ಆರೋಗ್ಯಯುತ ಸಮಾಜಕ್ಕೆ ಒಳ್ಳೆಯ ಹವ್ಯಾಸ ಇರಲಿ

KannadaprabhaNewsNetwork |  
Published : Aug 09, 2024, 12:37 AM IST
ಕ್ಯಾಪ್ಷನಃ8ಕೆಡಿವಿಜಿ39ಃದಾವಣಗೆರೆಯಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿ ಒಂದು ನೆನಪು ಕಾರ್ಯಕ್ರಮ ವನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಉದ್ಘಾಟಿಸಿ ಮಾತನಾಡಿದರು. ......ಕ್ಯಾಪ್ಷನಃ8ಕೆಡಿವಿಜಿ40ಃದಾವಣಗೆರೆಯ ಗಾಂಧಿ ಭವನದಲ್ಲಿಂದು ನಡೆದ ಕ್ವಿಟ್ ಇಂಡಿಯಾ ಚಳುವಳಿ ಒಂದು ನೆನಪು ಕಾರ್ಯಕ್ರಮದಲ್ಲಿ ಗಾಂಧೀಜಿ ಪುತ್ಥಳಿಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಇತರರು ಪುಷ್ಪ ಅರ್ಪಿಸಿದರು. | Kannada Prabha

ಸಾರಾಂಶ

ಮಕ್ಕಳು ವ್ಯಸನಗಳಿಗೆ ಬಲಿಯಾಗದೆ ತಮ್ಮ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಬೇಕಾದ ಆಟ, ಜ್ಞಾನಾರ್ಜನೆ ಕಡೆ ಹೆಚ್ಚು ಒತ್ತು ಕೊಡಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಕ್ಕಳು ವ್ಯಸನ ಮುಕ್ತರಾಗಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕಾಗಿ ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ತಮ್ಮ ದೈಹಿಕ ಹಾಗೂ ಮಾನಸಿಕ ವಿಕಸನಕ್ಕಾಗಿ ಸದಾ ಕ್ರಿಯಾಶೀಲರಾಗಿರಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಕರೆ ನೀಡಿದರು. ಅವರು ಗುರುವಾರ ರಾಮನಗರದಲ್ಲಿನ ಗಾಂಧಿ ಭವನದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ಎನ್ಎಸ್ಎಸ್, ಭಾರತ ಸೇವಾದಳ, ಗ್ರಾಮ ಸ್ವರಾಜ್ ಅಭಿಯಾನ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ವ್ಯಸನ ಮುಕ್ತ ಶಿಬಿರ ಮತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಏರ್ಪಡಿಸಲಾದ ಕ್ವಿಟ್ ಇಂಡಿಯಾ ಚಳುವಳಿ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಕ್ಕಳು ವ್ಯಸನಗಳಿಗೆ ಬಲಿಯಾಗದೆ ತಮ್ಮ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಬೇಕಾದ ಆಟ, ಜ್ಞಾನಾರ್ಜನೆ ಕಡೆ ಹೆಚ್ಚು ಒತ್ತು ಕೊಡಬೇಕು. ಈಗಿನ ಮಕ್ಕಳು ಮೊಬೈಲ್ ಹೆಚ್ಚು ಬಳಸುತ್ತಿದ್ದು ಇದು ಸಹ ಒಂದು ರೀತಿ ವ್ಯಸನವಾಗಿದೆ. ಇದರಿಂದ ಆರೋಗ್ಯಕ್ಕೆ ಅಪಾಯವಾಗಲಿದ್ದು ಮುಂದೊಂದು ದಿನ ಕುತ್ತಿಗೆ, ಬೆನ್ನು, ಕೈ ನೋವು ಎಂದು ಹೇಳಬಹುದು. ಕಳೆದಿಪ್ಪತ್ತು ವರ್ಷಗಳಿಂದ ಮೊಬೈಲ್ ಬಂದಿದ್ದು ಈಗಿನ ಮಕ್ಕಳಿಗೆ ಹುಟ್ಟಿನಿಂದಲೇ ಮೊಬೈಲ್ ಗೀಳು ಬೆಳೆಸಿಕೊಳ್ಳುವ ಅವಕಾಶವಿದೆ. ಇದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುವ ಜೊತೆಗೆ ಒತ್ತಡವು ಹೆಚ್ಚಲಿದೆ. ಈ ನಿಟ್ಟಿನಲ್ಲಿ ಅನಾವಶ್ಯಕ ಮೊಬೈಲ್ ಬಳಕೆ ಕಡಿಮೆ ಮಾಡಿ ತಮ್ಮ ಆರೋಗ್ಯ ಮತ್ತು ಮಾನಸಿಕ ಸದೃಢತೆಗೆ ಹೆಚ್ಚಿನ ಒತ್ತು ನೀಡಲು ತಿಳಿಸಿದರು.ಗ್ರಂಥಾಲಯಕ್ಕೆ ಪುಸ್ತಕಗಳು:

ಗಾಂಧಿ ಭವನದಲ್ಲಿನ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಿಲ್ಲಾ ಆಡಳಿತಕ್ಕೆ ಮತ್ತು ನನಗೆ ನೀಡಲಾಗುವ ಪುಸ್ತಕಗಳನ್ನು ಈ ಗ್ರಂಥಾಲಯಕ್ಕೆ ಕಳುಹಿಸಲಾಗುತ್ತದೆ. ಓದುಗರು ಗಾಂಧಿ ಭವನದ ಗ್ರಂಥಾಲಯಕ್ಕೆ ಆಗಮಿಸಿ ದಿನಿತ್ಯದ ಪತ್ರಿಕೆಗಳು ಮತ್ತು ಇಲ್ಲಿ ಸಿಗುವ ಸ್ಪರ್ಧಾತ್ಮಕ ಪರೀಕ್ಷೆ, ಕಥೆ, ಕಾದಂಬರಿ ಕುರಿತ ಅತ್ಯುತ್ತಮವಾದ ಪುಸ್ತಕ ಓದುವಂತಾಗಬೇಕೆಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಮಾತನಾಡಿ, ವ್ಯಸನಗಳಿಗೆ ದಾಸರಾಗಬಾರದು. ಇತ್ತೀಚೆಗೆ ಹೆಚ್ಚುತ್ತಿರುವ ಪಾಶ್ಚಾತ್ಯ ಸಂಸ್ಕೃತಿಯಿಂದ ಈ ಸಂಖ್ಯೆ ಹೆಚ್ಚುತ್ತಿದೆ. ವ್ಯಸನ ಆರಂಭದಲ್ಲಿ ಕುತೂಹಲ ಹುಟ್ಟಿಸುತ್ತದೆ, ನಂತರ ಇದರ ಪರಿಣಾಮ ಆರಂಭವಾಗುತ್ತದೆ. ತಂಬಾಕು ಜಗಿಯುವವರು ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆಗೆ ಬಂದಾಗ ತಪ್ಪು ಮಾಡಿದೆ ಎಂದು ಹೇಳುತ್ತಾರೆ. ದೇಶ ಸದೃಢವಾಗಲು ಆರೋಗ್ಯವಂತ ಮಾನವ ಸಂಪನ್ಮೂಲ ಇರಬೇಕೆಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯ ದಾದಾಪೀರ್ ನವಿಲೆಹಾಳ್ ಕ್ವಿಟ್ ಇಂಡಿಯಾ ಚಳುವಳಿ ಕುರಿತಂತೆ ಉಪನ್ಯಾಸ ನೀಡಿ, ಸ್ವಾತಂತ್ರ್ಯ ಚಳವಳಿಯಲ್ಲಿ ಮಹಾತ್ಮ ಗಾಂಧೀಜಿಯವರ ಪಾತ್ರ ಪ್ರಮುಖವಾಗಿದೆ. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಆರಂಭವಾದ ಚಳವಳಿ ಸ್ವಾತಂತ್ರ್ಯಗಳಿಸಲು 90 ವರ್ಷಗಳ ಅವಧಿ ಬೇಕಾಯಿತು. ಮಹಾತ್ಮ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಾಗಿನಿಂದ ಅಸಹಕಾರ ಚಳುವಳಿ ಮೂಲಕ ಇದು ತೀವ್ರ ಸ್ವರೂಪ ಪಡೆದುಕೊಂಡಿತು. ಕಾನೂನುಭಂಗ ಚಳುವಳಿ, ಉಪ್ಪಿನಸತ್ಯಾಗ್ರಹ ನಂತರ ಅಂತಿಮ ಘಟ್ಟವಾಗಿ ಮಾಡು ಇಲ್ಲವೇ ಮಡಿ, ಭಾರತ ಬಿಟ್ಟು ತೂಲಗಿ ಚಳವಳಿಯಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ನೀಡಲೇಬೇಕಾದ ಸ್ಥಿತಿಗೆ ತಲುಪಿದ್ದರಿಂದ ಕ್ವಿಟ್ ಇಂಡಿಯಾ ಬಹಳ ಮಹತ್ವವಾದ ಚಳವಳಿಯಾಗಿರುತ್ತದೆ ಎಂದರು.

ಇಂದಿನ ವಿದ್ಯಾರ್ಥಿಗಳು ದೇಶದ ಸ್ವಾತಂತ್ರ್ಯ ಇತಿಹಾಸದ ಬಗ್ಗೆ ತಿಳಿದುಕೊಳ್ಳುವ ಮೂಲಕ ದೇಶದ ಬಗೆಗಿನ ಗೌರವ ಭಾವನೆ ಬೆಳೆಸಿಕೊಂಡು ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ತಮ್ಮದಾಗಿರಬೇಕೆಂದು ತಿಳಿಸಿದರು. ಮನೋವೈದ್ಯ ಡಾ.ಮರುಳಸಿದ್ದಪ್ಪ ಮಾತನಾಡಿ, ಮದ್ಯ ಮತ್ತು ಮಾದಕ ವಸ್ತುಗಳಿಂದಾಗಿ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಸಾಕಷ್ಟು ನಷ್ಟವಾಗಲಿದೆ. ಈ ವಸ್ತುಗಳ ವ್ಯಸನಿಗಳಾಗಿದ್ದಲ್ಲಿ ಇದರಿಂದ ಮುಕ್ತಿ ಹೊಂದಲು ಚಿಕಿತ್ಸೆ ಲಬ್ಯವಿದೆ. ವ್ಯಸನ ಮುಕ್ತರನ್ನಾಗಿಸಲು ಚಿಗಟೇರಿ ಜಿಲ್ಲಾ ಆಸ್ಪತ್ರೆ ಮತ್ತು ಎಸ್.ಎಸ್. ಮತ್ತು ಬಾಪೂಜಿ ಆಸ್ಪತ್ರೆಯಲ್ಲಿ ಮನೋವೈದ್ಯರಿದ್ದು ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.

ಈ ವೇಳೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ, ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ, ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಮಂಜುನಾಥ ಪಾಟೀಲ್, ಪದವಿ ಪೂರ್ವ ಶಿಕ್ಷಣ ಇಲಾಖೆ ಕಾಲೇಜು ಪ್ರಾಂಶುಪಾಲ ಸಂಘದ ಅಧ್ಯಕ್ಷ ಪ್ರದೀಪ್‌ಕುಮಾರ್, ಗ್ರಾಮ ಸ್ವರಾಜ್ ಅಭಿಯಾನದ ಅವರಗೆರೆ ರುದ್ರಮುನಿ, ಜಿಲ್ಲಾ ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳ ಸಂಘದ ಅಧ್ಯಕ್ಷ ಐಗೂರು ತಿಮ್ಮಣ್ಣ, ರೈತ ಮುಖಂಡ ತೇಜಸ್ವಿ ಪಟೇಲ್ ಹಾಗೂ ಎನ್‌ಎಸ್‌ಎಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿರಿಯ ಸಹಾಯಕ ನಿರ್ದೇಶಕ ಬಿ.ಧನಂಜಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಎಸ್‌ಎಸ್ ಜಿಲ್ಲಾ ಕಾರ್ಯಕ್ರಮ ಸಂಯೋಜನಾಧಿಕಾರಿ ನಾಗರಾಜ್ ನಿರೂಪಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ