ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ

KannadaprabhaNewsNetwork |  
Published : Aug 05, 2024, 12:41 AM ISTUpdated : Aug 05, 2024, 07:00 AM IST
4ಕೆಆರ್ ಎಂಎನ್ 1.ಜೆಪಿಜಿಬಿಡದಿ ಪಟ್ಟಣದಲ್ಲಿ ಬಿಜೆಪಿ - ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ 2ನೇ ದಿನದ ಪಾದಯಾತ್ರೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು. | Kannada Prabha

ಸಾರಾಂಶ

 ತನಿಖೆ ಮಾಡಲು ಒಂದು ಸಿಬಿಐ, ಇಡಿ ಸಾಕಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ರಾಮನಗರ: ಶಾಂತಿನಗರದ ಹೌಸಿಂಗ್ ಸೊಸೈಟಿ ಭೂಮಿ ಏನಾಯಿತು?, ಬಿಡದಿಯಲ್ಲಿ ಐಕಾನ್ ಕಾಲೇಜು ಕಟ್ಟಿಸಿರುವ ಭೂಮಿ ಯಾರದು? ಅದರ ಪಕ್ಕದಲ್ಲಿರುವ 4 ಎಕರೆ ಭೂಮಿ ಯಾರದು? ಮೂವರು ವಿಧವಾ ಮಹಿಳೆಯರಿಗೆ ಜೀವ ಬೆದರಿಕೆ ಹಾಕಿ ನಿಮ್ಮ ಮಗಳ ಹೆಸರಿಗೆ ಸೈಟ್ ಬರೆಸಿಕೊಂಡಿದ್ದು ಯಾರು? ಇಷ್ಟೇ ಅಲ್ಲ. ಇನ್ನೂ ಬೇಕಾದಷ್ಟಿವೆ. ಅವುಗಳ ತನಿಖೆ ಮಾಡಲು ಒಂದು ಸಿಬಿಐ, ಇಡಿ ಸಾಕಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬಿಡದಿಯಲ್ಲಿ ಬಿಜೆಪಿ - ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ 2ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದ ಅವರು, ಡಿ.ಕೆ.ಶಿವಕುಮಾರ್ ಸಂಪಾದಿಸಿರುವ ಆಸ್ತಿಯನ್ನು ಎಳೆಎಳೆಯಾಗಿ ವಿವರಿಸಿದರು. ಅಲ್ಲದೆ, ಅದೇನೊ ನನ್ನದು, ವಿಜಯೇಂದ್ರನದು ಬಿಚ್ಚುತ್ತೀವಿ ಅಂದಲ್ಲ ಬಿಚ್ಚಪ್ಪ ಅದೇನಿದೆ. ನಾನು ನಿಮ್ಮದನ್ನು ಬಿಚ್ಚಲು ಹೋದರೆ ಪುಟಗಟ್ಟಲೆ ಇದೆ ಎಂದು ಎಚ್ಚರಿಸಿದರು.

ಡಿಕೆಶಿ ನಿಮ್ಮ ಬಳಿ ಏನಿತ್ತು ? ಬ್ಲಾಕ್ ಅಂಡ್ ವೈಟ್ ಟಿವಿ, ವಿಸಿಆರ್‌ನಿಂದ ಜೀವನ ಪ್ರಾರಂಭಿಸಿದ ನೀವು ಯಾವ ರೀತಿ ನಡೆದುಕೊಂಡಿದ್ದೀರಿ? ಹೇಗೆಲ್ಲ ಹಣ ಮಾಡಿದ್ದೀರಿ ಎಂಬುದು ನನಗೆ ಗೊತ್ತಿದೆ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದ ವೇಳೆ ಶಾಂತಿನಗರದ ಹೌಸಿಂಗ್ ಸೊಸೈಟಿಗೆ ಪರಿಶಿಷ್ಟ ಜನರಿಗೆ ಸೈಟ್ ಕೊಡಲು 68 ಎಕರೆ ಭೂಮಿ ಕೊಟ್ಟಿದ್ದರು. ಆ ದಲಿತರ ಭೂಮಿಯನ್ನು ನಿಮ್ಮದೇ ಸಚಿವರು ನಕಲಿ ಸೊಸೈಟಿ ಸೃಷ್ಟಿಸಿ ಲಪಟಾಯಿಸಿರುವ ಮಾಹಿತಿ ಇಲ್ಲವೇ ? ಆ ಭೂಮಿಯನ್ನು ಲಪಟಾಯಿಸಿದ್ದು ಯಾರು ಎಂಬುದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.

ಬಿಡದಿಯಲ್ಲಿ ಐಕಾನ್ ಕಾಲೇಜು ಕಟ್ಟಿಸಿದ್ದೀರಿ. ಆ ಭೂಮಿ ಯಾರದು. ಬಿಲ್ ಕೆಂಪನಹಳ್ಳಿಯ ಕೃಷ್ಣಮೂರ್ತಿಯವರ ಜಾಗ ಕಬಳಿಸಲು ಅವರು ಸಾಲ ಪಡೆದಿದ್ದ ಕೆಎಸ್‌ಎಸ್‌ಸಿಯಲ್ಲಿನ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡರು. ಅಲ್ಲಿ ಐಕಾನ್ ಕಾಲೇಜು ಕಟ್ಟಿದ್ದಾರೆ. ಅದರ ಪಕ್ಕದಲ್ಲಿರುವ ಮತ್ತೊಂದು ಭೂಮಿ ಮಿಲಿಟರಿ ಸಿಬ್ಬಂದಿಯೊಬ್ಬರಿಗೆ ಸೇರಿದ್ದು. ಅವರ ಮಗಳನ್ನು ಕಿಡ್ನ್ಯಾಪ್ ಮಾಡಿ ಅವರಿಗೆ 25 ಲಕ್ಷ ಚೆಕ್ ನೀಡಿ, 4 ಎಕರೆ ಭೂಮಿ ಪಡೆದಿದ್ದು ಯಾರು? ಚೆಕ್ ಬೌನ್ಸ್ ಆದಾಗ ಅವರ ಮಗಳನ್ನು ಕೊಲ್ಲಿಸುವ ಬೆದರಿಕೆ ಹಾಕಿದ್ದು ಯಾರು?. ಉಪಮುಖ್ಯಮಂತ್ರಿಗಳಾದ ಮೇಲೆ ಸದಾಶಿವನಗರದಲ್ಲಿ ಇತ್ತಿಚೆಗೆ 70 ವರ್ಷ ವಯಸ್ಸಿನ ಮೂವರು ವಿಧವಾ ಮಹಿಳೆಯರಿಗೆ ಜೀವ ಬೆದರಿಕೆ ಹಾಕಿ ನಿಮ್ಮ ಮಗಳ ಹೆಸರಿಗೆ ಸೈಟ್ ಬರೆಸಿಕೊಂಡಿದ್ದು ಯಾರು? ಎಂದು ಪ್ರಶ್ನೆ ಮಾಡಿದರು.

ರಾಮನಗರ ಶಾಸಕ ಮತ್ತು ನೀವು ಕೋಡಿಹಳ್ಳಿಯಲ್ಲಿ ಅಕ್ರಮವಾಗಿ ಬಂಡೆ ಒಡೆದು ರಫ್ತು ಮಾಡುತ್ತಿದ್ದೀರಿ.

ಚನ್ನಪಟ್ಟಣದ ಮತ್ತಿಕೆರೆ ಬಳಿ ವಿದೇಶಕ್ಕೆ ಸಾಗಿಸಲು ಗ್ರ್ಯಾನೆಟ್ ಕಲ್ಲುಗಳ ವಾಹನಗಳು ಸಾಲುಗಟ್ಟಿ ನಿಂತಿವೆ. ಮಾಗಡಿ, ತಾವರೆಕೆರೆಯಲ್ಲಿ ಆಂಧ್ರ ಪ್ರದೇಶ ಮೂಲದ ಡಿಎಲ್‌ಎಫ್ ಕಂಪನಿ ಜತೆ ಸೇರಿ ಯಾವ ಕಂಪನಿ ನಡೆಸುತ್ತಿದ್ದೀರಿ ಎಂಬುದೆಲ್ಲ ಗೊತ್ತಿದೆ ಎಂದು ಕುಮಾರಸ್ವಾಮಿ ಆರೋಪಗಳ ಸುರಿಮಳೆ ಗೈದರು.

ದಿನಕ್ಕೆ ಹನ್ನೊಂದು ಪ್ರಶ್ನೆ ಕೇಳಲು ಕಾಂಗ್ರೆಸ್ ಪಕ್ಷಕ್ಕೆ ಯಾವ ನೈತಿಕತೆ ಇದೆ. ಡಿಕೆಶಿ ನನ್ನ ಬಗ್ಗೆ ಒಂದಷ್ಟು ಪ್ರಶ್ನೆ ಕೇಳಿರುವ ಡಿಕೆಶಿ ಅವರಿಗೆ ಅವರು ಕೇಳಿರುವ ಸ್ಥಳಗಳಲ್ಲಿಯೇ ಉತ್ತರಿಸುತ್ತೇನೆ. ನಾವು ಹಳ್ಳಿಯವರು ನಮಗೂ ಏಕವಚನದಲ್ಲಿ ಮಾತನಾಡಲು ಬರುತ್ತದೆ. ಆದರೆ, ಅದು ನಮ್ಮ ಸಂಸ್ಕೃತಿಯಲ್ಲ. ಆದರೆ ನಿಮ್ಮಷ್ಟು ಸಣ್ಣತನಕ್ಕೆ ನಾನು ಇಳಿಯಲ್ಲ. ನಾವು ಬೀದಿಯಲ್ಲಿದ್ದೇವೆ, ನೀವು ಗಾಜಿನ ಮನೆಯಲ್ಲಿ ಕುಳಿತಿದ್ದೀರಿ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಸಿದರು.

ನಾಡಿನ ಜನರಿಗೆ ಉಪಯೋಗ ಆಗಬೇಕಾದ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದ್ದು, ಸಚಿವರಲ್ಲಿಯೇ ಲೂಟಿಗೆ ಪೈಪೋಟಿ ಶುರುವಾಗಿದೆ. ಬಿಜೆಪಿ ಮೇಲೆ ದಾಖಲೆ ಇಲ್ಲದಿದ್ದರು ಭ್ರಷ್ಟಾಚಾರದ ಆರೋಪ ಮಾಡಿ ಜಾಹೀರಾತುಗಳ ಮೂಲಕ ನಾಡಿನ ಜನರ ಭಾವನೆಗಳನ್ನು ಕೆರಳಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು.

ಒಂದೂವರೆ ವರ್ಷವಾದರು ಕಾಂಗ್ರೆಸ್ ಸರ್ಕಾರದ ಯೋಗ್ಯತೆಗೆ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಒಂದೇ ಒಂದು ಹಗರಣದ ತನಿಖೆ ನಡೆಸಿ ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಅವರದೇ ಸರ್ಕಾರ ಮಾಡಿರುವ ಅಕ್ರಮಗಳ ಬಗ್ಗೆ ವಿಧಾನಸಭೆ ಕಲಾಪಗಳಲ್ಲಿ ವಿಪಕ್ಷಗಳ ಶಾಸಕರು ದಾಖಲೆ ಸಮೇತ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಲಾಗದೆ ಮುಖ್ಯಮಂತ್ರಿಗಳು ಪಲಾಯನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳೇ ಮುಡಾ ಬಗ್ಗೆ ನಾಲ್ಕೈದು ಸಾವಿರ ಕೋಟಿ ರುಪಾಯಿಗಳ ಅವ್ಯವಹಾರ ಅಂತ ಹೇಳುತ್ತಿದ್ದಾರೆ. ಮೈಸೂರು ನಗರದ ಸಂಪೂರ್ಣ ಉಸ್ತುವಾರಿಯನ್ನು ಅವರೇ ವಹಿಸಿಕೊಂಡಿದ್ದಾರೆ. ಅವರ ಗಮನಕ್ಕೆ ಬರದೆ ಇದೆಲ್ಲವೂ ಆಗಲು ಸಾಧ್ಯವಿಲ್ಲ. ಅವರ ಧರ್ಮಪತ್ನಿ ಹೆಸರಿನಲ್ಲಿ 15 ಸೈಟು ಪಡೆದುಕೊಂಡಿದ್ದಕ್ಕೆ ನಮ್ಮ ವಿರೋಧ ಇಲ್ಲ. ನೀವು ಆ ಸೈಟುಗಳನ್ನು ಪಡೆಯಲು ನೀವು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದೀರಿ. ಕೆಸರೆ ಗ್ರಾಮದಲ್ಲಿರುವ 3 ಎಕರೆ 17 ಗುಂಟೆ ಜಮೀನು ನಿಮ್ಮ ಕುಟುಂಬದವರ ಹೆಸರಿನಲ್ಲಿ ಇರಲಿಲ್ಲ, ಅದು 1997ರಲ್ಲಿ ಮುಡಾ ಹೆಸರಿನಲ್ಲಿತ್ತು. ಸರ್ಕಾರದ ಭೂಮಿಯನ್ನು ಸುಳ್ಳು ದಾಖಲೆ ಸೃಷ್ಟಿಸಿ ಧರ್ಮಪತ್ನಿ ಹೆಸರಿನಲ್ಲಿ ಲಪಟಾಯಿಸಿರುವುದನ್ನು ಪ್ರಶ್ನೆ ಮಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಶ್ರೀರಾಮುಲು, ಸಿ.ಸಿ.ಪಾಟೀಲ್, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕರಾದ ಕೃಷ್ಣಪ್ಪ, ಹರೀಶ್ ಗೌಡ, ಮಾಜಿ ಶಾಸಕರಾದ ಎ.ಮಂಜುನಾಥ್ , ಕೆ.ಸುರೇಶ್ ಗೌಡ ಮತ್ತಿತರರು ಹಾಜರಿದ್ದರು. 

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ