ಮಂಡ್ಯದಿಂದ ಎಚ್‌ಡಿಕೆ ಅಥವಾ ನಿಖಿಲ್‌ ಸ್ಪರ್ಧೆ?

KannadaprabhaNewsNetwork | Updated : Mar 16 2024, 12:11 PM IST

ಸಾರಾಂಶ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ದೇವೇಗೌಡರ ಕುಟುಂಬದವರೇ ಮತ್ತೆ ಸ್ಪರ್ಧಿಸ್ತಾರಾ? ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಈ ಬಾರಿ ಅಖಾಡಕ್ಕಿಳಿಯುತ್ತಾರಾ ಎಂಬ ಚರ್ಚೆ ಇದೀಗ ಮತ್ತೆ ಶುರುವಾಗಿದೆ.

ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ, ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ದೇವೇಗೌಡರ ಕುಟುಂಬದವರೇ ಮತ್ತೆ ಸ್ಪರ್ಧಿಸ್ತಾರಾ? ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಈ ಬಾರಿ ಅಖಾಡಕ್ಕಿಳಿಯುತ್ತಾರಾ ಎಂಬ ಚರ್ಚೆ ಇದೀಗ ಮತ್ತೆ ಶುರುವಾಗಿದೆ.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯೊಳಗೆ ಜೆಡಿಎಸ್ ಅಸ್ತಿತ್ವ ಕಳೆದುಕೊಂಡಿರುವುದರಿಂದ ದೇವೇಗೌಡರ ಕುಟುಂಬದವರೊಬ್ಬರು ಮಂಡ್ಯದಿಂದ ಕಣಕ್ಕಿಳಿಯುವಂತೆ ಜಿಲ್ಲಾ ನಾಯಕರು ಒಂದು ಸಾಲಿನ ನಿರ್ಣಯ ಕೈಗೊಂಡಿದ್ದರು. 

ಈ ಪೈಕಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆಗೆ ಆಸಕ್ತಿ ತೋರಿರಲಿಲ್ಲ. ಆದರೆ, ಎಚ್.ಡಿ.ಕುಮಾರಸ್ವಾಮಿ ತಮ್ಮ ನಿಲುವು ಸ್ಪಷ್ಟಪಡಿಸಿರಲಿಲ್ಲ. 

ಶುಕ್ರವಾರ ಮಂಡ್ಯದಲ್ಲಿ ಲೋಕಸಭಾ ಚುನಾವಣೆ ಸಂಬಂಧ ಆಯೋಜಿಸಿದ್ದ ಜೆಡಿಎಸ್‌ ಸಭೆಯಲ್ಲಿ ಅಭ್ಯರ್ಥಿ ಹೆಸರು ಘೋಷಣೆಯಾಗಬಹುದೆಂಬ ನಿರೀಕ್ಷೆ ಇತ್ತಾದರೂ ಅಲ್ಲೂ ಗುಟ್ಟು ಬಿಟ್ಟುಕೊಡದೆ ಕುತೂಹಲ ಕಾಯ್ದುಕೊಂಡಿದ್ದಾರೆ.

ಜಾಣ ನಡೆ: ಕಳೆದ ಲೋಕಸಭಾ ಚುನಾವಣೆ ವೇಳೆ ಮಾಡಿದ ರಾಜಕೀಯ ತಪ್ಪು ನಿರ್ಧಾರಗಳಿಂದ ಎಚ್ಚೆತ್ತುಕೊಂಡಿರುವ ಜೆಡಿಎಸ್ ವರಿಷ್ಠರು ಇದೀಗ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. 

ಜಿಲ್ಲೆಯ ಜನ ಕುಟುಂಬ ರಾಜಕಾರಣದ ಬಗ್ಗೆ ಮತ್ತೊಮ್ಮೆ ತಿರುಗಿಬೀಳುವ ವಾತಾವರಣ ಸೃಷ್ಟಿಯಾಗಲು ಅವಕಾಶ ನೀಡದೆ ತಾಳ್ಮೆಯಿಂದಲೇ ಮುನ್ನಡೆಯುತ್ತಿದ್ದಾರೆ.

ಸುಮಲತಾ ನಿಲುವು ಕಡೆ ಗಮನ: ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ತಮಗೇ ಸಿಗುವ ವಿಶ್ವಾಸದಲ್ಲಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಶ್‌ ಅವರಿನ್ನೂ ತಮ್ಮ ಮುಂದಿನ ನಡೆ ನಿರ್ಧರಿಸಿಲ್ಲ. 

ಮಾ.೧೫ರ ಬಳಿಕ ಬಿಜೆಪಿ ಸೇರುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ ಆ ನಂತರವೇ ಜೆಡಿಎಸ್‌ ನಿರ್ಧಾರ ಪ್ರಕಟಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಪಕ್ಷದ ನಾಯಕರಿದ್ದಾರೆ.

ಕೇಂದ್ರ ಸಚಿವ ಸ್ಥಾನದ ಬೇಡಿಕೆ?
ಒಂದು ವೇಳೆ ಕೇಂದ್ರದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಕೇಂದ್ರ ಮಂತ್ರಿಮಂಡಲದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೃಷಿ ಖಾತೆ ನೀಡಬೇಕೆಂಬ ಬೇಡಿಕೆ ಮುಂದಿಡಲಾಗಿದೆ. 

ಆ ಸಂಬಂಧ ಮಾತುಕತೆಗೆ ಬಿಜೆಪಿ ವರಿಷ್ಠರು ದೆಹಲಿಗೆ ಆಹ್ವಾನಿಸಿದ್ದಾರೆ. ಅವರೂ ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಕಣಕ್ಕಿಳಿಯುವಂತೆ ಒತ್ತಾಯಿಸುತ್ತಿದ್ದಾರೆ. 

ಈ ಮಾತುಕತೆ ಫಲಪ್ರದವಾದಲ್ಲಿ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯುವುದು ಖಚಿತ ಎಂದು ಹೇಳಲಾಗುತ್ತಿದೆ. ಇದು ಸಾಧ್ಯವಾಗದಿದ್ದರೆ ನಿಖಿಲ್‌ ಅಥವಾ ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಅಖಾಡ ಪ್ರವೇಶಿಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ನಿರಾಸೆ ಮಾಡಲ್ಲ: ಬೆಂಬಲಿಗರಿಗೆ ಎಚ್ಡಿಕೆ
ಮಂಡ್ಯ ಲೋಕಸಭಾ ಚುನಾವಣೆ ಕುರಿತು ಚರ್ಚಿಸಲು ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯ ಆರಂಭದಲ್ಲೇ ಕುಮಾರಸ್ವಾಮಿ ಅಥವಾ ನಿಖಿಲ್ ಇಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾಗಬೇಕು. ನೀವು ಕೇವಲ ಅರ್ಜಿ ಹಾಕಿ ಹೋಗಿ, ನಾವು ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಅಭಿಮಾನಿಗಳು ಕೂಗಿ ಹೇಳಿದರು.

ಸ್ವಾಗತ ಭಾಷಣಕ್ಕೂ ಅವಕಾಶ ನೀಡದೆ ಈ ಸಂಬಂಧ ತಕ್ಷಣ ನಿರ್ಧಾರ ಪ್ರಕಟಿಸುವಂತೆ ಒತ್ತಾಯಿಸಿದರು. ಕಾರ್ಯಕರ್ತರನ್ನು ಸಮಾಧಾನ ಮಾಡಿದ ಕುಮಾರಸ್ವಾಮಿ, ನಿಮಗೆ ನಾನು ನಿರಾಸೆ ಮಾಡಲ್ಲ. 

ಸಭೆಗೆ ಬಂದಾಗ ನಿಮ್ಮ ಕೂಗು ಕೇಳಿದ್ದೇವೆ. ನಾನು ಅಥವಾ ನಿಖಿಲ್ ಸ್ಪರ್ಧಿಸುವ ನಿಮ್ಮ ಮಾತಿಗೆ ಶಿರಭಾಗಿ ನಮಸ್ಕರಿಸುತ್ತೇನೆ. ನಿಮ್ಮ ಮಾತಿಗೆ ಅಪಚಾರ ಮಾಡಲು ಹೋಗುವುದಿಲ್ಲ. 

ನಿಮ್ಮ ಆಸೆಗೆ ಭಂಗವೂ ತರಲ್ಲ. ನಿಖಿಲ್ ಅವರಿಗೂ ಒಂದು ಮಾತು ಹೇಳುತ್ತೇನೆ. ನಿಮ್ಮ ಭಾವನೆಗಳಿಗೆ ಯಾವುದೇ ಕಾರಣಕ್ಕೂ ನಿರಾಸೆಯಾಗುವುದಿಲ್ಲ. ನಿಮ್ಮ ಆಸೆ ಏನಿದೆಯೋ ಅದನ್ನು ನೇರವೇರಿಸುತ್ತೇನೆ ಎಂದು ಭರವಸೆ ನೀಡಿದರು.

25ರ ನಂತರ ನಿರ್ಧಾರ ಪ್ರಕಟ: ಕಾರ್ಯಕರ್ತರ ಒತ್ತಡದ ಹೊರತಾಗಿಯೂ ಮಂಡ್ಯ ಅಭ್ಯರ್ಥಿ ಘೋಷಣೆ ಮಾಡದ ಅವರು, ಮಾ.೨೫ರ ನಂತರ ಈ ಕುರಿತು ತೀರ್ಮಾನಿಸುವುದಾಗಿ ತಿಳಿಸಿದರು. 

ಜತೆಗೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸೋಲನುಭವಿಸಿದರೆ ನಾವು ಬದುಕಿದ್ದೂ ಸತ್ತಂತೆ ಎಂದು ಭಾವನಾತ್ಮಕವಾಗಿ ಮಾತನಾಡಿದರು.ರಾಜಕುಮಾರ್ ಗೆ ನೀಡಿದಷ್ಟೇ ಗೌರವ ಅಂಬರೀಶ್ ಗೆ ಕೊಟ್ಟಿದ್ದೇನೆ: ಹೆಚ್ಡಿಕೆ

ನಾನು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ವರನಟ ಡಾ.ರಾಜಕುಮಾರ್ ಅವರಿಗೆ ಸಲ್ಲಿಸಿದಷ್ಟೇ ಗೌರವವನ್ನು ಅಂಬರೀಶ್ ಅವರಿಗೂ ಸಲ್ಲಿಸಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಾತ್ಯತೀತ ಜನತಾದಳದಿಂದ ಆಯೋಜಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನಾನು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ರಾಜಕುಮಾರ್‌ ನಿಧನರಾದರು. 

ಅವರಿಗೆ ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಮಾಡಲು ಅವಕಾಶ ಮಾಡಿಕೊಟ್ಟೆ. ನಂತರ ಅಂಬರೀಶ್ ಅವರು ಮೃತಪಟ್ಟ ಸಮಯದಲ್ಲೂ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರುವುದರಿಂದ ಹಿಡಿದು ಅವರ ಅಂತ್ಯಕ್ರಿಯೆ ಸುಸೂತ್ರವಾಗಿ ನಡೆಯುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇನೆ. 

ಅಲ್ಲದೆ ಡಾ.ರಾಜಕುಮಾರ್ ಸ್ಮಾರಕದ ಎದುರಿನಲ್ಲೇ ಅಂಬರೀಶ್ ಅವರಿಗೂ ಸ್ಮಾರಕ ನಿರ್ಮಿಸಿ ಗೌರವ ಸಲ್ಲಿಸಿದ್ದೇನೆ ಎಂದು ಹೇಳಿದರು.

ಅಂಬರೀಶ್ ಅವರಿಗೆ ಮೊದಲು ಜೆಡಿಎಸ್ ಟಿಕೆಟ್ ಕೊಟ್ಟು ಗೆಲ್ಲಿಸಿದ್ದು ನಾವು. ನಂತರದಲ್ಲಿ ಅವರು ಕಾಂಗ್ರೆಸ್ ಸೇರಿಕೊಂಡರು. 

ರಾಜಕೀಯವಾಗಿ ಅವರು ಬೇರೆ ಪಕ್ಷದಲ್ಲಿದ್ದರೂ ವೈಯಕ್ತಿಕವಾಗಿ ನಾವು ಅವರನ್ನು ಬಹಳ ಪ್ರೀತಿ ಅಭಿಮಾನದಿಂದ ಕಂಡಿದ್ದೇವೆ. ಅವರ ಬಗ್ಗೆ ಈಗಲೂ ಅಷ್ಟೇ ಗೌರವ ಅಭಿಮಾನ ಇರುವುದಾಗಿ ತಿಳಿಸಿದರು.ಸುಮಲತಾ ಮೌನ: ಮುಂದಿನ ನಡೆಯೇನು?

ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯು ಮಿತ್ರಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಬಿಜೆಪಿಯನ್ನು ಬೆಂಬಲಿಸಿದ್ದ ಹಾಲಿ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರ ಮುಂದಿನ ಹೆಜ್ಜೆ ಕುತೂಹಲ ಮೂಡಿಸಿದೆ.

ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದೆ ಸುಮಲತಾ ಅವರು ಮೌನಕ್ಕೆ ಶರಣಾಗಿದ್ದು, ತಮ್ಮ ಬೆಂಬಲಿಗರೊಂದಿಗೆ ಸತತ ಸಭೆಗಳನ್ನು ನಡೆಸುವ ಮೂಲಕ ಮುಂದೇನು ಮಾಡಬೇಕು ಎಂಬುದರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಬೆಂಬಲಿಸಿ ಹಲವು ತಿಂಗಳುಗಳ ಹಿಂದೆಯೇ ಬಿಜೆಪಿಯನ್ನು ಬೆಂಬಲಿಸಿದ್ದ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದ್ದರು. 

ಯಾವುದೇ ಕಾರಣಕ್ಕೂ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಬೇಡ ಎಂಬ ಅಭಿಪ್ರಾಯವನ್ನು ಬಿಜೆಪಿಯ ರಾಜ್ಯ ನಾಯಕರೂ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿವರೆಗೆ ಎಲ್ಲರಿಗೂ ಮನವಿ ಮಾಡಿದ್ದರು.

ಆದರೂ, ಜೆಡಿಎಸ್‌ ನಾಯಕರ ಒತ್ತಡಕ್ಕೆ ಮಣಿದ ಬಿಜೆಪಿ ರಾಷ್ಟ್ರೀಯ ನಾಯಕರು ಕೊನೆಗೂ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವ ತೀರ್ಮಾನ ಕೈಗೊಂಡರು.

ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿರುವುದರಿಂದ ಇದೀಗ ಸುಮಲತಾ ಅವರು ಆ ಪಕ್ಷಕ್ಕೂ ವಲಸೆ ಹೋಗುವಂತಿಲ್ಲ.

ಎರಡನೇ ಬಾರಿ ಪಕ್ಷೇತರ ಸದಸ್ಯೆಯಾಗಿ ಕಣಕ್ಕಿಳಿಯುವುದೊಂದೇ ಉಳಿದಿರುವ ದಾರಿ. ಅದು ಬೇಡ ಎಂದರೆ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿ ಪರ್ಯಾಯ ಹಾದಿಯನ್ನು ಕಂಡುಕೊಳ್ಳಬೇಕಾಗುತ್ತದೆ.

ಈ ಹಿಂದೆ ಸುಮಲತಾ ಅವರು ಬೆಂಗಳೂರು ಉತ್ತರಕ್ಕೆ ಸ್ಥಳಾಂತರಗೊಳ್ಳುತ್ತಾರೆ ಎಂಬ ವದಂತಿ ಹಬ್ಬಿತ್ತು. ಆಗಲೇ ಅವರು ಮಂಡ್ಯ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. 

ಈಗ ಅವರು ಮನಸ್ಸು ಮಾಡಿದರೂ ಅವಕಾಶ ಇಲ್ಲದಂತಾಗಿದೆ. ಆ ಕ್ಷೇತ್ರದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಲಾಗಿದೆ.

ಇನ್ನು ರಾಜ್ಯಸಭೆಗೆ ಹೋಗುವ ಅವಕಾಶವನ್ನು ಬಿಜೆಪಿ ನೀಡಬಹುದು. ಅದು ಆಗದಿದ್ದರೆ ಮುಂಬರುವ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ನಡೆಯುವ ಚುನಾವಣೆಯಲ್ಲಿ ಸುಲಭವಾಗಿ ಪರಿಷತ್ತಿಗೆ ಪ್ರವೇಶ ಪಡೆಯಬಹುದು. ಅಥವಾ ಇನ್ನೂ ಘೋಷಣೆಯಾಗದ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಕೇಳಬಹುದು ಎನ್ನಲಾಗುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಕ್ಕಲಿಗರು ಮತ್ತು ಬಲಿಜಿ ಸಮುದಾಯದ ಮತದಾರರು ನಿರ್ಣಾಯಕರಾಗಿದ್ದಾರೆ. ಪತಿ ಅಂಬರೀಶ್ ಅವರು ಒಕ್ಕಲಿಗರಾಗಿದ್ದು, ಸುಮಲತಾ ಅವರು ಬಲಿಜ ಸಮುದಾಯಕ್ಕೆ ಸೇರಿದವರು. 

ಈಗ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತು ಹಾಲಿ ಶಾಸಕ ಎಸ್‌.ಆರ್‌.ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. 

ಇವಹರಿಬ್ಬರ ಬದಲು ಸುಮಲತಾ ಅವರನ್ನು ಕಣಕ್ಕಿಳಿಸಬಹುದು ಎಂಬ ಚರ್ಚೆಯೂ ಬಿಜೆಪಿಯಲ್ಲಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Share this article