ಒಟ್ಟು ₹44.54 ಕೋಟಿ ಆದಾಯ ನಿರೀಕ್ಷೆ । ಕುಡಿಯುವ ನೀರಿನ ಸಮರ್ಪಕ ಸರಬರಾಜಿಗೆ ₹ 2.12 ಕೋಟಿ
ಕನ್ನಡಪ್ರಭ ವಾರ್ತೆ ಹಾವೇರಿಹಾವೇರಿ ನಗರಸಭೆಯ 2024–25ನೇ ಸಾಲಿನ ಆಯವ್ಯಯ ಮಂಡನಾ ಸಭೆಯಲ್ಲಿ ನಗರಸಭೆಯ ಆಡಳಿತಾಧಿಕಾರಿ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ ₹ 11.42 ಲಕ್ಷದ ಉಳಿತಾಯ ಬಜೆಟ್ ಮಂಡಿಸಿದರು.
ಪ್ರಾರಂಭಿಕ ಶುಲ್ಕ ₹6.10 ಕೋಟಿ, ನಿರೀಕ್ಷಿತ ಜಮೆಗಳು ₹25.72 ಕೋಟಿ, ನಿರೀಕ್ಷಿತ ಬಂಡವಾಳ ₹ 9.55 ಕೋಟಿ, ನಿರೀಕ್ಷಿತ ಅಸಾಮಾನ್ಯ ಜಮೆ ₹ 9.27 ಕೋಟಿ ಸೇರಿದಂತೆ ಒಟ್ಟು ₹44.54 ಕೋಟಿ ಆದಾಯ ನಿರೀಕ್ಷಿಸಲಾಗಿದೆ.ನಿರೀಕ್ಷಿತ ರಾಜಸ್ವ ಪಾವತಿ ₹23.55 ಕೋಟಿ, ನಿರೀಕ್ಷಿತ ಬಂಡವಾಳ ಪಾವತಿ ₹ 11.61 ಕೋಟಿ, ನಿರೀಕ್ಷಿತ ಅಸಾಮಾನ್ಯ ಪಾವತಿ ₹ 9.27 ಕೋಟಿ ಸೇರಿದಂತೆ ಒಟ್ಟು ₹ 44.43 ಕೋಟಿ ನಿರೀಕ್ಷಿತ ಖರ್ಚನ್ನು ಅಂದಾಜು ಮಾಡಲಾಗಿದೆ.
ನಗರಸಭೆಯ ಸ್ವಂತ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಕರ, ಅಭಿವೃದ್ಧಿ ಕರ, ಮಳಿಗೆ ಬಾಡಿಗೆ ಹಾಗೂ ಇತರೆ ಶುಲ್ಕಗಳಿಂದ ಒಟ್ಟು ₹16.02 ಕೋಟಿ ಆದಾಯ ನಿರೀಕ್ಷಿಸಲಾಗಿದೆ.ನಗರದಲ್ಲಿನ ಎಲ್ಲ ನಾಗರಿಕರಿಗೂ ಕುಡಿಯುವ ನೀರಿನ ಸಮರ್ಪಕ ಸರಬರಾಜಿಗಾಗಿ ಈಗಾಗಲೇ ನಗರದಲ್ಲಿನ 24x7 ಯೋಜನೆ ಅನುಷ್ಠಾನಗೊಂಡು ಕಾಮಗಾರಿ ಪ್ರಗತಿಯ ಹಂತದಲ್ಲಿರುತ್ತದೆ. ನೀರು ಸರಬರಾಜು ನಿರ್ವಹಣೆ ಮತ್ತು ವಾಲ್‌ಮನ್‌ಗಳ ವೇತನ ನಿರ್ವಹಣೆಗಾಗಿ ಒಟ್ಟಾರೆಯಾಗಿ ₹ 2.12 ಕೋಟಿ ಮೀಸಲಿರಿಸಲಾಗಿದೆ.
ರಸ್ತೆ, ಚರಂಡಿ ದುರಸ್ತಿ ಹಾಗೂ ನಿರ್ಮಾಣಕ್ಕಾಗಿ ₹3.95 ಕೋಟಿ, ಬೀದಿದೀಪಗಳ ವಾರ್ಷಿಕ ನಿರ್ವಹಣೆಗೆ ₹1.15 ಕೋಟಿ, ಸಾರ್ವಜನಿಕ ಶೌಚಾಲಯ ನಿರ್ಮಾಣ ಮತ್ತು ದುರಸ್ತಿಗಾಗಿ ₹20 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಲ್ಯಾಂಡ್ ಫಿಲ್ ಸೈಟ್ ಅಭಿವೃದ್ಧಿಗಾಗಿ ₹1.54 ಕೋಟಿ, ನಗರಸಭೆಯ ಹೈಸ್ಕೂಲ್ ಅಭಿವೃದ್ಧಿಗಾಗಿ ₹ 5 ಲಕ್ಷ, ಉದ್ಯಾನಗಳ ಅಭಿವೃದ್ಧಿಗೆ ₹50 ಲಕ್ಷ ವಿನಿಯೋಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.ವೃತ್ತಗಳ ಅಭಿವೃದ್ಧಿಗೆ ₹30 ಲಕ್ಷ:
ನಗರದ ಸೌಂದರ್ಯ ಹೆಚ್ಚಿಸಲು ಆಯ್ದ ವೃತ್ತಗಳ ಅಭಿವೃದ್ಧಿಗಾಗಿ ₹30 ಲಕ್ಷ, ಮಳೆ ನೀರು ಚರಂಡಿ ನಿರ್ಮಾಣಕ್ಕಾಗಿ ₹20 ಲಕ್ಷ, ಅಂಗನವಾಡಿ ಕಟ್ಟಡ ನಿರ್ಮಾಣ ಮತ್ತು ದುರಸ್ತಿಗಾಗಿ ₹10 ಲಕ್ಷ, ಸ್ಮಶಾನಗಳ ಅಭಿವೃದ್ದಿ ಮತ್ತು ವಿದ್ಯುತ್ ಚಿತಾಗಾರಕ್ಕಾಗಿ ₹ 35 ಲಕ್ಷ, ನಗರಸಭೆಯ ಹುತಾತ್ಮರ ಸ್ಮಾರಕಗಳ ಅಭಿವೃದ್ಧಿಗೆ ₹5 ಲಕ್ಷ, ನಗರದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅನುಷ್ಠಾನಕ್ಕೆ ₹20 ಲಕ್ಷ, ವಾಣಿಜ್ಯಮಳಿಗೆಗಳ ನಿರ್ಮಾಣಕ್ಕೆ ₹65 ಲಕ್ಷ, ಕಚೇರಿ ಕಟ್ಟಡಕ್ಕೆ ಸೋಲಾರ್ ವ್ಯವಸ್ಥೆ ಕಲ್ಪಿಸಲು ₹15 ಲಕ್ಷ, ಕೆರೆ ಅಭಿವೃದ್ಧಿಗೆ ₹30 ಲಕ್ಷ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.ಸರ್ಕಾರದ ಅನುದಾನ ನಿರೀಕ್ಷೆ:
ಸರ್ಕಾರದಿಂದ ಬಿಡುಗಡೆಯಾಗುವ ನಿರೀಕ್ಷಿತ ಅನುದಾಗಳಾದ ಎಸ್.ಎಫ್.ಸಿ ಮುಕ್ತನಿಧಿಯಿಂದ ₹4.29 ಕೋಟಿ, ಎಸ್.ಎಫ್.ಸಿ. ವಿದ್ಯುತ್ ಅನುದಾನದಿಂದ ₹4.50 ಕೋಟಿ, ಎಸ್.ಎಫ್.ಸಿ ವೇತನ ಅನುದಾನದಿಂದ ₹5.20 ಕೋಟಿ, ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ 15ನೇ ಹಣಕಾಸು ಯೋಜನೆಯಡಿ ₹7.05 ಕೋಟಿ, ಎಸ್.ಎಫ್.ಸಿ. ಕುಡಿಯುವ ನೀರಿನ ಯೋಜನೆಗಾಗಿ ₹25 ಲಕ್ಷ ಹಾಗೂ ಅಮೃತ್ (2.0) ನಗರ ಯೋಜನೆಯಡಿ ₹55 ಲಕ್ಷ ಅನುದಾನ ನಿರೀಕ್ಷಿಸಲಾಗಿದೆ ಎಂದು ರಘುನಂದನ ಮೂರ್ತಿ ತಿಳಿಸಿದರು.