ಗದಗ: ಜಿಲ್ಲೆಯಾದ್ಯಂತ ಶುಕ್ರವಾರ ಬೆಳಗ್ಗೆಯಿಂದಲೇ ಅಬ್ಬರಿಸುತ್ತಿರುವ ಮಳೆ ಸಾರ್ವಜನಿಕರಲ್ಲಿ ಹರ್ಷದ ಕಳೆಯನ್ನು ಸೃಷ್ಟಿಸಿದೆ. ಬಯಲು ಸೀಮೆಯ ಗದಗ ಜಿಲ್ಲೆಯಲ್ಲಿ ಮಲೆನಾಡ ವಾತಾವರಣ ನಿರ್ಮಾಣವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಹಾಗೂ ಅತಿಯಾದ ಶೀತಗಾಳಿಗೆ ಜನರು ಮನೆಯಿಂದ ಆಚೆ ಬರದಂತೆ ಮಾಡಿದೆ.
ಗುರುವಾರ ಮಧ್ಯರಾತ್ರಿಯಿಂದಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿದ್ದು, ಶುಕ್ರವಾರ ಬೆಳಗ್ಗೆ ಅಲ್ಪ ಬಿಡುವು ಕೊಟ್ಟಿತ್ತು. ಬಳಿಕ 11 ಗಂಟೆಯ ವೇಳೆಗೆ ರಭಸ ಪಡೆದುಕೊಂಡಿತು. ಇದರಿಂದಾಗಿ ಮಧ್ಯಾಹ್ನದ ವೇಳೆಗೆ ಜಿಲ್ಲೆಯ ಹಲವಾರು ಹಳ್ಳಗಳು ತುಂಬಿ ಹರಿಯುವಂತಾಯಿತು.ಅದರಲ್ಲಿಯೂ ಲಕ್ಷ್ಮೇಶ್ವರ ಪಟ್ಟಣ ಮತ್ತು ತಾಲೂಕಿನ ಹಲವಾರು ಗ್ರಾಮಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ರಭಸದ ಮಳೆ ಸುರಿದಿದೆ. ನಾಲ್ಕೈದು ದಿನಗಳಿಂದ ನಿರಂತರವಾಗಿ ಬರುತ್ತಿರುವ ಮಳೆಯಿಂದಾಗಿ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕು ವ್ಯಾಪ್ತಿಯಲ್ಲಿನ ಹೊಲಗಳು ನೀರಿನಲ್ಲಿ ಮುಳುಗಿವೆ.
ಗದಗ ತಾಲೂಕಿನ ಕೋಟುಮಚಗಿ, ನೀರಲಗಿ, ನಾಗರಾಳ ಬೆನಕೊಪ್ಪ ಭಾಗದಲ್ಲಿಯೂ ಉತ್ತಮ ಮಳೆಯಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರೈತರ ಜಮೀನುಗಳಲ್ಲಿನ ಸಾವಿರಾರು ಕೃಷಿ ಹೊಂಡಗಳು ಭರ್ತಿಯಾಗಿವೆ. ಇದರಿಂದಾಗಿ ಮುಂದೆ ಸಾಕಷ್ಟು ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರ ರೈತರದ್ದಾಗಿದೆ.ಮುಂಡರಗಿ ತಾಲೂಕಿನ ಡಂಬಳ ಹೋಬಳಿ ವ್ಯಾಪ್ತಿಯಲ್ಲಿಯೂ ಉತ್ತಮ ಮಳೆಯಾಗಿದೆ. ಉಳಿದಂತೆ ಜಿಲ್ಲೆಯ ನರಗುಂದ, ಗಜೇಂದ್ರಗಡ, ನರೇಗಲ್ಲ, ಶಿರಹಟ್ಟಿ, ಮುಂಡರಗಿ ತಾಲೂಕುಗಳ ವ್ಯಾಪ್ತಿಯಲ್ಲಿ ಕೆಲಕಾಲ ಮಳೆಯಾಗಿದೆ. ಮುಂಗಾರು ಪೂರ್ವದಲ್ಲಿ ಈ ಬಾರಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಈಗಾಗಲೇ ಹೆಸರು ಬೆಳೆ ಬಿತ್ತನೆ ಮಾಡಲಾಗಿದೆ. ಈಗ ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಮಾಡಿರುವ ಬೆಳೆಗಳಿಗೆ, ಮುಂದೆ ಬಿತ್ತನೆ ಮಾಡಲಿರುವ ಮುಂಗಾರು ಬೆಳೆಗಳಿಗೆ ಅನುಕೂಲವಾಗಲಿದೆ.
ತುಂಬಿ ಹರಿದ ಹಳ್ಳಗಳು, ಹೊಲಗಳ ಬದು ಒಡೆದು ಅಪಾರ ಹಾನಿಮುಳಗುಂದ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆ ಅಬ್ಬರಿಸುತ್ತಿದ್ದು, ಮಳೆಗೆ ಹಳ್ಳ-ಕೊಳ್ಳಗಳು ತುಂಬಿ, ಹೊಲಗಳ ಬದು ಒಡೆದು ಅಪಾರ ಹಾನಿಯಾಗಿದೆ.
ಹಳ್ಳಗಳು ತುಂಬಿ ಹರಿಯುತ್ತಿದ್ದು, ಮಳೆ ನೀರು ಹೊಲಗಳಿಗೆ ನುಗ್ಗಿ ಈಗಾಗಲೇ ಬಿತ್ತನೆ ಮಾಡಿದ್ದ ಹೊಲಗಳು ಜಲಾವೃತವಾಗಿವೆ. ಹೊಲದ ಬದುಗಳು ಬಹಳಷ್ಟು ಕಡೆ ಒಡೆದು ಹಾನಿಯಾಗಿವೆ. ನೀರು ರಭಸವಾಗಿ ಹರಿಯುತ್ತಿರುವುದರಿಂದ ಅಲ್ಲಲ್ಲಿ ರಸ್ತೆಗಳು ಕೊಚ್ಚಿ ಹೋಗಿ ಹಾನಿಯಾಗಿವೆ.ಗ್ರಾಮೀಣ ಭಾಗದಲ್ಲಿ ಕಳೆದೊಂದು ವಾರದಿಂದ ನಿರಂತರ ರಭಸವಾಗಿ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಬಿತ್ತನೆ ಚಟುವಟಿಕೆ ಬರದಿಂದ ಸಾಗಿದ್ದು, ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿವೆ. ಮಳೆ ಸ್ವಲ್ಪ ಬಿಡುವ ನೀಡಿದರೆ ಬಿತ್ತನೆಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ರೈತರು.
ಗ್ರಾಮೀಣದ ಭಾಗದ ಕುರ್ತಕೋಟಿ, ಹುಲಕೋಟಿ, ಹೊಸಳ್ಳಿ, ಬಸಾಪುರ, ಚಿಂಚಲಿ, ಕಲ್ಲೂರ, ನೀಲಗುಂದ, ಹರ್ತಿ, ಕಣವಿ, ಹೊಸೂರು, ಶಿರುಂಜ, ಯಲಿಶಿರುಂಜ, ಸೊರಟೂರ, ನಾಗಾವಿ, ಬೆಳಧಡಿ ಸೇರಿ ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆ ಭರದಿಂದ ಸಾಗಿವೆ.ಶುಕ್ರವಾರ ಸುರಿದ ಮಳೆಗೆ ಹಳ್ಳ ತುಂಬಿ ರಸ್ತೆ ಮೇಲೆ ಮಳೆ ನೀರು ರಭಸವಾಗಿ ಹರೆಯುತ್ತಿರುವುದರಿಂದ ಮುಳಗುಂದ-ಕುರ್ತಕೋಟಿ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕೆಲಕಾಲ ಕಡಿತಗೊಂಡು ವಾಹನ ಸವಾರರು, ಕೃಷಿ ಕೆಲಸಕ್ಕೆ ತೆರಳಿದ ರೈತರು ಪರದಾಡಿದರು.