58000 ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಬಿಸಿಯೂಟ

KannadaprabhaNewsNetwork | Published : Apr 14, 2024 1:51 AM

ಸಾರಾಂಶ

ಏಪ್ರಿಲ್ ಮತ್ತು ಮೇ ತಿಂಗಳ ಬೇಸಿಗೆ ರಜಾ ಅವಧಿಯಲ್ಲೂ 41 ದಿನ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಬಿಸಿಯೂಟ ವಿತರಿಸುವ ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಜಿಪಂ ಸಿಇಒ ಸ್ವರೂಪ ಟಿ.ಕೆ. ಚಾಲನೆ ನೀಡಿದರು.

ಧಾರವಾಡ:

ಕಳೆದ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಇಡೀ ಜಿಲ್ಲೆಯಲ್ಲಿ ಬರದ ಛಾಯೆ ಇರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯೂ ಜಿಲ್ಲೆಯ ಎಲ್ಲ ತಾಲೂಕುಗಳ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬೇಸಿಗೆಯಲ್ಲೂ ಬಿಸಿಯೂಟ ಯೋಜನೆ ಜಾರಿಗೊಳಿಸಿದೆ.

ಏಪ್ರಿಲ್ ಮತ್ತು ಮೇ ತಿಂಗಳ ಬೇಸಿಗೆ ರಜಾ ಅವಧಿಯಲ್ಲೂ 41 ದಿನ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಬಿಸಿಯೂಟ ವಿತರಿಸುವ ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಜಿಪಂ ಸಿಇಒ ಸ್ವರೂಪ ಟಿ.ಕೆ. ಇಲ್ಲಿಯ ಗುಲಗಂಜಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 13ರಲ್ಲಿ ಮಕ್ಕಳಿಗೆ ಊಟ ಬಡಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಶಾಲೆಯಲ್ಲಿ ಸ್ವಚ್ಛತೆ, ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಡ್ಡಾಯವಾಗಿದೆ. ಶಾಲಾ ಮುಖ್ಯಸ್ಥರು ಜವಾಬ್ದಾರಿಯಿಂದ ಮಕ್ಕಳ ಕಾಳಜಿಯೊಂದಿಗೆ ಕಾರ್ಯಕ್ರಮದ ಅನುಷ್ಠಾನ ಮಾಡಬೇಕು. ಮ್ಯಾಪ್ ಮಾಡಿದ ಶಾಲೆಗಳಿಂದ ಒಪ್ಪಿಗೆ ಪತ್ರ ಪಡೆದು ಹಾಜರಾಗುವ ಎಲ್ಲ ಮಕ್ಕಳ ಹಾಜರಾತಿ ಪಡೆಯಬೇಕು. ವಲಸೆ ಬಂದ ಮಕ್ಕಳಿಗೂ ಊಟ ನೀಡಬೇಕು ಎಂದರು.

ಯಾವುದೇ ಶಾಲೆಯಲ್ಲಿ ಕಾರ್ಯಕ್ರಮದ ಅನುಷ್ಠಾನದಲ್ಲಿ ಲೋಪದೋಷವಾಗುವಂತಿಲ್ಲ. ಮಕ್ಕಳ ಹಾಜರಾತಿಗೆ ಅನುಸಾರವಾಗಿ ಬೇಡಿಕೆ ನೀಡಿ ಊಟ ಪಡೆಯಬೇಕು. ಒಟ್ಟು 560 ವಿತರಣಾ ಕೇಂದ್ರಗಳ ಜವಾಬ್ದಾರಿಯನ್ನು 560 ಮುಖ್ಯ ಶಿಕ್ಷಕರಿಗೆ ವಹಿಸಲಾಗಿದೆ. ಒಟ್ಟು 58,552 ಮಕ್ಕಳು ಸದುಪಯೋಗ ಪಡೆಯುತ್ತಿದ್ದು, ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ 983 ಅಡುಗೆ ಸಹಾಯಕರನ್ನು ಪುನಃ ರಜಾ ಅವಧಿಯಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲಾಗಿದೆ. ಮಕ್ಕಳ ಸಂಖ್ಯೆ 250ಕ್ಕಿಂತ ಹೆಚ್ಚಿರುವ ಕೇಂದ್ರಗಳಲ್ಲಿ 36 ಜನ ನೋಡಲ್ ಶಿಕ್ಷಕರನ್ನು ಹೆಚ್ಚುವರಿಯಾಗಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ನಿರ್ವಹಣೆ ಮಾಡಲಾಗುವುದು ಎಂದು ಡಿಡಿಪಿಐ ಎಸ್.ಎಸ್. ಕೆಳದಿಮಠ ಮಾಹಿತಿ ನೀಡಿದರು.

Share this article