ಭಟ್ಕಳ: ತಾಲೂಕಿನಲ್ಲಿ ಸೋಮವಾರ ಮಧ್ಯಾಹ್ನದವರೆಗೆ ಸುರಿದ ಭಾರಿ ಮಳೆಗೆ ಹಲವು ಮನೆಗಳಿಗೆ ಹಾನಿಯಾದರೆ, ತಗ್ಗು ಪ್ರದೇಶ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.
ತಾಲೂಕಿನಲ್ಲಿ ಸೋಮವಾರ ಬೆಳಗ್ಗೆಯವರೆಗೆ ದಾಖಲೆಯ 209 ಮಿಮೀ ಮಳೆ ಸುರಿದಿದೆ. ಇಲ್ಲಿಯ ತನಕ 2017.2 ಮಿಮೀ ಮಳೆಯಾಗಿದೆ. ಭಾನುವಾರ ಬೆಳಗ್ಗೆಯಿಂದ ಸೋಮವಾರ ಮಧ್ಯಾಹ್ನದವರೆಗೂ ಎಡಬಿಡದೇ ಭಾರೀ ಮಳೆ ಸುರಿದಿದ್ದು, ಎಲ್ಲ ಕಡೆ ನೀರಾಗಿದೆ. ಭಾರೀ ಮಳೆಗೆ ಶಿರಾಲಿ ಗ್ರಾಮದ ಹುಲ್ಲುಕ್ಕಿಯಲ್ಲಿ ಜಾನಕಿ ಮಂಜು ನಾಯ್ಕಅವರ ಕಚ್ಚಾ ಮನೆ ಭಾಗಶಃ ಬಿದ್ದು ಹಾನಿಯಾಗಿದೆ.ಹೆಬಳೆ ಗ್ರಾಮದ ಮಾದೇವಿ ಮಂಜಪ್ಪ ನಾಯ್ಕ ಅವರ ಮನೆ ಹಂಚು ಹಾರಿ ಹೋಗಿ ಹಾನಿಯಾಗಿದೆ. ಕಾಯ್ಕಿಣು ನಾರಾಯಣ ದುರ್ಗಪ್ಪ ನಾಯ್ಕ ಹೆರಾದಿ ಗ್ರಾಮ ಕಾಯ್ಕಿಣಿ ಇವರ ಮನೆಯ ಮೇಲೆ ತೆಂಗಿನ ಮರ ಮುರಿದು ಬಿದ್ದಿದೆ. ಶಿರಾಲಿ1 ಗ್ರಾಮದ ಅನಂತ ಹೊನ್ನಪ್ಪ ನಾಯ್ಕ ಅವರ ಕಚ್ಚಾ ಮನೆಯ ಮಣ್ಣಿನ ಗೋಡೆ ಕುಸಿದು ಬಿದ್ದು ಭಾಗಶಃ ಹಾನಿಯಾಗಿದೆ.
ಮಳೆಗೆ ಬೈಲೂರು ಗ್ರಾಮದ ಲಕ್ಷ್ಮಣ ಈರಪ್ಪ ಹರಿಕಾಂತ ಅವರ ಮನೆಗೆ ನೀರು ನುಗ್ಗಿ ದವಸ ಧಾನ್ಯಗಳು ಬಟ್ಟೆ ಪಾತ್ರೆಗಳು ಹಾನಿಯಾಗಿದೆ. ಕೊಪ್ಪ ಗಾರ್ಮದ ಅತ್ತಿಬಾರ ನಿವಾಸಿ ಸುಕ್ರ ಗೊಂಡ ಅವರ ವಾಸ್ತವ್ಯದ ಮನೆಯ ಮಣ್ಣಿನ ಗೋಡೆ ಕುಸಿದು ಭಾಗಶಃ ಹಾನಿಯಾದರೆ, ಮಾವಳ್ಳಿ ಗ್ರಾಮದ ಹಿರೋದೋಮಿ ನಿವಾಸಿ ಶಫಿಯಾ ಅಬು ಮೊಹಮ್ಮದ್ ಹಲಗೇರಿ ಅವರ ಮನೆಯು ಮಣ್ಣಿನ ಗೋಡೆ ಕುಸಿದು ಬಿದ್ದಿದ್ದು ಭಾಗಶಃ ಬಿದ್ದಿದೆ. ಬೆಂಗ್ರೆ ಕೋಕ್ತಿಯ ಗಣಪತಿ ತಿಮ್ಮಯ್ಯ ದೇವಾಡಿಗ ಮನೆಯ ಗೋಡೆ ಕುಸಿದಿದೆ.ಮುಂಡಲ್ಳಿ ನಿವಾಸಿ ವಿದ್ಯಾಧರ ಗಣಪಯ್ಯ ಆಚಾರಿ ಅವರ ಮನೆಯ ಗೋಡೆ ಭಾಗಶಃ ಬಿದ್ದಿದೆ. ಮನೆ ಹಾನಿ ಪ್ರದೇಶಕ್ಕೆ ಕಂದಾಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ವಿವಿಧ ಕಡೆಗಳಲ್ಲಿ 15 ವಿದ್ಯುತ್ ಕಂಬಗಳು ಬಿದ್ದಿದ್ದು, ಹೆಸ್ಕಾಂನಿಂದ ಮುರಿದ ಕಂಬಗಳನ್ನು ಸರಿಪಡಿಸಲಾಗಿದೆ. ತಾಲೂಕಿನ ಹದ್ಲೂರಿನ ಗೂಡನಕಟ್ಟೆಯಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ನಿರ್ಮಿಸಲಾದ ಅವೈಜ್ಞಾನಿಕ ಬಾಂದಾರದಿಂದ ವೆಂಕಟ್ರಮಣ ಹೆಬ್ಬಾರ ಅವರ ತೋಟಕ್ಕೆ ನೀರು ನುಗ್ಗಿದೆ.
ಬಾಂದಾರ ಕಿಂಡಿಗಳಲ್ಲಿ ಕಸಕಡ್ಡಿ, ಮರದ ಟೊಂಗೆ ಮುಂತಾದವುಗಳು ಸಿಲುಕಿ ಇವರ ತೋಟಕ್ಕೆ ನೀರು ನುಗ್ಗಿ ಮಣ್ಣು ಕೊಚ್ಚಿಕೊಂಡು ಹೋಗಿದೆ. ತಗ್ಗು ಪ್ರದೇಶದ ಗದ್ದೆಗಳು ಜಲಾವೃತಗೊಂಡಿದೆ. ಕೋಕ್ತಿ ಕೆರೆ ತುಂಬಿ ತುಳುಕುತ್ತಿದ್ದು, ನೀರು ಸರಿಯಾಗಿ ಹೋಗಲು ಸ್ಥಳವಕಾಶ ಇಲ್ಲದೇ ಕೋಕ್ತಿ ದೇವಸ್ಥಾನ, ಸನಿಹದ ಗದ್ದೆಗಳಿಗೆ ನೀರು ನುಗ್ಗಿದೆ. ಕೋಕ್ತಿ ಕೆರೆಯ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಬೇಕೆಂದು ಅಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.ಭಾರೀ ಮಳೆಗೆ ಗ್ರಾಮಾಂತರ ಭಾಗದ ರಸ್ತೆ ಹಾಳಾಗಿದ್ದರೆ, ಅಡಕೆ, ತೆಂಗಿನಮರಗಳು ನೆಲಕ್ಕುರುಳಿದೆ. ಅಳ್ವೆಕೋಡಿ ರಸ್ತೆಯಲ್ಲಿ ಗಟಾರದ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆ ನೀರು ರಸ್ತೆಯ ಮೇಲೆ ನಿಂತಿದ್ದು, ಸಾರ್ವಜನಿಕರು ನೀರಿನಲ್ಲೇ ಸಂಚರಿಸುವಂತಾಗಿದೆ. ಸೋಮವಾರ ಮಧ್ಯಾಹ್ನದ ನಂತರ ಮಳೆ ಕಡಿಮೆಯಾಗಿದ್ದರಿಂದ ಜನರು ನಿಟ್ಟುಸಿರು ಬಿಡುವಂತಾಯಿತು.