ಸಾಲುಸಾಲು ಹೃದಯಾಘಾತದ ಸಾವಿನ ಬೆನ್ನಲ್ಲೇ ರಾಜ್ಯ ಸರ್ಕಾರದ ಮಹತ್ವದ ಘೋಷಣೆ

KannadaprabhaNewsNetwork |  
Published : Jul 07, 2025, 11:48 PM ISTUpdated : Jul 08, 2025, 06:20 AM IST
ದಿನೇಶ್‌ ಗುಂಡೂರಾವ್  | Kannada Prabha

ಸಾರಾಂಶ

‘ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್‌ ಹೃದಯಾಘಾತ ಪ್ರಕರಣಗಳಿಗೆ ಕೋವಿಡ್ ಲಸಿಕೆ ಕಾರಣವಲ್ಲ. ಕೊರೋನಾ ಸೋಂಕಿನ ನಂತರ ಬದಲಾದ ಜೀವನಶೈಲಿಯಿಂದ ಹೃದಯಾಘಾತ ಹೆಚ್ಚಾಗುತ್ತಿದೆ. 

 

  ಬೆಂಗಳೂರು

‘ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್‌ ಹೃದಯಾಘಾತ ಪ್ರಕರಣಗಳಿಗೆ ಕೋವಿಡ್ ಲಸಿಕೆ ಕಾರಣವಲ್ಲ. ಕೊರೋನಾ ಸೋಂಕಿನ ನಂತರ ಬದಲಾದ ಜೀವನಶೈಲಿಯಿಂದ ಹೃದಯಾಘಾತ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಹೃದಯಾಘಾತದ ವಿಚಾರ ಶಾಲಾ ಪಠ್ಯದಲ್ಲಿ ಅಳವಡಿಕೆ, 15 ವರ್ಷದ ಮಕ್ಕಳಿಗೆ ಶಾಲೆಯಲ್ಲೇ ಹೃದಯ ಸೇರಿ ಆರೋಗ್ಯ ತಪಾಸಣೆ, ಎಲ್ಲಾ ತಾಲೂಕು ಆಸ್ಪತ್ರೆಗಳಿಗೂ ಪುನೀತ್‌ ರಾಜ್‌ಕುಮಾರ್‌ ಹೃದಯ ಜ್ಯೋತಿ ಯೋಜನೆ ವಿಸ್ತರಿಸಲು ನಿರ್ಣಯಿಸಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದರು.

ಅಲ್ಲದೆ, ಹೃದಯಾಘಾತವನ್ನು ‘ಅಧಿಸೂಚಿತ ಕಾಯಿಲೆ’ ಎಂದು ಘೋಷಿಸಲು ತೀರ್ಮಾನಿಸಲಾಗಿದೆ. ಆಸ್ಪತ್ರೆಯ ಹೊರಗೆ ಯಾರಾದರೂ ಹಠಾತ್‌ ಹೃದಯಾಘಾತದಿಂದ ತೀರಿಕೊಂಡರೆ ಮರಣೋತ್ತರ ಪರೀಕ್ಷೆ ಕಡ್ಡಾಯ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ತಿಳಿಸಿದರು.

ರಾಜ್ಯದಲ್ಲಿ ಸಣ್ಣ ವಯಸ್ಸಿನವರಲ್ಲೇ ಹೃದಯಾಘಾತ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಸೋಂಕು ಹಾಗೂ ಲಸಿಕೆಯ ಅಡ್ಡಪರಿಣಾಮದ ಬಗ್ಗೆ ಅಧ್ಯಯನ ನಡೆಸಲು ರಚಿಸಿದ್ದ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಕೆ.ಎಸ್‌.ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿ ವರದಿ ಉಲ್ಲೇಖಿಸಿ ಅವರು ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಹೃದಯಾಘಾತ ಸಾಲು-ಸಾಲು ಕ್ರಮ:

ಹೃದಯಾಘಾತವನ್ನು ‘ಅಧಿಸೂಚಿತ ಕಾಯಿಲೆ’ ಎಂದು ಘೋಷಿಸಿ ಎಲ್ಲೇ ಹೃದಯಾಘಾತ ಆದರೂ ಇಲಾಖೆಗೆ ಅಧಿಕೃತವಾಗಿ ವರದಿ ನೀಡಬೇಕು. ಆಸ್ಪತ್ರೆ ಹೊರಗೆ ಹಠಾತ್‌ ಸಾವಾಗಿದ್ದರೆ ಮರಣೋತ್ತರ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು ಎಂದು ನಿರ್ಧರಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.

ಇನ್ನು ಆರೋಗ್ಯ ಇಲಾಖೆಯಿಂದ 15 ವರ್ಷದೊಳಗಿನ ಮಕ್ಕಳಿಗೆ ವರ್ಷಕ್ಕೊಮ್ಮೆಯಾದರೂ ಶಾಲಾ ಮಟ್ಟದಲ್ಲೇ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ. ಹೃದಯಾಘಾತ ಸೇರಿ ಅಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಶಾಲಾ ಹಂತದಲ್ಲೇ ಬೋಧನೆಗೆ ಪಠ್ಯ ಪರಿಷ್ಕರಣೆ ವೇಳೆ ವಿಷಯ ಸೇರ್ಪಡೆ, ಅಲ್ಲಿಯವರೆಗೆ ನೈತಿಕ ಪಾಠ ಮಾಡುವ ವೇಳೆ ಶಿಕ್ಷಣ ನೀಡುವುದಾಗಿ ಪ್ರಾಥಮಿಕ ಶಿಕ್ಷಣ ಸಚಿವ ಮಧುಬಂಗಾರಪ್ಪ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಪುನೀತ್ ಹೃದಯಜ್ಯೋತಿ ವಿಸ್ತರಣೆ:

ಪುನೀತ್ ರಾಜ್‌ಕುಮಾರ್‌ ಹೃದಯ ಜ್ಯೋತಿ ಯೋಜನೆ ಪ್ರಸ್ತುತ 86 ಆಸ್ಪತ್ರೆಗಳಲ್ಲಿದ್ದು, ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಿಸಿ ಇಸಿಜಿ, ಹೃದಯ ಸಂಬಂಧಿ ತಜ್ಞರ ನೆರವು ಸಿಗುವಂತೆ ಮಾಡಲಾಗುವುದು. ನೈಪುಣ್ಯತೆ ಇರುವವರು ಲಭ್ಯವಿರುವ ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಎಇಡಿ (ಆಟೋಮೇಟೆಡ್‌ ಎಕ್ಸ್ಟೆಂಡೆಡ್‌ ಡೆಫಿಬ್ರೇಲೆಟರ್) ಅಳವಡಿಕೆ ಮಾಡುತ್ತೇವೆ. ಪ್ರತಿ ವರ್ಷ ಸರ್ಕಾರಿ ನೌಕರರು ಹಾಗೂ ಗುತ್ತಿಗೆ ನೌಕರರಿಗೆ ಹೃದಯ ಸಂಬಂಧ ಸೇರಿ ಆರೋಗ್ಯ ತಪಾಸಣೆಗೆ ನಿರ್ಧರಿಸಲಾಗಿದೆ. ಖಾಸಗಿ ಕಂಪನಿಗಳಲ್ಲೂ ಪ್ರತಿ ವರ್ಷ ಒಂದು ಬಾರಿಯಾದರೂ ಆರೋಗ್ಯ ತಪಾಸಣೆ ಮಾಡಲು ಸೂಚನೆ ನೀಡಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಕೋವಿಡ್‌ ಬಳಿಕ ಹೃದಯಾಘಾತ ಶೇ.5ರಷ್ಟು ಹೆಚ್ಚಳ:

ವರದಿ ಪ್ರಕಾರ ಕೋವಿಡ್‌ ಲಸಿಕೆಯಿಂದ ಹೃದಯಾಘಾತಗಳು ಹೆಚ್ಚಾಗಿಲ್ಲ ಬದಲಿಗೆ ಕೋವಿಡ್‌ ಲಸಿಕೆಯಿಂದ ಒಳ್ಳೆಯದಾಗಿದೆ. ಕೋವಿಡ್‌ ಲಸಿಕೆ ಇಲ್ಲದಿದ್ದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಾವಿಗೀಡಾಗುತ್ತಿದ್ದರು. ಆದರೆ, ಕೋವಿಡ್‌ ಬಂದ ನಂತರ ಹೃದಯಾಘಾತ ಪ್ರಕರಣ ಶೇ.5 ರಷ್ಟು ಹೆಚ್ಚಾಗಿವೆ. ಇದು ಕೇವಲ ಕೋವಿಡ್‌ ಸೋಂಕಿನಿಂದಲೇ ಅಲ್ಲದಿರಬಹುದು. ಕೋವಿಡ್‌ ವೇಳೆ ಸ್ಟಿರಾಯ್ಡ್‌, ಬೇರೆ ಬೇರೆ ಔಷಧ ಸೇವನೆ, ಸೋಂಕಿನ ನಂತರ ಬದಲಾದ ಜೀವನಶೈಲಿ, ಒತ್ತಡದ ಜೀವನದಿಂದಾಗಿ ಮಧುಮೇಹ, ಬೊಜ್ಜು, ಮಾನಸಿಕ ಒತ್ತಡ, ಮೊಬೈಲ್‌ ಅಥವಾ ಟಿವಿ ನೋಡುವುದು ಹೆಚ್ಚಾಗಿರುವುದು ಮತ್ತಿತರ ಕಾರಣಗಳಿಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿರಬಹುದು. ಹೀಗಾಗಿ ಕೋವಿಡ್‌ ಪರಿಣಾಮ ಖಂಡಿತವಾಗಿಯೂ ಸಾರ್ವಜನಿಕರ ಮೇಲೆ ಆಗಿದೆ ಎಂದು ದಿನೇಶ್ ಗುಂಡೂರಾವ್‌ ಸ್ಪಷ್ಟಪಡಿಸಿದರು.

ಲಸಿಕೆ ಇಲ್ಲದಿದ್ದರೆ ಮತ್ತಷ್ಟು ಜನರ ಸಾವು:

ಕೋವಿಡ್‌ ಲಸಿಕೆಯಿಂದ ಜನರಿಗೆ ಅನುಕೂಲವಾಗಿದೆ. ಎಂಆರ್‌ಎನ್‌ಎ ಲಸಿಕೆಯಿಂದ ಸ್ವಲ್ಪ ಸಮಸ್ಯೆಯಾಗಿದೆ. ಆದರೆ ಆ ಲಸಿಕೆ ನಮ್ಮ ದೇಶದಲ್ಲಿ ನೀಡಿಲ್ಲ. ನಮ್ಮಲ್ಲಿ ನೀಡಿರುವ ಲಸಿಕೆಯಿಂದ ಒಳ್ಳೆಯದಾಗಿದೆ. ಲಸಿಕೆ ತೆಗೆದುಕೊಳ್ಳದಿದ್ದರೆ ಇನ್ನಷ್ಟು ಜನ ಸಾವಿಗೀಡಾಗುತ್ತಿದ್ದರು ಎಂದು ದಿನೇಶ್ ಹೇಳಿದರು.

ಈಗ ಕೋವಿಡ್‌ನಿಂದ ಹೃದಯಾಘಾತ ಇಲ್ಲ: ರವೀಂದ್ರನಾಥ್ಕೊರೋನಾ ಸೋಂಕಿಗೂ ಈಗ ಸಂಭವಿಸುತ್ತಿರುವ ಹೃದಯಾಘಾತಗಳಿಗೂ ಸಂಬಂಧವಿಲ್ಲ. ಕೋವಿಡ್‌ ಸಮಯದಲ್ಲಿ ಸೋಂಕು, ಉರಿಯೂತ ಸಮಸ್ಯೆಯಿಂದ ರಕ್ತನಾಳ ಬ್ಲಾಕ್‌ ಆಗಿ ಹೃದಯಾಘಾತ ಹಾಗೂ ಸ್ಟ್ರೋಕ್‌ ಆಗುತ್ತಿತ್ತು. ಇದೀಗ ಕೊರೋನಾ ಸಾಂಕ್ರಾಮಿಕ ಹೋಗಿ 3-4 ವರ್ಷ ಬಳಿಕವೂ ಕೋವಿಡ್‌ನಿಂದ ಹೃದಯಾಘಾತ ಆಗುತ್ತಿರುವ ಸಾಧ್ಯತೆ ಕಡಿಮೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಹಾಗೂ ತಜ್ಞರ ಸಮಿತಿ ಮುಖ್ಯಸ್ಥ ಡಾ.ಕೆ.ಎಸ್. ರವೀಂದ್ರನಾಥ್ ಸ್ಪಷ್ಟಪಡಿಸಿದರು.

ಆದರೆ, ಹೃದಯಾಘಾತದ ಅಪಾಯ ಧೂಮಪಾನಿಗಳಲ್ಲಿ ಅತಿ ಹೆಚ್ಚು ಇದೆ. ಶೇ.50ಕ್ಕೂ ಹೆಚ್ಚು ಹೃದಯಾಘಾತಗಳಿಗೆ ಧೂಮಾಪನದ ಸಂಬಂಧ ಇದೆ. ಕೋವಿಡ್‌ನಿಂದ ಬಳಲಿದವರ ಜೀವನ ಶೈಲಿ, ಒತ್ತಡದ ಜೀವನದಿಂದಲೂ ಶೇ.5 ರಿಂದ 6 ರಷ್ಟು ಹೃದಯಾಘಾತಗಳು ಹೆಚ್ಚಾಗಿರಬಹುದು ಎಂದು ಹೇಳಿದರು.

ಏನಿದು ಅಧಿಸೂಚಿತ ಕಾಯಿಲೆ?

‘ಅಧಿಸೂಚಿತ ಕಾಯಿಲೆ’ ಪಟ್ಟಿಗೆ ಸೇರ್ಪಡೆಯಾದ ರೋಗಗಳು ವರದಿಯಾದಾಗ ಆಸ್ಪತ್ರೆಗಳು ಅಂತಹ ಪ್ರಕರಣಗಳನ್ನು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಕಡ್ಡಾಯವಾಗಿ ತಿಳಿಸಬೇಕಾಗುತ್ತದೆ. ಇದರಿಂದ ಪ್ರಕರಣಗಳ ಸಂಖ್ಯೆ ಕುರಿತು ಸರ್ಕಾರಕ್ಕೆ ಮಾಹಿತಿ ಸಿಗಲಿದೆ. ಅಂತಹ ಕಾಯಿಲೆ ಮೇಲೆ ನಿಗಾ ಹಾಗೂ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ.

ಪೋಸ್ಟ್‌ಮಾರ್ಟಂ ಯಾರಿಗೆ ಕಡ್ಡಾಯ?ಆಸ್ಪತ್ರೆಯಿಂದ ಹೊರಗೆ ಹೃದಯಾಘಾತ ಅಥವಾ ಹೃದಯ ಸ್ತಂಭನದಿಂದ ಹಠಾತ್‌ ಸಾವಿಗೀಡಾದವರಿಗೆ ಮರಣೋತ್ತರ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.

ಸರ್ಕಾರದ ತುರ್ತು ಕ್ರಮಗಳು

15 ವರ್ಷದೊಳಗಿನ ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ವರ್ಷಕ್ಕೊಮ್ಮೆ ಶಾಲಾ ಮಟ್ಟದಲ್ಲೇ ಆರೋಗ್ಯ ತಪಾಸಣೆ

- ಹೃದಯಾಘಾತ ಸೇರಿ ಅಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಶಾಲಾ ಹಂತದಲ್ಲೇ ಬೋಧಿಸಲು ಪಠ್ಯದಲ್ಲಿ ವಿಷಯ ಸೇರ್ಪಡೆ

- ಪುನೀತ್‌ ರಾಜಕುಮಾರ್‌ ಹೃದಯ ಜ್ಯೋತಿ ಯೋಜನೆ ಎಲ್ಲ ತಾಲೂಕು ಆಸ್ಪತ್ರೆಗಳಿಗೂ ವಿಸ್ತರಿಸಿ, ತಜ್ಞರ ನೆರವು ಸೌಲಭ್ಯ

- ಪ್ರತಿ ವರ್ಷ ಸರ್ಕಾರಿ ನೌಕರರು, ಹೊರಗುತ್ತಿಗೆ ನೌಕರರಿಗೆ ಹೃದಯ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗೆ ವ್ಯವಸ್ಥೆ

- ಪ್ರತಿ ವರ್ಷ ಒಂದು ಬಾರಿಯಾದರೂ ನೌಕರರಿಗೆ ಆರೋಗ್ಯ ತಪಾಸಣೆ ನಡೆಸಲು ಖಾಸಗಿ ಕಂಪನಿಗಳಿಗೂ ಸೂಚನೆ

ಲಸಿಕೆ ಇಲ್ಲದೆ ಹೋಗಿದ್ದರೆ ಹೆಚ್ಚು ಜನರು ಸಾಯ್ತಿದ್ದರು

ಕೋವಿಡ್‌ ಲಸಿಕೆಯಿಂದ ಹೃದಯಾಘಾತಗಳು ಹೆಚ್ಚಾಗಿಲ್ಲ. ಬದಲಿಗೆ ಆ ಲಸಿಕೆಯಿಂದ ಒಳ್ಳೆಯದೇ ಆಗಿದೆ. ಕೋವಿಡ್‌ ಲಸಿಕೆ ಇಲ್ಲದಿದ್ದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಾವಿಗೀಡಾಗುತ್ತಿದ್ದರು. ಆದರೆ, ಕೋವಿಡ್‌ ಬಂದ ನಂತರ ಹೃದಯಾಘಾತ ಪ್ರಕರಣ ಶೇ.5 ರಷ್ಟು ಹೆಚ್ಚಾಗಿವೆ. ಸ್ಟೆರಾಯ್ಡ್ ಸೇರಿ ಬೇರೆ ಬೇರೆ ಔಷಧ ಸೇವನೆ, ಬದಲಾದ ಜೀವನ ಶೈಲಿ, ಒತ್ತಡ, ಮಧುಮೇಹ, ಬೊಜ್ಜು ಇದಕ್ಕೆ ಕಾರಣವಾಗಿರಬಹುದು.

- ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

ಹೃದಯಾಘಾತಕ್ಕೂ ಕೋವಿಡ್‌ಗೂ ನಂಟಿಲ್ಲ

ಕೊರೋನಾ ಸೋಂಕಿಗೂ ಈಗ ಸಂಭವಿಸುತ್ತಿರುವ ಹೃದಯಾಘಾತಗಳಿಗೂ ಸಂಬಂಧವಿಲ್ಲ. ಕೋವಿಡ್‌ ಸಮಯದಲ್ಲಿ ಸೋಂಕು, ಉರಿಯೂತ ಸಮಸ್ಯೆಯಿಂದ ರಕ್ತನಾಳ ಬ್ಲಾಕ್‌ ಆಗಿ ಹೃದಯಾಘಾತ ಹಾಗೂ ಸ್ಟ್ರೋಕ್‌ ಆಗುತ್ತಿತ್ತು. ಇದೀಗ ಕೊರೋನಾ ಸಾಂಕ್ರಾಮಿಕ ಹೋಗಿ 3-4 ವರ್ಷ ಬಳಿಕವೂ ಕೋವಿಡ್‌ನಿಂದ ಹೃದಯಾಘಾತ ಆಗುತ್ತಿರುವ ಸಾಧ್ಯತೆ ಕಡಿಮೆ.

- ಡಾ.ಕೆ.ಎಸ್. ರವೀಂದ್ರನಾಥ್, ತಜ್ಞರ ಸಮಿತಿ ಮುಖ್ಯಸ್ಥ

ಹಾಸನ ಕುರಿತ ವರದಿ

10ರಂದು ಸರ್ಕಾರಕ್ಕೆಹಾಸನದಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಾಗಿರುವ ಕುರಿತು ಅಧ್ಯಯನ ನಡೆಸಲು ಡಾ.ರವೀಂದ್ರನಾಥ್‌ ಅವರ ಸಮಿತಿಗೆ ತಿಳಿಸಲಾಗಿತ್ತು. ಈ ವಿಚಾರದ ಬಗ್ಗೆ ಜು.10ರಂದು ಸಂಪೂರ್ಣ ವರದಿ ನೀಡುತ್ತಾರೆ. ಬಳಿಕ ಕಾರಣಗಳ ಬಗ್ಗೆ ಪ್ರತಿಕ್ರಿಯೆ ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

PREV
Read more Articles on