ಬೆಮ್ಮನೆಯಲ್ಲಿ ಸಮುದಾಯ ಆಧಾರಿತ ಆರೋಗ್ಯ ತಪಾಸಣೆ ಶಿಬಿರ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಆರೋಗ್ಯ ಇಲಾಖೆ ಸೇವೆಗಳು ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೂ ತಲಪಬೇಕು ಎಂಬುದು ಸಮುದಾಯ ಆಧಾರಿತ ಆರೋಗ್ಯ ತಪಾಸಣೆ ಶಿಬಿರದ ಉದ್ದೇಶ ಎಂದು ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಸುರೇಶ್ ತಿಳಿಸಿದರು.
ಸೀತೂರು ಗ್ರಾಪಂ ಕೊನೋಡಿ ಗ್ರಾಮದ ಬೆಮ್ಮನೆಯ ಸಮುದಾಯ ಭವನದಲ್ಲಿ ಮುತ್ತಿನ ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಪಂ, ಕೊನೋಡಿ ಸಂಚಲನ ಸಮಿತಿ ಸಂಯುಕ್ತ ಆಶ್ರಯದಲ್ಲಿ ನಡೆದ ಸಮುದಾಯ ಆಧಾರಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.ರಾಷ್ಠೀಯ ಕಾರ್ಯಕ್ರಮಗಳಾದ ಅಂಧತ್ವ ನಿವಾರಣೆ, ದಂತ ಚಿಕಿತ್ಸೆ, ಕ್ಷಯ ರೋಗ ನಿವಾರಣೆ ಮುಂತಾದ ರೋಗಗಳ ನಿಯಂತ್ರಣ ಮಾಡುವ ಉದ್ದೇಶದಿಂದ ಗ್ರಾಮಗಳಲ್ಲಿ ವಿಶೇಷ ಆರೋಗ್ಯ ಶಿಬಿರ ನಡೆಸ ಲಾಗುತ್ತಿದ್ದು ಆರೋಗ್ಯ ಇಲಾಖೆಯಿಂದ ಗ್ರಾಮಸ್ಥರ ಆರೋಗ್ಯ ಕಾಪಾಡುತ್ತಿದ್ದೇವೆ ಎಂದರು.
ಗ್ರಾಪಂ ಸದಸ್ಯ ಎಚ್.ಇ.ದಿವಾಕರ ಮಾತನಾಡಿ, ಆರೋಗ್ಯ ಸಮಸ್ಯೆ ಬಂದಾಗ ತಜ್ಞ ವೈದ್ಯರನ್ನು ಕಾಣ ಬೇಕಾದರೆ ರೋಗಿಗಳು ದೂರದ ಆಸ್ಪತ್ರೆಗೆ ಹೋಗಿ ಹಣ ಖರ್ಚು ಮಾಡಿ ಚಿಕಿತ್ಸೆ ಪಡೆಯಬೇಕು. ಆದರೆ, ಇಂದು ಆರೋಗ್ಯ ಇಲಾಖೆ ತಜ್ಞ ವೈದ್ಯರೇ ಗ್ರಾಮಕ್ಕೆ ಬಂದು ಆರೋಗ್ಯ ತಪಸಾಣೆ ಮಾಡುತ್ತಿದ್ದು ಇದನ್ನು ಉಪಯೋಗಿಸಿಕೊಳ್ಳಬೇಕು ಎಂದರು.ಗ್ರಾಪಂ ಸದಸ್ಯ ಉಪೇಂದ್ರ ಮಾತನಾಡಿ, ಮನುಷ್ಯನಿಗೆ ಆರೋಗ್ಯವೇ ಭಾಗ್ಯ. ಆರೋಗ್ಯವಾಗಿರಲು ಉತ್ತಮ ಪರಿಸರದ ಅವಶ್ಯಕತೆ ಇದೆ ಎಂದರು.
ನೇತ್ರಾಧಿಕಾರಿ ಕೃಷ್ಣಮೂರ್ತಿ ರಾಷ್ಟೀಯ ಅಂದತ್ವ ನಿವಾರಣಾ ಕಾರ್ಯಕ್ರಮದಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಪ್ರೇಮ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಸಿದ್ದಪ್ಪ, ನೇತ್ರ ತಜ್ಞೆ ಡಾ.ಶ್ರೀರಂಜಿನಿ, ದಂತ ವೈದ್ಯ ಡಾ.ಶ್ರೀನಿವಾಸ್, ಕೊನೋಡಿ ಸಂಚಲನ ಸಮಿತಿ ಅಧ್ಯಕ್ಷ ನಿಷ್ಟು ಮೂರ್ತಿ, ಸದಸ್ಯ ಮನೋಜ್,ಸಮುದಾಯ ಆರೋಗ್ಯ ಸುರಕ್ಷಣಾಧಿಕಾರಿ ಉಷಾ, ಕ್ಷಯ ರೋಗ ಚಿಕಿತ್ಸಾ ಮೇಲ್ವೀಚಾರಕ ಪವನ್, ಆರೋಗ್ಯ ಇಲಾಖೆಯ ಸುಹಾಸ್, ಹಿರಿಯ ಆರೋಗ್ಯನಿರೀಕ್ಷಾಣಾಧಿಕಾರಿ ಮಹಮ್ಮದ್ ಇಲಿಯಾಸ್, ಪ್ರಾ.ಆರೋಗ್ಯ ಸುರಕ್ಷಣಾಧಿಕಾರಿ ಅನ್ನಮ್ಮ, ಆರೋಗ್ಯ ಇಲಾಖೆ ಆಶಾ ಮತ್ತಿತರರು ಇದ್ದರು.