ಚನ್ನಪಟ್ಟಣ ಉಪಚುನಾವಣೆಗೆ ಮಗನನ್ನು ನಿಲ್ಲಿಸಲು ತಂತ್ರಗಾರಿಕೆ ಹೆಣೆದ ಎಚ್‌.ಡಿ.ಕುಮಾರಸ್ವಾಮಿ

KannadaprabhaNewsNetwork |  
Published : Oct 27, 2024, 02:45 AM ISTUpdated : Oct 27, 2024, 07:47 AM IST
ಪೊಟೋ೨೬ಸಿಪಿಟಿ೧: ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಸಮನ್ವಯ ಸಭೆಯಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಮಾತನಾಡಿದರು. | Kannada Prabha

ಸಾರಾಂಶ

ಸಿ.ಪಿ.ಯೋಗೇಶ್ವರ್ ೯ ಬಾರಿ ಚುನಾವಣೆ ಎದುರಿಸಿ ಐದು ಬಾರಿ ಶಾಸಕರಾಗಿದ್ದಾರೆ. ಕುಮಾರಸ್ವಾಮಿ ತಮ್ಮ ಮಗನನ್ನು ಚುನಾವಣೆಯಲ್ಲಿ ನಿಲ್ಲಿಸಲು ತಂತ್ರಗಾರಿಕೆ ಮಾಡಿ ಯೋಗೇಶ್ವರ್ ಅವರನ್ನು ಆಚೆ ಕಳಿಸಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ವಿರುದ್ಧ ಮಾಜಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.  

ಚನ್ನಪಟ್ಟಣ :ಸಿ.ಪಿ.ಯೋಗೇಶ್ವರ್ ೯ ಬಾರಿ ಚುನಾವಣೆ ಎದುರಿಸಿ ಐದು ಬಾರಿ ಶಾಸಕರಾಗಿದ್ದಾರೆ. ಕುಮಾರಸ್ವಾಮಿ ತಮ್ಮ ಮಗನನ್ನು ಚುನಾವಣೆಯಲ್ಲಿ ನಿಲ್ಲಿಸಲು ತಂತ್ರಗಾರಿಕೆ ಮಾಡಿ ಯೋಗೇಶ್ವರ್ ಅವರನ್ನು ಆಚೆ ಕಳಿಸಿದ್ದಾರೆ. ಅವರನ್ನು ನೀವೇ ಆಚೆ ಹಾಕಿ ಈಗ ಕಾಂಗ್ರೆಸ್ ಮೇಲೆ ದೂಷಣೆ ಮಾಡಬೇಡಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಮಾಜಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.

ತಾಲೂಕಿನ ತಿಟ್ಟಮಾರನಹಳ್ಳಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮನ್ವಯ ಸಭೆಗೆ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಇಲ್ಲದ ಕಾರಣ ಯೋಗೇಶ್ವರ್ ಅವರನ್ನು ಹೈಜಾಕ್ ಮಾಡಲಾಗಿದೆ ಎಂಬ ಆರೋಪಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಷಡ್ಯಂತ್ರ ಮಾಡಿ ಒಟ್ಟಾಗಿ ಸೋಲಿಸುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಷಡ್ಯಂತ್ರ ಮಾಡುತ್ತಿರುವವರು ಬಿಜೆಪಿಯವರು. ಯಡಿಯೂರಪ್ಪ ಅವರ ಮನೆಯಲ್ಲಿ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಹೇಳಲೇ? ಅವರು ಯಡಿಯೂರಪ್ಪ ಅವರ ಮನೆಗೆ ಹೋಗಿದ್ದು ಏಕೆ? ಷಡ್ಯಂತ್ರ ಮಾಡಲು ಅಲ್ಲವೇ? ಇದೆಲ್ಲವೂ ರಾಜಕಾರಣದ ಪ್ರಕ್ರಿಯೆ. ಅವರ ಕೆಲಸ ಅವರು ಮಾಡುತ್ತಾರೆ, ನಮ್ಮ ಕೆಲಸ ನಾವು ಮಾಡುತ್ತೇವೆ. ರಾಜಕಾರಣದಲ್ಲಿ ಮಗನ ಪ್ರವೇಶಕ್ಕಾಗಿ ಪ್ರವಾಸ ಮಾಡಿಸಿ ಈಗ ಚುನಾವಣೆಗೆ ನಿಲ್ಲಿಸಿದ್ದಾರೆ. ನಾವು ನಮ್ಮ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಅಸಮಾಧಾನ ಇದೆಯೇ ಎಂಬ ಪ್ರಶ್ನೆಗೆ, ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಪಕ್ಷದಿಂದ ಯಾರೇ ಅಭ್ಯರ್ಥಿ ಮಾಡಿದರೂ ನಾನೇ ಅಭ್ಯರ್ಥಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈಗಲೂ ನಾವು ಅದನ್ನೇ ಹೇಳುತ್ತಿದ್ದೇವೆ. ಇಲ್ಲಿ ಯೋಗೇಶ್ವರ್ ಅಭ್ಯರ್ಥಿಯಲ್ಲ ಡಿ.ಕೆ. ಶಿವಕುಮಾರ್ ಅಭ್ಯರ್ಥಿ. ಹೀಗಾಗಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.

ನೀವೇ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದೀರಾ ಎಂಬ ಪ್ರಶ್ನೆಗೆ, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ನಾವೆಲ್ಲರೂ ಚುನಾವಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಎಚ್‌ಡಿಕೆ ಚುನಾವಣೆ ಎದುರಿಸಲಿ: ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ಜನರನ್ನು ಕರೆತಂದ ಬಸ್‌ಗಳನ್ನು ಸೀಜ್ ಮಾಡಿ ಎನ್‌ಸಿಆರ್ ಹಾಕಿಸಲಾಗಿದೆ ಎಂಬ ಎಚ್‌ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿ, ಸಾಮಾನ್ಯ ಪರಿಜ್ಞಾನ ಇಲ್ಲದೆ ಕೇಂದ್ರ ಮಂತ್ರಿಯಾಗಿರುವ ಕುಮಾರಸ್ವಾಮಿ ಅವರು ಆರೋಪ ಮಾಡುವುದನ್ನು ಬಿಟ್ಟು ಚುನಾವಣೆ ಮಾಡಲಿ. ಕುಮಾರಸ್ವಾಮಿ ಅನೇಕ ಚುನಾವಣೆಗಳನ್ನು ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಬಗ್ಗೆ ಅವರಿಗೂ ಜ್ಞಾನವಿದೆ. ನೀತಿ ಸಂಹಿತೆ ಸಮಯದಲ್ಲಿ ಯಾರು ಯಾವ ಪಾತ್ರ ವಹಿಸುತ್ತಾರೆ. ಪ್ರಕ್ರಿಯೆ ಹೇಗಿರುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. ನೀತಿ ಸಂಹಿತೆ ಉಲ್ಲಂಘನೆ ಆಗಿದ್ದರೆ ಅದು ಚುನಾವಣಾಧಿಕಾರಿಗಳಿಗೆ ಸಂಬಂಧಪಟ್ಟ ವಿಚಾರ. ಅದು ನಮಗೆ ಸಂಬಂಧಿಸುವುದಿಲ್ಲ ಎಂದರು.

ಕುಮಾರಸ್ವಾಮಿ ಅವರು ಆರೋಪ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡು, ದಿನನಿತ್ಯ ಕಾಂಗ್ರೆಸ್ ವಿರುದ್ಧ ದೂಷಣೆ ಮಾಡುತ್ತಿದ್ದಾರೆ. ಅವರು ಬಸ್‌ಗಳಲ್ಲಿ ಜನರನ್ನು ಕರೆ ತಂದಿದ್ದರೆ, ಅದಕ್ಕೆ ಲೆಕ್ಕ ಕೊಡಬೇಕು. ಅದಕ್ಕಾಗಿ ಅನುಮತಿ ಪಡೆಯಬೇಕು ಎಂಬ ಸಾಮಾನ್ಯ ಜ್ಞಾನ ಇಲ್ಲವಾದರೆ, ಅವರು ಹೇಗೆ ಕೇಂದ್ರ ಸಚಿವರಾಗಿದ್ದಾರೆ. ಸಂವಿಧಾನದ ಬಗ್ಗೆ ಮೊದಲು ತಿಳಿದುಕೊಳ್ಳಲಿ, ಬಸ್‌ಗಳಿಗೂ ನಮಗೂ ಏನು ಸಂಬಂಧ? ಎಂದು ಪ್ರಶ್ನಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ