ಆರೋಗ್ಯವಂತರು ರಕ್ತದಾನ ಮಾಡಬಹುದು: ಧರಣೇಂದ್ರ ದಿನಕರ್‌

KannadaprabhaNewsNetwork | Published : Mar 18, 2024 1:51 AM

ಸಾರಾಂಶ

18 ವರ್ಷದಿಂದ 64 ವರ್ಷದ ಒಳಗಿನ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು ಎಂದು 113 ಬಾರಿ ರಕ್ತದಾನ ಮಾಡಿ ದಾಖಲೆ ನಿರ್ಮಿಸಿರುವ ಶಿವಮೊಗ್ಗ ಸಂಜೀವಿನ ರಕ್ತ ನಿಧಿ ಕೇಂದ್ರದ ಹಿರಿಯ ಸಹಾಯಕ ಧರಣೇಂದ್ರ ದಿನಕರ್‌ ತಿಳಿಸಿದರು.

ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ನೆನಪಿನಲ್ಲಿ ಬೃಹತ್‌ ರಕ್ತದಾನ ಶಿಬಿರ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

18 ವರ್ಷದಿಂದ 64 ವರ್ಷದ ಒಳಗಿನ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು ಎಂದು 113 ಬಾರಿ ರಕ್ತದಾನ ಮಾಡಿ ದಾಖಲೆ ನಿರ್ಮಿಸಿರುವ ಶಿವಮೊಗ್ಗ ಸಂಜೀವಿನ ರಕ್ತ ನಿಧಿ ಕೇಂದ್ರದ ಹಿರಿಯ ಸಹಾಯಕ ಧರಣೇಂದ್ರ ದಿನಕರ್‌ ತಿಳಿಸಿದರು.

ಭಾನುವಾರ ಬಸ್‌ ನಿಲ್ದಾಣದ ಆವರಣದಲ್ಲಿ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ನೆನಪಿನಲ್ಲಿ ಅಭಿನವ ಪ್ರತಿಭಾ ವೇದಿಕೆ, ಶಿವಮೊಗ್ಗ ರೆಡ್ ಕ್ರಾಸ್ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ದಿನಕ್ಕೆ 350 ಯೂನಿಟ್ ರಕ್ತದ ಅವಶ್ಯಕತೆ ಇದೆ. ಆದರೆ, 150 ರಿಂದ 200 ಯೂನಿಟ್‌ ರಕ್ತದ ಮಾತ್ರ ಸಿಗುತ್ತಿದೆ. ರಕ್ತದಾನ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಾಗಲಿದೆ. ಹೃದಯ ರೋಗ ಬರುವುದಿಲ್ಲ. ಬಿ.ಪಿ ಹಾಗೂ ಶುಗರ್‌ ಕಡಿಮೆಯಾಗಲಿದೆ. ನಮ್ಮ ದೇಹದಲ್ಲಿ ಪ್ರತಿ ದಿನ 100 ಎಂ.ಎಲ್‌. ರಕ್ತ ಉತ್ಪತ್ತಿಯಾಗಲಿದೆ. 4 ತಿಂಗಳಿಗೊಮ್ಮೆ ರಕ್ತ ದಾನ ಮಾಡಬಹುದು ಎಂದರು. ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಮಾಜಿ ಅಧ್ಯಕ್ಷ ಪಿ.ಆರ್‌. ಸುಕುಮಾರ್‌ ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುನೀತ್ ರಾಜ್ ಕುಮಾರ್ ಯುವಕರಿಗೆ ಸ್ಪೂರ್ತಿಯಾಗಿದ್ದರು. ಅವರ ಹುಟ್ಟು ಹಬ್ಬದ ನೆನಪಿನಲ್ಲಿ ಅಭಿನವ ಪ್ರತಿಭಾ ವೇದಿಕೆ ಅಧ್ಯಕ್ಷ ಅಭಿನವ ಗಿರಿರಾಜ್ ನೇತ್ರತ್ವದಲ್ಲಿ ರಕ್ತದಾನ ಶಿಬಿರ ನಡೆದಿರುವುದು ಉತ್ತಮ ಕಾರ್ಯಕ್ರಮ . ಪ್ರಸ್ತುತ ರಕ್ತದ ಕೊರತೆ ಇರುವುದರಿಂದ ರಕ್ತದಾನದಿಂದ ರಕ್ತ ಶೇಖರಣೆ ಆಗಲಿದೆ ಎಂದರು. ಶಿವಮೊಗ್ಗ ರೆಡ್ ಕ್ರಾಸ್‌ ಸಂಸ್ಥೆ ಖಜಾಂಚಿ ನವೀನ್ ಮಾತನಾಡಿ, ಕಳೆದ 20 ವರ್ಷದಿಂದಲೂ ನರಸಿಂಹರಾಜಪುರದಲ್ಲಿ ರಕ್ತದಾನ ಶಿಬಿರ ನಡೆಯುತ್ತಿದ್ದು ರೆಡ್ ಕ್ರಾಸ್‌ ಸಂಸ್ಥೆಯಿಂದ ಎಲ್ಲಾ ಸಹಕಾರ ನೀಡುತ್ತಿದ್ದೇವೆ. ತುರ್ತು ಸಂದರ್ಭದಲ್ಲಿ ರಕ್ತ ಬೇಕಾದವರಿಗೆ ನೀಡುತ್ತಿದ್ದೇವೆ.1 ಯೂನಿಟ್ ರಕ್ತದಿಂದ 3 ಜೀವ ಉಳಿಸಬಹುದು.ದಾನದಿಂದ ಬಂದ ರಕ್ತವನ್ನು 3 ವಿಭಾಗ ಮಾಡುತ್ತಿದ್ದೇವೆ. ಆ ವಿಂಗಡಿಸದ ರಕ್ತವನ್ನು 3 ಬೇರೆ, ಬೇರೆ ರೋಗಿಗಳಿಗೆ ಬಳಸುತ್ತಿದ್ದೇವೆ. ದಾನದಿಂದ ಬಂದ ರಕ್ತವನ್ನು ದಾನವಾಗಿ ನೀಡುತ್ತೇವೆ. ಆದರೆ, ರಕ್ತವನ್ನು ವಿಂಗಡಿಸಿ, ಸುರಕ್ಷಿತವಾಗಿ ರಕ್ಷಿಸುವ ಪ್ರಕ್ರಿಯೆ ಖರ್ಚನ್ನು ಮಾತ್ರ ರೋಗಿಗಳು ನೀಡಬೇಕಾಗಿದೆ ಎಂದರು.

ಶಿಬಿರದಲ್ಲಿ 20 ಮಹಿಳೆಯರು ಸೇರಿ 60 ಜನರು ರಕ್ತದಾನ ಮಾಡಿದರು. ಇದೇ ಸಂದರ್ಭದಲ್ಲಿ 100 ನೇ ಬಾರಿ ರಕ್ತದಾನ ಮಾಡಿದ ಅಭಿನವ ಗಿರಿರಾಜ್ ಅವರನ್ನು ಶಿವಮೊಗ್ಗ ರೆಡ್ ಕ್ರಾಸ್‌ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಸಭೆಯಲ್ಲಿ ಎಂ.ಶ್ರೀನಿವಾಸ್ ಅಭಿಮಾನಿ ಬಳಗದ ಅಧ್ಯಕ್ಷ ಪ್ರಶಾಂತಶೆಟ್ಟಿ, ಮುತ್ತಿನಕೊಪ್ಪ ಜನಜಾಗೃತಿ ವೇದಿಕೆ ಅಧ್ಯಕ್ಷ ಮನೋಹರ್‌, ರೆಡ್‌ ಕ್ರಾಸ್‌ ಕಾರ್ಯದರ್ಶಿ ಮಂಜುನಾಥ್ ಅಪ್ಪಾಜಿ, ರೋಟರಿ ಕ್ಲಬ್ ಅಧ್ಯಕ್ಷ ಕಿರಣ್‌, ಕಾರ್ಯದರ್ಶಿ ವಿದ್ಯಾನಂದಕುಮಾರ್, ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು,ಕಾರ್ಯದರ್ಶಿ ವಿನೂತ್, ಲಯನ್ಸ್ ಕ್ಲಬ್ ಅಧ್ಯಕ್ಷ ರವಿಚಂದ್ರನ್, ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಮದುಸೂಧನ್, ತಿರುಮಲ ಗೆಳೆಯರ ಬಳಗದ ಅಧ್ಯಕ್ಷ ರಜತ್‌, ತಾಪಂ ಅಧಿಕಾರಿ ಮನೀಶ್‌, ಮುಖಂಡರಾದ ರಾಜಕುಮಾರ್‌, ವಾಲ್ಮೀಕಿ ಶ್ರೀನಿವಾಸ್, ಸುಬ್ರಮಣ್ಯ ಮತ್ತಿತರರು ಇದ್ದರು.

Share this article