ಅಡಕೆಗೆ ಮಾರು ಹೋಗುತ್ತಿರುವ ಹಾವೇರಿ ರೈತರು

KannadaprabhaNewsNetwork | Published : Jan 18, 2025 12:46 AM

ಸಾರಾಂಶ

ಗೋವಿನಜೋಳ, ಶುಂಠಿ, ಹತ್ತಿ, ಮೆಣಸಿನಕಾಯಿ ಇತ್ಯಾದಿ ಅಲ್ಪಾವಧಿ ಹಾಗೂ ಮಾವು ಬೆಳೆ ಬೆಳೆಯುತ್ತಿದ್ದ ಜಿಲ್ಲೆಯ ರೈತರು ಅಡಕೆ ಬೆಳೆಯತ್ತ ಮಾರು ಹೋಗಿದ್ದಾರೆ. ಕೇವಲ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಅಡಕೆ ಬೆಳೆ ವಿಸ್ತಾರಗೊಂಡಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಗೋವಿನಜೋಳ, ಶುಂಠಿ, ಹತ್ತಿ, ಮೆಣಸಿನಕಾಯಿ ಇತ್ಯಾದಿ ಅಲ್ಪಾವಧಿ ಹಾಗೂ ಮಾವು ಬೆಳೆ ಬೆಳೆಯುತ್ತಿದ್ದ ಜಿಲ್ಲೆಯ ರೈತರು ಅಡಕೆ ಬೆಳೆಯತ್ತ ಮಾರು ಹೋಗಿದ್ದಾರೆ. ಕೇವಲ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಅಡಕೆ ಬೆಳೆ ವಿಸ್ತಾರಗೊಂಡಿದೆ.ಅರೆಮಲೆನಾಡು ಪ್ರದೇಶವಾದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಿಂತ ಕೃಷಿ ಬೆಳೆಗೇ ರೈತರು ಒತ್ತು ನೀಡುತ್ತ ಬಂದಿದ್ದರು. ಹತ್ತಿ, ಗೋವಿನಜೋಳ ಪ್ರಮುಖ ಬೆಳೆಯಾಗಿದ್ದವು. ಇತ್ತೀಚಿನ ವರ್ಷಗಳಲ್ಲಿ ಶುಂಠಿ, ಮಾವು ಬೆಳೆಯತ್ತ ಒಲವು ತೋರಿದ್ದ ರೈತರು, ಕಳೆದ ನಾಲ್ಕೈದು ವರ್ಷಗಳಿಂದ ಈಚೆಗೆ ಅಡಕೆ ಬೆಳೆಯತ್ತ ಚಿತ್ತ ನೆಟ್ಟಿದ್ದಾರೆ. ಹಾನಗಲ್ಲ, ಹಿರೇಕೆರೂರು, ರಟ್ಟೀಹಳ್ಳಿ, ರಾಣಿಬೆನ್ನೂರು, ಬ್ಯಾಡಗಿ ತಾಲೂಕುಗಳಲ್ಲಿ ಅಡಕೆ ಕ್ಷೇತ್ರ ಏಕಾಏಕಿ ಹೆಚ್ಚುತ್ತಿರುವುದು ರೈತರ ಅಡಕೆ ಬೆಳೆ ಮೇಲಿನ ಆಸಕ್ತಿಗೆ ಸಾಕ್ಷಿಯಾಗಿದೆ. ಅಡಕೆಯತ್ತ ಮುಖ:ಮಲೆನಾಡು ಭಾಗದ ಶಿರಸಿ ತಾಲೂಕಿಗೆ ಹೊಂಡಿಕೊಂಡಿರುವ ಹಾನಗಲ್ಲ ತಾಲೂಕು, ಶಿಕಾರಿಪುರದ ಪಕ್ಕದಲ್ಲಿರುವ ಹಿರೇಕೆರೂರು, ರಟ್ಟೀಹಳ್ಳಿ ತಾಲೂಕುಗಳಲ್ಲಿ ಮೊದಲಿನಿಂದಲೂ ಅಡಕೆ ಬೆಳೆಯುವ ರೈತರಿದ್ದರೂ ಆ ಸಂಖ್ಯೆ ಹೆಚ್ಚಿರಲಿಲ್ಲ. ಗೋವಿನಜೋಳ, ಹತ್ತಿ, ಮೆಣಸಿಕಾಯಿ ಬೆಳೆಯನ್ನೇ ನೆಚ್ಚಿಕೊಂಡಿದ್ದರು. ಅದರಲ್ಲೂ ಬೀಜೋತ್ಪಾದನೆಗೇ ಅನೇಕ ರೈತರು ಒತ್ತು ನೀಡುತ್ತ ಬಂದಿದ್ದರು. ಅಲ್ಲಿಂದ ನಿಧಾನವಾಗಿ ಶುಂಠಿ, ಮಾವು ಬೆಳೆಯತ್ತ ಒಲವು ತೋರಿದ್ದರು. ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಅಡಕೆ ಬೆಳೆಯುವವರ ಸಂಖ್ಯೆ ಹೆಚ್ಚಿದ್ದು, ಅದರಲ್ಲೂ ಕಳೆದ ಎರಡು ವರ್ಷಗಳಿಂದ ಮತ್ತಷ್ಟು ಹೆಚ್ಚಿದೆ.

2020ರ ವರೆಗೆ ಜಿಲ್ಲೆಯಲ್ಲಿ 7087 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿತ್ತು. 2020ನೇ ಸಾಲಿನಲ್ಲಿ 899 ಹೆಕ್ಟೇರ್ ಹೆಚ್ಚಿದರೆ, 2020-21ರಲ್ಲಿ 1593 ಹೆಕ್ಟೇರ್‌ ವಿಸ್ತಾರಗೊಂಡಿತು. 2021-22ರಲ್ಲಿ 12547 ಹೆಕ್ಟೇರ್‌ಗೆ ತಲುಪಿದರೆ, 22-23ನೇ ಸಾಲಿನಲ್ಲಿ ಅದು 17418 ಹೆಕ್ಟೇರ್‌ಗೆ ಬಂದಿತು. 2023-24ರಲ್ಲಿ ಜಿಲ್ಲೆಯಲ್ಲಿ18,223 ಹೆಕ್ಟೇರ್‌ ಪ್ರದೇಶ ಅಡಕೆ ಬೆಳೆ ವ್ಯಾಪಿಸಿಕೊಂಡಿದೆ. ಅಂದರೆ, ಕೇವಲ 5 ವರ್ಷಗಳಲ್ಲಿ ಅಡಕೆ ಬೆಳೆ ಕ್ಷೇತ್ರ 11 ಸಾವಿರ ಹೆಕ್ಟೇರ್‌ ಹೆಚ್ಚಿದಂತಾಗಿದೆ. ಅದರಲ್ಲೂ ಹಾನಗಲ್ಲ ತಾಲೂಕಿನಲ್ಲಿ ಅಡಕೆ ಬೆಳೆ ವ್ಯಾಪಕವಾಗಿ ಹೆಚ್ಚುತ್ತಿದೆ. 2021ರಲ್ಲಿ 6,400 ಹೆಕ್ಟೇರ್‌ನಲ್ಲಿದ್ದ ಬೆಳೆ ಸದ್ಯ 9,600 ಹೆಕ್ಟೇರ್‌ಗೆ ತಲುಪಿದೆ. ರಾಣಿಬೆನ್ನೂರಿನಲ್ಲೂ 2,765 ಹೆಕ್ಟೇರ್‌ನಲ್ಲಿ ಅಡಕೆ ಬೆಳೆಯಲಾಗುತ್ತಿದೆ.

ಉತ್ತಮ ಧಾರಣೆ, ನೀರಾವರಿ:ಜಿಲ್ಲೆಯ ಹಾನಗಲ್ಲ, ಹಿರೇಕೆರೂರು ಮತ್ತು ಬ್ಯಾಡಗಿ ತಾಲೂಕುಗಳಲ್ಲಿ ಕೆರೆ ತುಂಬಿಸುವ ಯೋಜನೆ, ಹಲವು ಏತ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿದ್ದರ ಫಲವಾಗಿ ಬಹುವಾರ್ಷಿಕ ಅಡಕೆ ಬೆಳೆಯಲು ರೈತರು ಒಲವು ತೋರುತ್ತಿದ್ದಾರೆ. ಉತ್ತಮ ಮಳೆಯಾಗುತ್ತಿರುವುದರಿಂದ ಕೆರೆಗಳು ಅಂತರ್ಜಲ ಮಟ್ಟವೂ ಏರಿಕೆಯಾಗಿದೆ. ಬೋರ್‌ವೆಲ್ ಮೂಲಕ ನೀರಾವರಿ ಸೌಲಭ್ಯ ಮಾಡಿಕೊಂಡು ಅನೇಕರು ಅಡಕೆ ಬೆಳೆಯುತ್ತಿದ್ದಾರೆ. ಅಡಕೆ ದರವೂ ರೈತರನ್ನು ಆಕರ್ಷಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಸ್ಥಿರವಾದ ದರ ಇರುವುದರಿಂದ ಈ ಬೆಳೆಯತ್ತ ರೈತರು ಚಿತ್ತ ನೆಟ್ಟಿದ್ದಾರೆ. ನಿರ್ವಹಣೆಗೆ ಕೂಲಿ ಕಾರ್ಮಿಕರ ಸಂಖ್ಯೆಯೂ ಹೆಚ್ಚು ಬೇಕಿಲ್ಲದಿರುವುದು ಅನುಕೂಲಕರವಾಗಿದೆ. ಇದರೊಂದಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಡಕೆ ಬೆಳೆ ವಿಸ್ತರಣೆಗೆ ಅವಕಾಶ ದೊರೆತ ಮೇಲೆ ಅನೇಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೇರೆ ಬೆಳೆಗಳು ಪ್ರತಿ ವರ್ಷ ನಷ್ಟವಾಗಿ ರೈತರು ಬಹುವಾರ್ಷಿಕ ಬೆಳೆಯತ್ತ ಮನಸ್ಸು ಮಾಡುತ್ತಿದ್ದಾರೆ. ಬರ ಬಂದಾಗ ಸಮಸ್ಯೆ:ಕಳೆದ ವರ್ಷ ಮಳೆಯಿಲ್ಲದೇ ಅಂತರ್ಜಲಮಟ್ಟ ಕುಸಿದಾಗ ಜಿಲ್ಲೆಯ ಅಡಕೆ ಬೆಳೆಗಾರರು ಚಿಂತಿಸುವಂತೆ ಮಾಡಿತ್ತು. ಬೇಸಿಗೆಯಲ್ಲಿ ಅಡಕೆ ತೋಟ ನೀರಿಲ್ಲದೇ ಕೆಂಪಗಾಗಿದ್ದವು. ಆದರೆ, ಈ ಸಲ ಉತ್ತಮ ಮಳೆಯಾದ್ದರಿಂದ ಬಹುತೇಕ ಅಡಕೆ ತೋಟಗಳು ಹಸಿರಾಗಿವೆ. ಅಲ್ಲದೇ ಪೀಕಿಗೆ ಬಂದಿರುವ ತೋಟಗಳಲ್ಲಿ ಉತ್ತಮ ಫಸಲು ಕಂಡುಬರುತ್ತಿದೆ. ಆದ್ದರಿಂದ ಅರ್ಧ ಎಕರೆ ಜಮೀನಿರುವ ರೈತನೂ ಅಡಕೆ ಹಚ್ಚಲು ಮುಂದಾಗುತ್ತಿದ್ದಾನೆ. ನೀರಿನ ಸಮಸ್ಯೆ ನೈಸರ್ಗಿಕ ವಿಕೋಪ ಎದುರಾಗದಿದ್ದಲ್ಲಿ ಜಿಲ್ಲೆಯ ರೈತರ ಆರ್ಥಿಕ ಮಟ್ಟವನ್ನು ಅಡಕೆ ಸುಧಾರಿಸುವ ನಿರೀಕ್ಷೆ ಹುಟ್ಟುಹಾಕಿದೆ. ಆದರೂ, ಅಡಕೆ ಹಚ್ಚುವ ಮುನ್ನ ಹಲವು ಬಾರಿ ಯೋಚಿಸಿ ನಿರ್ಧಾರಕ್ಕೆ ಬರಬೇಕು ಎಂಬುದು ತೋಟಗಾರಿಕಾ ತಜ್ಞರ ಅಭಿಪ್ರಾಯವಾಗಿದೆ.

ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಅಡಕೆ ಬೆಳೆ ಪ್ರದೇಶ ಹೆಚ್ಚುತ್ತಿದೆ. ಉತ್ತಮ ದರ ಸಿಗುತ್ತಿರುವುದು ಹಾಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಡಕೆ ಕ್ಷೇತ್ರ ವಿಸ್ತರಣೆಗೆ ಅವಕಾಶ ಇರುವುದರಿಂದ ರೈತರು ಆ ಬೆಳೆಯತ್ತ ಆಸಕ್ತಿ ತೋರುತ್ತಿದ್ದಾರೆ. ಅನೇಕ ರೈತರು ಉತ್ತಮ ಆದಾಯ ಪಡೆಯುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ದರಾಮಪ್ಪ ಬರಗಿಮಠ ಹೇಳಿದರು.

Share this article