ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪರಿಸರ ಸಂರಕ್ಷಣೆಯು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ಉತ್ತಮ ಪರಿಸರ ನಿರ್ಮಾಣದಿಂದ ಎಲ್ಲರ ಆರೋಗ್ಯ ವೃದ್ಧಿಯಾಗುತ್ತದೆ. ಸಸಿಗಳನ್ನು ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ಸಿ.ಎ. ದೇವ್ ಆನಂದ್ ಹೇಳಿದರು.ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಶಕ್ತಿಧಾಮ ಬಡಾವಣೆಯಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಹಾಗೂ 101 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈಗಾಗಲೇ ರೋಟರಿ ವತಿಯಿಂದ ನಿರಂತರವಾಗಿ ಜಿಲ್ಲಾ ಯೋಜನೆಯಲ್ಲಿ ಪರಿಸರ ಸಂರಕ್ಷಣೆ, ಪರಿಸರ ಜಾಗೃತಿ ಹಾಗೂ ಶಿಕ್ಷಣ ಆರೋಗ್ಯ ಸೇವೆಗಳ ಬಗ್ಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ ಎಂದು ತಿಳಿಸಿದರು.ರೋಟರಿ ಸದಸ್ಯರು ಜನ್ಮದಿನ, ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು. ಈ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ಉತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಬೇಕು. ಜಿಲ್ಲಾ ಯೋಜನೆಗಳಲ್ಲಿ ಒಂದಾದ ಪರಿಸರ ಸಂರಕ್ಷಣೆ ಮುಂದಿನ ಮನುಕುಲಕ್ಕೆ ತುಂಬಾ ಅಗತ್ಯವಾಗಿ ಬೇಕಾಗಿರುವ ಯೋಜನೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರೋಟರಿ ವಲಯ 11ರ ಸಹಾಯಕ ಗವರ್ನರ್ ಸುರೇಶ್ ಎಚ್ಎಂ. ಮಾತನಾಡಿ, ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ತುಂಬಾ ಮುಖ್ಯ. ಆದ್ದರಿಂದ ನಮ್ಮ ಸಾಮಾಜಿಕ ಸೇವೆಗಳ ಮಧ್ಯೆ ಉತ್ತಮ ಪರಿಸರ, ಉತ್ತಮವಾದ ವಾತಾವರಣವನ್ನು ಕಲ್ಪಿಸಲು ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಬೇಕು. ರೋಟರಿ ಸಂಸ್ಥೆ ವತಿಯಿಂದ ಜಿಲ್ಲಾದ್ಯಂತ ಎಲ್ಲ ಕ್ಲಬ್‌ಗಳು ಸೇರಿ ವಿವಿಧ ಬಗೆಯ ಸಸಿಗಳನ್ನು ನೆಡುವುದರ ಮುಖಾಂತರ ಉತ್ತಮ ವಾತಾವರಣ ನಿರ್ಮಿಸುತ್ತಿದ್ದಾರೆ ಎಂದು ಹೇಳಿದರು.ರೋಟರಿ ಮಾಜಿ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ ಮಾತನಾಡಿ, ಬಡಾವಣೆಗಳು, ಮನೆಗಳು ಸುಂದರವಾಗಿರಲು ಗಿಡಮರಗಳು ನಮಗೆ ಅಗತ್ಯವಾಗಿ ಬೇಕು. ಈ ನಿಟ್ಟಿನಲ್ಲಿ ನಮ್ಮ ಬಡಾವಣೆಯಲ್ಲಿ ಪ್ರಥಮ ಬಾರಿಗೆ 101 ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎಲ್ಲ ಬಡಾವಣೆಗಳ ನಿವಾಸಿಗಳ ಸಂಘದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ಜಿಲ್ಲಾ ಗವರ್ನರ್ ಅವರ ಅಧಿಕೃತ ಭೇಟಿ ಸಂದರ್ಭದಲ್ಲಿ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಶಕ್ತಿಧಾಮ ಟೌನ್‌ಶಿಪ್ 2ನೇ ಹಂತದ ಅಧ್ಯಕ್ಷ ಹಾಲಸ್ವಾಮಿ, ಮೂರ್ತಿ, ಪ್ರಕಾಶ್, ಸತೀಶ್, ಶಿವಾನಂದ್, ಶಿಶಿರ, ಪ್ರೇಮ್ ಕುಮಾರ್, ವಿಜಯಲಕ್ಷ್ಮೀ, ರೂಪಾ, ಮಾಜಿ ಸಹಾಯಕ ಗವರ್ನರ್ ಜಿ. ವಿಜಯಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ವಲಯ ಸೇನಾನಿ ಮಂಜುನಾಥ ರಾವ್ ಕದಂ, ವಸಂತ ಹೋಬಳಿದಾರ್, ಕಿಶೋರ್, ರವಿಶಂಕರ್, ನಾಗರಾಜ್, ಡಾ. ಧನಂಜಯ, ಶ್ರೀಕಾಂತ್, ಸಂಜೀವ್, ರೇಖಾ ದೇವಾನಂದ್ ಉಪಸ್ಥಿತರಿದ್ದರು.