ನಾರಾಯಣ ಹೆಗಡೆ
ಹಾವೇರಿ : ರಾಜ್ಯದ ಹೊಸ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಹಾವೇರಿ ವಿವಿಗೆ ಆರಂಭವಾದಾಗಿನಿಂದಲೂ ಸರ್ಕಾರದ ನಯಾಪೈಸೆ ಅನುದಾನ ಬಂದಿಲ್ಲ. ಕಾಲೇಜುಗಳು ಮತ್ತು ವಿದ್ಯಾರ್ಥಿಗಳ ಶುಲ್ಕದಲ್ಲೇ ವಿವಿ ನಡೆಯುತ್ತಿದೆ. ಧಾರವಾಡದ ಕರ್ನಾಟಕ ವಿವಿಯಿಂದ 58 ಬೋಧಕ ಹಾಗೂ 167 ಬೋಧಕೇತರ ಹುದ್ದೆಗಳನ್ನು ಹೊಸ ವಿವಿಗೆ ಸ್ಥಳಾಂತರಿಸಿದರೂ ಪ್ರಯೋಜನವಾಗಿಲ್ಲ. ಸದ್ಯ ಈಗಿರುವುದು ಒಬ್ಬರೇ ಖಾಯಂ ಬೋಧಕರು, ಉಳಿದವರೆಲ್ಲರೂ ಅತಿಥಿ ಉಪನ್ಯಾಸಕರೇ....
ಹಿಂದುಳಿದ ಪ್ರದೇಶದ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿ, ಗುಣಮಟ್ಟದ ಶಿಕ್ಷಣ ದೊರಕಲಿ ಎಂಬ ಉದ್ದೇಶದೊಂದಿಗೆ 2023-24ನೇ ಸಾಲಿನಲ್ಲಿ ಹಾವೇರಿಯ ಕೆರಿಮತ್ತಿಹಳ್ಳಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಹಾವೇರಿ ವಿವಿ ಆರಂಭಿಸಲಾಯಿತು. ವಿವಿ ಸ್ಥಾಪನೆಯಿಂದ ಹಿಂದುಳಿದ ಜಿಲ್ಲೆಯಲ್ಲಿ ಶೈಕ್ಷಣಿಕ ಸುಧಾರಣೆಗೆ ಸಹಕಾರಿಯಾಗುವ ಎಲ್ಲ ಸಾಧ್ಯತೆಯಿದೆ. ಹಲವು ಇತಿಮಿತಿಗಳ ಮಧ್ಯೆಯೇ ಉತ್ತಮವಾಗಿ ಕಾರ್ಯ ನಿರ್ವಹಿಸಿ ಪ್ರಗತಿ ಸಾಧಿಸುತ್ತಿದೆ. ಆದರೆ, ಹೊಸ ವಿವಿಗೆ ಸರ್ಕಾರದಿಂದ ಯಾವುದೇ ಅನುದಾನವೇ ಇಲ್ಲದ್ದರಿಂದ ನಿರ್ವಹಣೆಯೇ ಸವಾಲಾಗಿ ಪರಿಣಮಿಸಿದೆ.
ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳ ವೇತನ ಸೇರಿದಂತೆ ಸಂಪೂರ್ಣ ವಿಶ್ವವಿದ್ಯಾಲಯದ ನಿರ್ವಹಣೆ ಕಾಲೇಜುಗಳ ಸಂಯೋಜನಾ ಶುಲ್ಕ ಹಾಗೂ ವಿದ್ಯಾರ್ಥಿಗಳ ಪ್ರವೇಶ ಶುಲ್ಕದಲ್ಲೇ ನಡೆಸುವುದು ಅನಿವಾರ್ಯವಾಗಿದೆ.ನೂತನ ಹಾವೇರಿ ವಿಶ್ವವಿದ್ಯಾಲಯವು ಜಿಲ್ಲೆಯ 8 ತಾಲೂಕಿನ ವ್ಯಾಪ್ತಿ ಒಳಗೊಂಡಿದೆ. ಈ ಹಿಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಜಿಲ್ಲೆಯ ಕಾಲೇಜುಗಳು ಒಳಪಟ್ಟಿದ್ದವು.
ಪ್ರತ್ಯೇಕ ವಿವಿ ಘೋಷಣೆಯಾದ ಬಳಿಕ ನಗರದ ಹೊರವಲಯದ ಕೆರಿಮತ್ತಿಹಳ್ಳಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಹಾವೇರಿ ವಿಶ್ವವಿದ್ಯಾಲಯ ಆರಂಭಗೊಂಡಿತು. ಸದ್ಯ 6 ಸ್ನಾತಕೋತ್ತರ ಪದವಿ ಕೋರ್ಸ್‌ಗಳಿವೆ. ಅಲ್ಲದೇ ಜಿಲ್ಲೆಯ 13 ಸರ್ಕಾರಿ ಪದವಿ ಕಾಲೇಜುಗಳು, 8 ಅನುದಾನಿತ ಕಾಲೇಜುಗಳು, 23 ಖಾಸಗಿ ಮಹಾವಿದ್ಯಾಲಯಗಳು ಸೇರಿದಂತೆ 44 ಪದವಿ ಕಾಲೇಜುಗಳು ಹಾವೇರಿ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತಗೊಂಡಿವೆ. ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿಗಳಲ್ಲಿ 17,446 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ 805 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು ವಿವಿಯಲ್ಲಿ 18,252 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಖಾಲಿ ಹುದ್ದೆಗಳ ವರ್ಗಾವಣೆ:
ಧಾರವಾಡದ ಕರ್ನಾಟಕ ವಿವಿಯಿಂದ ಪ್ರತ್ಯೇಕಗೊಂಡ ಸಂದರ್ಭದಲ್ಲಿ 58 ಬೋಧಕ ಮತ್ತು 167 ಬೋಧಕೇತರ ಸಿಬ್ಬಂದಿಯನ್ನು ಹಾವೇರಿ ವಿವಿಗೆ ವರ್ಗಾಯಿಸಲಾಗಿದೆ. ಆದರೆ, ಧಾರವಾಡ ವಿವಿಯಲ್ಲೇ ಹುದ್ದೆ ಖಾಲಿ ಇರುವುದರಿಂದ ಹಾವೇರಿ ವಿವಿಗೆ ಖಾಲಿ ಹುದ್ದೆಗಳು ಮಾತ್ರ ವರ್ಗಾವಣೆಯಾದಂತಾಗಿದೆ. ವಿವಿಗೆ ಸರ್ಕಾರ ಅನುದಾನ ಕೊಡದಿದ್ದರೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದ್ದರೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಹೊಸ ಹುದ್ದೆ ಸೃಜನೆಯ ಅಗತ್ಯವೂ ಇರಲಿಲ್ಲ. ಮಂಜೂರಾಗಿರುವ ಹುದ್ದೆಗಳನ್ನಷ್ಟೇ ತುಂಬಿದ್ದರೂ ವಿಶ್ವವಿದ್ಯಾಲಯಕ್ಕೆ ಯಾವುದೇ ಹೊರೆಯಾಗುತ್ತಿರಲಿಲ್ಲ. ಹೊಸ ಹುದ್ದೆ ಭರ್ತಿಗೆ ಅವಕಾಶವಿಲ್ಲದ್ದರಿಂದ ಅತಿಥಿ ಉಪನ್ಯಾಸಕರ ಮೇಲೆಯೇ ವಿವಿ ನಡೆಯುವಂತಾಗಿದೆ. ಸದ್ಯ ಹಾವೇರಿ ವಿವಿಯಲ್ಲಿ ಒಬ್ಬರು ಮಾತ್ರ ಕಾಯಂ ಉಪನ್ಯಾಸಕರಿದ್ದಾರೆ. ಉಳಿದಂತೆ ಎಲ್ಲವೂ ಅತಿಥಿ ಉಪನ್ಯಾಸಕರ ಮೇಲೆಯೇ ನಡೆಯುತ್ತಿದೆ. ಸದ್ಯ ವಿಶ್ವವಿದ್ಯಾಲಯದಲ್ಲಿ 20 ಬೋಧಕ ಹಾಗೂ 20 ಬೋಧಕೇತರ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿದ್ಯಾರ್ಥಿಗಳ ಫೀಸಲ್ಲೇ ನಿರ್ವಹಣೆ:
ವಿವಿ ಅಡಿಯಲ್ಲಿ 18 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದು, ಅವರು ಕಟ್ಟುವ ಪ್ರವೇಶ ಶುಲ್ಕದಲ್ಲೇ ವಿವಿ ನಡೆಯುತ್ತಿದೆ. ವಿವಿಯಲ್ಲಿರುವ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳ ಮಾಸಿಕ ವೇತನಕ್ಕೆ ಸುಮಾರು ₹10 ಲಕ್ಷ ಅನುದಾನದ ಅಗತ್ಯವಿದೆ. ಇನ್ನುಳಿದಂತೆ ಇಡೀ ವಿವಿ ನಿರ್ವಹಣೆಗೆ ಸುಮಾರು ಇಷ್ಟೇ ಮೊತ್ತದ ಹಣಕಾಸಿನ ಅಗತ್ಯವಿದೆ. ವಿದ್ಯಾರ್ಥಿಗಳಿಂದ ವಾರ್ಷಿಕವಾಗಿ ಸುಮಾರು ₹1.80 ಕೋಟಿ ಸಂಗ್ರಹವಾಗುತ್ತಿದೆ. ಜತೆಗೆ, ಕಾಲೇಜುಗಳ ಅಫಿಲೇಶನ್ ಫೀಸ್ ಬರುತ್ತದೆ. ಇವೆರಡು ಸಂಪನ್ಮೂಲ ಬಿಟ್ಟರೆ ವಿವಿಗೆ ಯಾವುದೇ ಅನುದಾನದ ಮೂಲಗಳಿಲ್ಲ. ಇದರಲ್ಲೇ ಸಂಪೂರ್ಣ ವಿವಿ ನಿರ್ವಹಣೆ ಮಾಡುವ ಸವಾಲಿದೆ.
ವಿವಿ ಇತಿಹಾಸ :
ಹಾವೇರಿ ವಿವಿ ಆರಂಭಗೊಂಡು 2 ವರ್ಷಗಳಷ್ಟೇ ಆಗಿದೆ. 2023- 24ನೇ ಸಾಲಿನಲ್ಲೇ ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ಪದವಿ ನೀಡಲು ಬೇಕಾದ 2 ಎಫ್ ಮಾನ್ಯತೆ ಪಡೆದಿದೆ. ವಿಶ್ವವಿದ್ಯಾಲಯವು 42 ಎಕರೆ ವಿಸ್ತಾರದ ಕ್ಯಾಂಪಸ್ ಹೊಂದಿದ್ದು, ಆಡಳಿತಾತ್ಮಕ ಕಟ್ಟಡವನ್ನೂ ಹೊಂದಿದೆ. 14 ಕೊಠಡಿ, ಗ್ರಂಥಾಲಯ, ಕ್ಯಾಂಟೀನ್, ಆಟದ ಮೈದಾನ, ವಿದ್ಯಾರ್ಥಿಗಳಿಗೆ ವಸತಿನಿಲಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಹೊಂದಿದೆ. ಜತೆಗೆ ಜಿಲ್ಲೆಯ ಮಕ್ಕಳಿಗೆ ಜ್ಞಾನ, ಕೈಗೆ ಕೆಲಸ ನೀಡುವ ನಿಟ್ಟಿನಲ್ಲಿ ಹೊಸ, ಹೊಸ ತಂತ್ರಜ್ಞಾನ ಪರಿಚಯ, ಮಕ್ಕಳಿಗೆ ಉದ್ಯೋಗಕ್ಕೆ ಪೂರಕವಾಗಿ ತರಬೇತಿಗೊಳಿಸುವ ನಿಟ್ಟಿನಲ್ಲಿ ಹೊಸ ನಾವಿನ್ಯದ ಎಂಎಸ್ಸಿ ಕಂಪ್ಯೂಟರ್ ಸೈನ್ಸ್, ಎಂಎಸ್ಸಿ ಎಐ ಮತ್ತು ಮಶಿನ್ ಲರ್ನಿಂಗ್, ಎಂಎಸ್ಸಿ, ಸೈಬರ್ ಸೆಕ್ಯುರಿಟಿ ಹಾಗೂ ಎಂಎ ಪಬ್ಲಿಕ್ ಅಡ್ಮಿನಿಸ್ಟ್ರೇಶನ್ ಕೋರ್ಸ್ ಅಳವಡಿಕೆಗೆ ವಿವಿ ಮುಂದಾಗಿದೆ.
ಶುರುವಾಗದ ಸಂಶೋಧನೆ:
ಸದ್ಯ ವಿವಿಯಲ್ಲಿ ಕಾಯಂ ಉಪನ್ಯಾಸಕರು, ಪ್ರಾಧ್ಯಾಪಕರು ಇಲ್ಲದ್ದರಿಂದ ಸಂಶೋಧನಾ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿಎಚ್‌ಡಿ ಮಾರ್ಗದರ್ಶನ ಮಾಡುವ ಅರ್ಹತೆಯಿರುವ ಉಪನ್ಯಾಸಕರ ಸೇವೆಯನ್ನು ಪಡೆದು ಬರುವ ಏಪ್ರಿಲ್ ವೇಳೆಗೆ ಸಂಶೋಧನಾ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.
5 ಸಂಸ್ಥೆಗಳೊಂದಿಗೆ ಒಡಂಬಡಿಕೆ:
ಹಾವೇರಿ ವಿಶ್ವವಿದ್ಯಾಲಯಕ್ಕೆ ಈವರೆಗೂ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಬಂದಿಲ್ಲ. ವಿಶ್ವವಿದ್ಯಾಲಯದಿಂದಲೇ 5 ಕೈಗಾರಿಕೋದ್ಯಮ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಕಾಲೇಜು ಆರಂಭಿಸಲಾಗಿದೆ. ವಿಶ್ವವಿದ್ಯಾಲಯ ಅಭಿವೃದ್ಧಿ ಹೊಂದುತ್ತಿರುವ ಈ ಸಂದರ್ಭದಲ್ಲಿ ಅದನ್ನು ಮುಚ್ಚುವ ಚಿಂತನೆ ಕೈಬಿಟ್ಟು ಅಗತ್ಯ ನೆರವು ನೀಡಿದರೆ ಹಾವೇರಿ ವಿವಿ ಹೆಮ್ಮರವಾಗಿ ಬೆಳೆಯುವ ಎಲ್ಲ ಸಾಧ್ಯತೆಗಳನ್ನು ಹೊಂದಿದೆ.
ರಾಜ್ಯದ ಹೊಸ ವಿಶ್ವವಿದ್ಯಾಲಯಗಳ ಪೈಕಿ ಹಾವೇರಿ ವಿವಿ ಸುಸಜ್ಜಿತ ಕಟ್ಟಡ, ಕ್ಯಾಂಪಸ್, ಗ್ರಂಥಾಲಯ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಒಳಗೊಂಡಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮುಂದಿನ ತಿಂಗಳು ಸಂಶೋಧನಾ ಕೇಂದ್ರ ಆರಂಭಿಸಲಾಗುತ್ತಿದೆ. ವಿವಿ ಆರಂಭವಾದಾಗಿನಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತಿವೆ. ಪರೀಕ್ಷೆ ಮುಗಿದ ಕೇವಲ 15 ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡಲಾಗಿದೆ.
-ಸುರೇಶ ಜಂಗಮಶೆಟ್ಟಿ, ಕುಲಪತಿ, ಹಾವೇರಿ ವಿಶ್ವವಿದ್ಯಾಲಯ.