಗೊಳಿಸಲು ಮತ್ತು ಎಚ್‌ಐವಿ ಪೀಡಿತ ನವಜಾತ ಶಿಶುಗಳ, ಮಕ್ಕಳ ಬಗ್ಗೆ ವಿಶೇಷ ಮುತುವರ್ಜಿ ವಹಿಸಲು ಸೂಚಿಸಿದರು.

ಭವನ ಖಾಸಗಿ ಪಾಲು:

ಕೋಟ್ಯಂತರ ಮೊತ್ತದ ಅನುದಾನ ಬಳಸಿ ನಿರ್ಮಿಸಿದ ಕೌಜಲಗಿ ನಿಂಗಮ್ಮ ಸಮುದಾಯ ಭವನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಇದರಿಂದಾಗಿ ನನಗೆ ತೀವ್ರ ನೋವಾಗಿದೆ. ರಬಕವಿಯ ಕನ್ನಡ ಭವನ ಕಟ್ಟಡ ಪೂರ್ಣಗೊಳಿಸಿ ಅಲ್ಲಿ ಕನ್ನಡದ ಮತ್ತು ಸಾಸ್ಕೃತಿಕ ಚಟುವಟಿಕೆಗಳು ನಡೆಯುವಂತಾಗಬೇಕೆಂದು ಆಗ್ರಹಿಸಿದ ಮಾಜಿ ಸಚಿವೆ, ವಿ.ಪ.ಸದಸ್ಯೆ ಉಮಾಶ್ರೀ ಬನಹಟ್ಟಿಯಲ್ಲಿ ನಿರ್ಮಿಸಿರುವ ನೇಕಾರ ಭವನ ಖಾಸಗಿಯವರ ಪಾಲಾಗಿದೆ. ಅದನ್ನು ಜಿಲ್ಲಾಡಳಿತ ಗಮನಿಸಿ ಅಗತ್ಯ ಕ್ರಮ ಜರುಗಿಸಬೇಕೆಂದರು. ಸಚಿವ ತಿಮ್ಮಾಪುರ ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿಗಳ ಗಮನ ಸೆಳೆದು ಮಹಾಲಿಂಗಪುರದ ಕೌಜಲಗಿ ನಿಂಗಮ್ಮ, ರಬಕವಿಯ ಕನ್ನಡ ಭವನ ಮತ್ತು ಬನಹಟ್ಟಿಯ ನೇಕಾರ ಭವನಗಳ ಅಗತ್ಯ ಮಾಹಿತಿ ಕಲೆ ಹಾಕಿ ತಕ್ಷಣ ಕ್ರಮ ಜರುಗಿಸಲು ಸೂಚಿಸಿದರು. ತಾಲೂಕು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸರಿಯಾಗಿ ಮಾಹಿತಿಯೊಂದಿಗೆ ಬರಲು ಮತ್ತು ಸಮರ್ಪಕ ಖಚಿತ ಉತ್ತರ ನೀಡಲು ಎಚ್ಚರಿಕೆ ನೀಡಿದರು.

ಅಂಗನವಾಡಿಗಳ ಮೇಲೆ ನಿಗಾ ವಹಿಸಲು ಮತ್ತು ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಸೂಚಿಸಿದರು. ವೇದಿಕೆಯಲ್ಲಿ ಶಾಸಕ ಸಿದ್ದು ಸವದಿ, ವಿ.ಪ.ಸದಸ್ಯೆ ಉಮಾಶ್ರೀ, ಜಿಲ್ಲಾಧಿಕಾರಿ ಕೆ.ಜಾನಕಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕುರೇರ ಉಪಸ್ಥಿತರಿದ್ದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ್‌ ಗಿರೀಶ ಸ್ವಾದಿ, ವಿಜಯಕುಮಾರ ಕಡಕೋಳ, ಸಂತೋಷ ಮಕ್ಕೋಜಿ, ತಾ.ಪಂ.ಇಒ ಸಿದ್ದಪ್ಪ ಪಟ್ಟಿಹಾಳ, ಸಂಜೀವ ಹಿಪ್ಪರಗಿ, ಡಿವೈಎಸ್ಪಿ ಈ.ಶಾಂತವೀರ, ಪಶುವೈದ್ಯಾಧಿಕಾರಿ ಬಸವರಾಜ ಗೌಡರ, ಬಿಇಒ ಎ.ಕೆ.ಬಸನ್ನವರ, ಸಿಪಿಐ ಸಂಜೀವ ಬಳಿಗಾರ, ಠಾಣಾಧಿಕಾರಿ ಅಪ್ಪು ಐಗಳಿ, ಶಾಂತಾ ಹಳ್ಳಿ, ಪೌರಾಯುಕ್ತ ಜಗದೀಶ ಈಟಿ, ಲಕ್ಷ್ಮೀ ಅಷ್ಟಗಿ ಸೇರಿದಂತೆ ಪ್ರಮುಖರಿದ್ದರು.

---

ಬಾಕ್ಸ್‌

ಡೆಂಘೀ ಹೆಚ್ಚಳವಾದ್ರೆ ತಾಲೂಕಾಧಿಕಾರಿಯೇ ಹೊಣೆ

ಪ್ರವಾಹ ನಿರ್ವಹಣೆಯ ವಿವರದ ಸಂದರ್ಭದಲ್ಲಿ ಜಮಖಂಡಿ ತಾಪಂ ಇಒ ಸಂಜಯ ಜಿನ್ನೂರ ಮೊಬೈಲ್‌ನಲ್ಲಿ ಮಗ್ನರಾಗಿದ್ದರಿಂದ ತರಾಟೆಗೆ ತೆಗೆದುಕೊಂಡರು. ಪ್ರವಾಹ ಪ್ರದೇಶದಲ್ಲಿ ಫಾಗಿಂಗ್ ದಿನನಿತ್ಯ ಎರಡು ಬಾರಿ ನಡೆಸುವಂತೆ ಸೂಚಿಸಿದ ಸಚಿವರು ಪ್ರವಾಹದ ಬಳಿಕ ಪರಿಸ್ಥಿತಿ ಇನ್ನಷ್ಟು ಭೀಕರವಾಗುತ್ತದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚುವುದರಿಂದ ಯಾವುದೇ ರೀತಿಯಲ್ಲಿ ಸಂತ್ರಸ್ತರ ಜೀವಕ್ಕೆ ಅಪಾಯವಾಗದಂತೆ ಮುಂಜಾಗ್ರತೆ ವಹಿಸಬೇಕು. ಫಾಗಿಂಗ್ ತಪ್ಪದೇ ನಡೆಸಿ ಪ್ರತಿ ತಿಂಗಳು ಆರೋಗ್ಯ ಶಿಬಿರ ಏರ್ಪಡಿಸಿ ಗ್ರಾಮೀಣರ ಆರೋಗ್ಯ ರಕ್ಷಿಸಿ. ಡೆಂಘೀ ಹೆಚ್ಚಳಗೊಂಡಲ್ಲಿ ತಾಲೂಕಾಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆಂದು ಸಚಿವರು ಎಚ್ಚರಿಸಿದರು.

Share this article