ಯಲ್ಲಾಪುರ: ಋಷಿ ಮತ್ತು ಕೃಷಿ ಪ್ರಧಾನವಾದ ಹವ್ಯಕರ ಪರಂಪರೆ ಎಲ್ಲರ ಹಿತಕಾಯುವ ಚಿಂತನೆಯೊಂದಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದು ಡಾ. ಜಿ.ಜಿ. ಹೆಗಡೆ ಕುಮಟಾ ಹೇಳಿದರು.
ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಜ. ೨೮ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಿಪ್ರ ಸಮಾವೇಶದ ಎರಡನೆಯ ವಿಚಾರಗೋಷ್ಠಿಯಲ್ಲಿ ''''''''ಬ್ರಾಹ್ಮಣರ ಸವಾಲುಗಳು'''''''' ಎಂಬ ವಿಷಯದ ಕುರಿತು ಅವರು ಮಾತನಾಡಿದರು. ನಮ್ಮ ಹುಟ್ಟಿನ ಆನಂತರ ಪಡೆದ ಸಂಸ್ಕಾರದಿಂದ ಬ್ರಾಹ್ಮಣರಾಗಿರುವ ನಾವು, ಇಂದು ಎದುರಾಗಿರುವ ಸವಾಲುಗಳ ಮೂಲವನ್ನು ಶೋಧಿಸದಿದ್ದರೆ ಪರಿಹಾರ ಕಷ್ಟ. ಇಡೀ ವಿಶ್ವಕ್ಕೆ ಆದರ್ಶದ ಪಾಠವನ್ನು ಹೇಳಿದ ಬ್ರಾಹ್ಮಣರಿಗೆ ಇಂದಿನ ಬೆಟ್ಟದಷ್ಟು ಸವಾಲುಗಳಿಗೆ ನಮ್ಮತನ ತೊರೆಯುತ್ತಿರುವುದೇ ಕಾರಣವಾಗಿದೆ ಎಂದರು.ವಿಷಯಾಸಕ್ತಿಗೆ ಮರುಳಾಗುತ್ತಿರುವ ನಮ್ಮ ಸಮುದಾಯದ ಜನಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಆದ್ದರಿಂದ ಬ್ರಾಹ್ಮಣರ ಸಂಖ್ಯೆ ಮತ್ತು ಸಂಘಟನೆ ಅಧಿಕವಾಗಬೇಕಾಗಿದೆ. ವ್ಯಕ್ತಿಗತವಾಗಿ ಸಾಕಷ್ಟು ಪ್ರಮಾಣದಲ್ಲಿ ನಮ್ಮ ಸಮಾಜ ಬೆಳೆದಿದ್ದರೂ, ಸಮಷ್ಟಿ ದೃಷ್ಟಿಯಲ್ಲಿ ನಾವಿನ್ನೂ ಹಿಂದಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯದ ಸ್ಥಿತಿವಂತರು ಸಮಾಜದ ಕಟ್ಟಕಡೆಯ ವ್ಯಕ್ತಿಯ ಕೈಹಿಡಿದು ಮೇಲೆತ್ತುವ ಕೆಲಸ ಮಾಡುವುದರೊಂದಿಗೆ ಸಂಕುಚಿತ, ಸ್ವಾರ್ಥ ಬುದ್ಧಿಯನ್ನು ಬಿಟ್ಟು ವಿಶಾಲ ಮನೋಭಾವ ತೋರಬೇಕು ಎಂದರು. ನಮ್ಮ ಸಂಸ್ಕೃತಿಯ ಅಧಃಪತನಕ್ಕೆ ನಾವು ಪರಂಪರೆಯನ್ನು ಕಡೆಗಣಿಸಿದ್ದೇ ಕಾರಣವಾಗಿದ್ದರೆ, ಕೇವಲ ಹಣದಿಂದ ಸುಖ ಸಿಗುವುದೆಂದು ಭ್ರಮಿಸಿದ್ದೇ ಎಲ್ಲ ಅಧ್ವಾನಗಳಿಗೂ ಕಾರಣವಾಗಿದೆ ಎಂದ ಅವರು, ನಾವೀಗ ವೈಯಕ್ತಿಕ ಪ್ರತಿಷ್ಠೆಗಳನ್ನು ತೊರೆದು, ಬೇರೆಯವರ ಕುರಿತಾಗಿ ಟೀಕಿಸುವುದನ್ನು ನಿಲ್ಲಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಶಂಕರ ಭಟ್ಟ ಬಾಲೀಗದ್ದೆ ಮಾತನಾಡಿ, ನಮ್ಮ ಸಮುದಾಯಕ್ಕೆ ಎದುರಾಗಿರುವ ಸವಾಲುಗಳು ಆಂತರಿಕ ಮತ್ತು ಬಾಹ್ಯ ರೂಪದಲ್ಲಿವೆ. ಇಂತಹ ಸಂದಿಗ್ದ ಸನ್ನಿವೇಶದಲ್ಲಿ ಸಾಮೂಹಿಕ ಸಂಘಟನೆಗಳ ಮೂಲಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಏಕಮಾತ್ರ ಉಪಾಯವಾಗಿದೆ ಎಂದರು.ಸಾಮಾಜಿಕ ಕಾರ್ಯಕರ್ತರಾದ ಟಿ.ಎನ್. ಭಟ್ಟ ನಡಿಗೆಮನೆ, ರಾಘವೇಂದ್ರ ಭಟ್ಟ ಹಾಸಣಗಿ, ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ. ಹೆಗಡೆ ಉಪಸ್ಥಿತರಿದ್ದರು. ಸುಬ್ಬಣ್ಣ ಬೋಳ್ಮನೆ ಸ್ವಾಗತಿಸಿದರು. ಸುಜಾತಾ ದಂಟ್ಕಲ್ ನಿರ್ವಹಿಸಿದರು. ಗೀತಾ ಹೆಗಡೆ ಕಾರವಾರ ವಂದಿಸಿದರು.