ಎಚ್‌ಡಿಕೆ ಗೆಲುವಿಗೆ ಪ್ರಾಮಾಣಿಕ ಕೆಲಸ ಮಾಡ್ತೀವಿ: ಚೇತನ್‌ ಗೌಡ ಸ್ಪಷ್ಟನೆ

KannadaprabhaNewsNetwork | Updated : Apr 14 2024, 01:11 PM IST

ಸಾರಾಂಶ

ವಿಶ್ವಮಟ್ಟದಲ್ಲಿ ನಾಯಕರಾಗಿ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ 3ನೇ ಬಾರಿ ಈ ದೇಶದ ನಾಯಕತ್ವ ವಹಿಸುವುದು ಅನಿವಾರ್ಯವಾಗಿದೆ. ಪ್ರಸ್ತುತ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲಿಸುವುದು ಎರಡೂ ಪಕ್ಷಗಳ ಸಂಕಲ್ಪವಾಗಿದೆ.

 ನಾಗಮಂಗಲ :  ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆಲುವಿಗೆ ಪ್ರಾಮಾಣಿಕ ಕೆಲಸ ಮಾಡುತ್ತೇವೆ ಹೊರತು, ಮಾಜಿ ಶಾಸಕ ಸುರೇಶ್‌ಗೌಡ ಹಾಗೂ ಸ್ಥಳೀಯ ಜೆಡಿಎಸ್‌ನೊಂದಿಗೆ ಜೊತೆಗೂಡಿ ಮತಯಾಚನೆ ಮಾಡುವುದಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಪುತ್ರ ಎಲ್.ಎಸ್.ಚೇತನ್‌ಗೌಡ ಸ್ಪಷ್ಟಪಡಿಸಿದರು.

ಪಟ್ಟಣದ ಟಿ.ಬಿ.ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿದ್ದರೂ ತಾಲೂಕು, ಹೋಬಳಿ, ಪಂಚಾಯ್ತಿ ಸೇರಿ ಬೂತ್ ಮಟ್ಟದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ಭಿನ್ನಾಭಿಪ್ರಾಯದ ಬೇಗುದಿ ಹಾಗೆ ಇದೆ ಎಂದರು.

ವಿಶ್ವಮಟ್ಟದಲ್ಲಿ ನಾಯಕರಾಗಿ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ 3ನೇ ಬಾರಿ ಈ ದೇಶದ ನಾಯಕತ್ವ ವಹಿಸುವುದು ಅನಿವಾರ್ಯವಾಗಿದೆ. ಪ್ರಸ್ತುತ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲಿಸುವುದು ಎರಡೂ ಪಕ್ಷಗಳ ಸಂಕಲ್ಪವಾಗಿದೆ ಎಂದರು.

ಬಿಜೆಪಿ ಪಕ್ಷದ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ಮೈತ್ರಿ ಅಭ್ಯರ್ಥಿ ಪರ ಬಹಿರಂಗಸಭೆ ಅಥವಾ ರೋಡ್ ಶೋಗಳಲ್ಲಿ ಭಾಗವಹಿಸಿದಾಗ ಮಾತ್ರ ಹಾಜರಿರುತ್ತೇವೆ. ಆದರೆ, ಸ್ಥಳೀಯವಾಗಿ ಜೆಡಿಎಸ್ ನಾಯಕರು, ಕಾರ್ಯಕರ್ತರೊಂದಿಗೆ ಬೆರೆತು ಮತ ಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಎಚ್‌ಡಿಕೆ ಗೆಲುವೊಂದೇ ನಮ್ಮ ಗುರಿ:

ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದು, ಈ ಸಂಬಂಧ ತಾಲೂಕು ಬಿಜೆಪಿ ಘಟಕದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಎಚ್‌.ಡಿ.ಕುಮಾರಸ್ವಾಮಿ ಗೆಲುವಿನ ಗುರಿಯೊಂದಿಗೆ ಕ್ಷೇತ್ರದ ಒಟ್ಟು 257 ಬೂತ್ ಮಟ್ಟದಲ್ಲಿಯೂ ಮನೆ ಮನೆ ಪ್ರಚಾರ ಮತ್ತು ಮತ ಯಾಚನೆ ಮಾಡಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಎಲ್‌ಆರ್‌ಎಸ್ ರಾಜಕೀಯ ನಿವೃತ್ತಿ!:

ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಯ ಜೆಡಿಎಸ್ ಅಭ್ಯರ್ಥಿಯಾಗಿ ದಾಖಲೆಯ ಗೆಲುವು ಸಾಧಿಸಿದ್ದ ನಮ್ಮ ತಂದೆ ಎಲ್.ಆರ್.ಶಿವರಾಮೇಗೌಡರು ಆರೋಗ್ಯ ಸಮಸ್ಯೆಯಿಂದ ಇನ್ನು ಮುಂದೆ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ. ಹಾಗೆಯೇ ಯಾವುದೇ ರಾಜಕೀಯ ಸಭೆ, ಸಮಾರಂಭಗಳ ವೇದಿಕೆಯನ್ನೂ ಸಹ ಹಂಚಿಕೊಳ್ಳುವುದಿಲ್ಲ ಎಂದರು. ಮುಂದಿನ ಜೂನ್‌ಗೆ 70ನೇ ವರ್ಷದ ಹುಟ್ಟುಹಬ್ಬದ ಆಚರಣೆಯಲ್ಲಿ ನಮ್ಮ ತಂದೆಯವರೇ ಅಧಿಕೃತವಾಗಿ ಸ್ವಯಂ ರಾಜಕೀಯ ನಿವೃತ್ತಿ ಘೋಷಿಸಲಿದ್ದಾರೆ. ಅಲ್ಲಿವರೆಗೂ ಅವರು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದರು.

ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಸೋಮಶೇಖರ್, ಹಿರಿಯ ವಕೀಲ ಟಿ.ಕೆ.ರಾಮೇಗೌಡ, ತಾಪಂ ಮಾಜಿ ಸದಸ್ಯರಾದ ಚಿಣ್ಯ ಕರಿಯಣ್ಣ, ಹೇಮರಾಜ್, ಮುಖಂಡರಾದ ಪಾಳ್ಯ ರಘು, ಲಾರಿ ಚನ್ನಪ್ಪ, ತೊಳಲಿ ಕೃಷ್ಣಮೂರ್ತಿ ಸೇರಿ ಹಲವರಿದ್ದರು.

Share this article