ಧಾರವಾಡ:
ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡರ ಹೇಳಿದರು.ಇಲ್ಲಿನ ಕರ್ನಾಟಕ ಕಲಾ ಕಾಲೇಜಿನ ಜಿಮ್‌ಖಾನ್ ವಿಭಾಗವು ಸೃಜನಾ ರಂಗಮಂದಿರದಲ್ಲಿ ಆಯೋಜಿಸಿದ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದ ಅವರು, ಶೋಕಿ, ಆಡಂಬರದಿಂದ ಉನ್ನತ ಹುದ್ದೆಗೇರಲು ಸಾಧ್ಯವಿಲ್ಲ. ಬದಲಾಗಿ ಕಠಿಣ ಪರಿಶ್ರಮ, ಶ್ರದ್ಧೆ, ಸಮಯ ಪಾಲನೆ, ಕ್ರಿಯಾಶೀಲತೆ ಮತ್ತು ಕೌಶಲ್ಯಗಳಿಂದ ಮಾತ್ರ ಉನ್ನತ ಸ್ಥಾನ ತಲುಪಲು ಸಾಧ್ಯ. ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಲು ನಾನು ಕಲಿತ ಕರ್ನಾಟಕ ಮಹಾವಿದ್ಯಾಲಯದ ಶೈಕ್ಷಣಿಕ ಪರಿಸರ ಅನುಕೂಲವಾಯಿತು ಎಂದು ತಮ್ಮ ಪಿಯುಸಿ ಮತ್ತು ಪದವಿ ಶಿಕ್ಷಣದ ದಿನಗಳನ್ನು ನೆನಸಿಕೊಂಡರು.
ಬಸವಶ್ರೀ ಪ್ರಶಸ್ತಿ ಪುರಸ್ಕೃತ ಸಂಶೋಧಕ ಡಾ. ವೀರಣ್ಣ ರಾಜೂರ, ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಎಲ್ಲರೂ ಪ್ರತಿಭಾವಂತರೇ. ಅಂತಹ ಪ್ರತಿಭಾವಂತರನ್ನು ಗುರುತಿಸುವ ಶೈಕ್ಷಣಿಕ ಪರಿಸರ ಕರ್ನಾಟಕ ಕಾಲೇಜಿನಂತೆ ಉಳಿದ ಕಾಲೇಜುಗಳು ನೀಡಬೇಕು. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಸಾಧಕರಾಗಬೇಕು. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವ ಸಮಗ್ರ ಶಿಕ್ಷಣದ ಪಠ್ಯ ಅಳವಡಿಸುವುದು ಇಂದಿನ ಅಗತ್ಯವಿದೆ ಎಂದರು.ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಸಂಸ್ಕಾರ, ಅಧ್ಯಾತ್ಮ, ಯೋಗದಂತಹ ಚಟುವಟಿಕೆಗಳಿಗೆ ಪೂರಕವಾಗುವ ಸಮಗ್ರ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿತ್ತು. ಬ್ರಿಟಿಷರ ಕಾಲಘಟ್ಟದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಬ್ರಿಟಿಷ್ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಲಾಯಿತು ಎಂದ ಅವರು, ಪ್ರಸ್ತುತ ಜೀವನದಲ್ಲಿ ಸವಾಲುಗಳನ್ನು ಎದುರಿಸುವ ಶಿಕ್ಷಣದ ಅವಶ್ಯಕತೆ ಇದೆ ಎಂದು ಹೇಳಿದರು.
ಜಿಮ್‌ಖಾನ್ ವಿಭಾಗದ ಕಾರ್ಯಾಧ್ಯಕ್ಷ ಡಾ. ಎಂ.ಆರ್. ಹಿರೇಮಠ, ಉಪಾಧ್ಯಕ್ಷ ಡಾ. ಸುಕನ್ಯಾ ಜಾಲಿಹಾಳ ಮಾತನಾಡಿದರು. ಇದೇ ವೇಳೆ 2022-23ನೇ ಶೈಕ್ಷಣಿಕ ಸಾಲಿನ ಐಚ್ಛಿಕ ವಿಷಯಗಳಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ, ಯುವಜನೋತ್ಸವ, ಕ್ರೀಡಾ, ಪ್ರಬಂಧ, ಕಾವ್ಯ ಸ್ಪರ್ಧೆ, ಚರ್ಚಾಸ್ಪರ್ಧೆ, ಮೊದಲಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆಗೈದವರಿಗೆ ಪ್ರಶಸ್ತಿ ಪತ್ರ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಖೇಲೋ ಇಂಡಿಯಾ, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ಸ್ಟಿಪಲ್ ಜಂಪ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ''''''''ಚಿನ್ನದ ಪದಕ'''''''' ಪಡೆದ ಕಾಲೇಜಿನ ಬಿ. ಕಾಮ್ ವಿದ್ಯಾರ್ಥಿ ನಾಗರಾಜ ದಿವಟೆ ಅವರನ್ನು ಗೌರವಿಸಲಾಯಿತು.ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಡೀನ್ ಡಾ. ಮುಕುಂದ ಲಮಾಣಿ, ಸೃಷ್ಟಿ ದೇಶಪಾಂಡೆ, ಲಾವಣ್ಯ ತೋಟಗೇರ ಇದ್ದರು.