ಶಿವಕುಮಾರ ಕುಷ್ಟಗಿ ಗದಗ
ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವರುಣ ಅಬ್ಬರಿಸುತ್ತಿದ್ದಾನೆ, ಹಲವಾರು ಜೀವಹಾನಿಗಳು ಸಂಭವಿಸಿವೆ, ಆದರೆ ಗದಗ ಜಿಲ್ಲೆಯಲ್ಲಿ ಮುಂಗಾರು ಮಧ್ಯಭಾಗಕ್ಕೆ ಬಂದಿದ್ದರೂ ಜಿಲ್ಲೆಯ ಕೆರೆಗಳು ಇದುವರೆಗೂ ಭರ್ತಿಯಾಗುವಷ್ಟು ಮಳೆಯೇ ಆಗಿಲ್ಲ. ಕೇವಲ ತುಂತುರು ಮಳೆಗೆ ವರುಣದೇವ ಸೀಮಿತವಾದ ಹಿನ್ನೆಲೆಯಲ್ಲಿ, ಕೆರೆಗಳು, ರೈತರ ಜಮೀನುಗಳಲ್ಲಿರುವ ಲಕ್ಷಾಂತರ ಕೃಷಿ ಹೊಂಡಗಳಲ್ಲಿ ಕೂಡಾ ಹನಿ ನೀರಿಲ್ಲದಂತಾ ಸ್ಥಿತಿ ನಿರ್ಮಾಣವಾಗಿದೆ.ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ತೀವ್ರ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಆಗಾಗ್ಗೆ ತುಂತುರು ಮಳೆಯಾಗುತ್ತಿದ್ದೆ. ಇದರಿಂದ ಯಾವುದೇ ಕೆರೆಗಳಿಗೂ ಹನಿ ಹರಿದು ಬಂದಿಲ್ಲ. ಇದರೊಟ್ಟಿಗೆ ವಿಪರೀತ ಶೀತಗಾಳಿ ಬೀಸುತ್ತಿದೆ. ಇದು ರೈತರ ಬೆಳೆಗಳಿಗೂ ಯೋಗ್ಯವಲ್ಲ, ರೈತಾಪಿ ವರ್ಗಕ್ಕೂ ಯೋಗ್ಯವಲ್ಲ. ಜಿಟಿ ಜಿಟಿ ಮಳೆಯಿಂದಾಗಿ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ ಸಾರ್ವಜನಿಕರು ಶೀತ, ಕೆಮ್ಮು ಇನ್ನಿತರ ಹವಾಮಾನ ಬದಲಾವಣೆಯಿಂದಾಗಿ ಕಾಯಿಲೆಗೆ ತುತ್ತಾಗಿ ಬಳಲುತ್ತಿದ್ದಾರೆ.
211 ಕೆರೆಗಳಿವೆ: ಜಿಲ್ಲೆಯಲ್ಲಿ ಒಟ್ಟು 211 ಕೆರೆಗಳಿವೆ 22 ಕುಡಿಯಲು ಮತ್ತು 190 ಸಾಮಾನ್ಯ ಬಳಕೆಗೆ ಯೋಗ್ಯವಾದ ಕೆರೆಗಳಿವೆ. ಆದರೆ ಜಿಲ್ಲೆಯಲ್ಲಿ ನಿರೀಕ್ಷೆಯಷ್ಟು ಮಳೆಯಾಗದ ಕಾರಣ ಯಾವ ಕೆರೆಗಳೂ ಇದುವರೆಗೂ ಭರ್ತಿಯಾಗಿಲ್ಲ. ಪ್ರತಿ ರೈತರ ಮಿತ್ರ ಎಂದೇ ಗುರುತಿಸಿಕೊಳ್ಳುವ ಲಕ್ಷಾಂತರ ಕೃಷಿ ಹೊಂಡಗಳಲ್ಲಿಯೂ ನೀರಿಲ್ಲ ಹಾಗಾಗಿ ರೈತರು ಮಳೆ ಕೊರತೆ ಉಂಟಾದ ವೇಳೆಯಲ್ಲಿ ಕೃಷಿ ಹೊಂಡದಲ್ಲಿ ನೀರನ್ನು ಬಳಕೆ ಮಾಡಿಕೊಳ್ಳಲು ಆಗದಂತಾ ರೀತಿಯಲ್ಲಿ ಮಳೆಯಾಗುತ್ತಿದ್ದು. ಇದು ಜಿಲ್ಲೆಯ ರೈತಾಪಿ ವರ್ಗದಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ.ನದಿಯಿಂದಾದರೂ ತುಂಬಿಸಲಿ:
ಮಲೆನಾಡು ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ನೀರು ತುಂಗಭದ್ರಾ ನದಿಗೆ ಹರಿದು ಬರುತ್ತಿದ್ದು, ತುಂಗಭದ್ರಾ ಎಡದಂಡೆ ಕಾಲುವೆ ಮೂಲಕ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ, ಡಂಬಳ, ಶಿರೋಳ, ತಾಮ್ರಗುಂಡಿ, ನಾಗರಳ್ಳಿ, ಜಂತ್ಲಿ ಶಿರೂರು ಸೇರಿದಂತೆ 15 ಕೆರೆಗಳು, 20 ಕ್ಕೂ ಹೆಚ್ಚು ಬೃಹತ್ ಚೆಕ್ ಡ್ಯಾಂ ಗದಗ ನಗರದ ಭೀಷ್ಮ ಕೆರೆ, ತಾಲೂಕಿನ ಲಕ್ಕುಂಡಿ, ಸಂಭಾಪೂರ, ಕಳಸಾಪುರ, ಕಣಗಿನಹಾಳ ಸೇರಿದಂತೆ 8 ಗ್ರಾಮದ ಕೆರೆಗಳ ಕೆರೆಗಳಿಗೆ ನೀರು ತುಂಬಿಸಬಹುದಾಗಿದೆ. ಗಮನ ನೀಡಲಿ: ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ ಮುಂಡರಗಿ ತಾಲೂಕಿನಲ್ಲಿ 11, ಗಜೇಂದ್ರಗಡ 9, ಶಿರಹಟ್ಟಿ 5, ಗದಗ 4 ಹಾಗೂ ಲಕ್ಷ್ಮೇಶ್ವರ ತಾಲೂಕಿನ 3 ಸೇರಿ ಒಟ್ಟು 32 ಕೆರೆಗಳಿವೆ. ಈ ಎಲ್ಲಾ ಕೆರೆಗಳಿಗೂ ಹಮ್ಮಗಿ ಬ್ಯಾರೇಜ್ ನಿಂದ ನಿರ್ಮಿಸಲಾಗಿರುವ ತುಂಗಭದ್ರಾ ಎಡದಂಡೆ ನಾಲೆಯ ಮೂಲಕ ನೀರು ಹರಿಸಿ ಭರ್ತಿ ಮಾಡಬಹುದು, ಆದರೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ಮಾಡದೇ ತಕ್ಷಣವೇ ಗಮನ ನೀಡಬೇಕಿದೆ.ಅನುಕೂಲ: ಜಿಲ್ಲೆಯಲ್ಲಿರುವ 211 ಕೆರೆಗಳಲ್ಲಿ ಹಲವಾರು ವರ್ಷಗಳಿಂದ ನೀರು ಸಂಗ್ರಹವಾಗಿ ಹೂಳು ತುಂಬಿವೆ, ಕಳೆದ ಸಾಲಿನಲ್ಲಿ ಸಂಪೂರ್ಣ ಬರಗಾಲದ ಹಿನ್ನೆಲೆಯಲ್ಲಿ ಕೆರೆಗಳು ಭರ್ತಿಯಾಗಿಲ್ಲ. ಪ್ರಸಕ್ತ ಸಾಲಿನಲ್ಲಿಯೂ ಕೇವಲ ಜಿಟಿ ಜಿಟಿ ಮಳೆಯಿಂದಾಗಿ ಬಿತ್ತನೆಗೆ ಅನುಕೂಲವಾಗಿದೆ. ಆದರೆ ಯಾವುದೇ ಕೆರೆಗಳು ಭರ್ತಿಯಾಗಿಲ್ಲ. ಅಮೃತ ಸರೋವರ ಯೋಜನೆಯಡಿ ಕೆಲ ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇನ್ನುಳಿದ ಎಲ್ಲಾ ಕೆರೆಗಳನ್ನು ಹೂಳು ತೆಗೆಯಬೇಕು. ತುಂಗಭದ್ರಾ ನದಿ ಪಾತ್ರದಲ್ಲಿ ಮಳೆಗಾಲದಲ್ಲಿ ವ್ಯಾಪಕ ಪ್ರಮಾಣದ ನೀರು ಲಭ್ಯವಿರುವಾಗಲೇ ಎಲ್ಲಾ ಕೆರೆಗಳನ್ನು ಭರ್ತಿ ಮಾಡಿಕೊಂಡಲ್ಲಿ ಅಂತರ್ಜಲ ಹೆಚ್ಚಳಕ್ಕೂ ಅನುಕೂಲವಾಗಲಿದೆ.
ಕೊಳವೆಬಾವಿ ಮೊರೆ ಹೋದ ರೈತರು: ಜಿಲ್ಲೆಯ ಮುಂಗಾರು ಬೆಳೆಗಳು ಸೋಂಪಾಗಿ ಬೆಳದ ಸ್ಥಿತಿಯಲ್ಲಿದ್ದು, ಸಧ್ಯಕ್ಕೆ ಉತ್ತಮ ಮಳೆ ಬೇಕಿದೆ. ಕೃಷಿ ಹೊಂಡದ ನೀರು ಬಳಕೆ ಮಾಡಿಕೊಳ್ಳೋಣ ಎಂದರೆ ಅವುಗಳು ಭರ್ತಿಯಾಗಿಲ್ಲ. ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ರೈತರು ಸಹಜವಾಗಿಯೇ ಕೊಳವೆಬಾವಿ ನೀರನ್ನು ಕಾರಂಜಿ ಮೂಲಕ ಬೆಳೆಗಳಿಗೆ ಹಾಯಿಸುವ ಮೂಲಕ, ಬೆಳೆಗಳಿಗೆ ಬೇಕಿರುವ ತೇವಾಂಶ ಕೊಡುವಂತಾ ಸ್ಥಿತಿ ನಿರ್ಮಾಣವಾಗಿದೆ.ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 32 ಕೆರೆಗಳಿದ್ದು ಸಧ್ಯ ಮುಂಡರಗಿ ತಾಲೂಕಿನ ಡಂಬಳ, ಜಂತ್ಲಿ ಶಿರೂರ, ಪೇಠಾಲೂರ ಮುಂತಾದ ಕೆರೆಗಳಿಗೆ ತುಂಗಭದ್ರಾ ಏತ ನೀರಾವರಿ ಯೋಜನೆ ವತಿಯಿಂದ ನೀರು ಭರ್ತಿ ಮಾಡಲಾಗುತ್ತಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಮುರಳಿಧರ ಪಾಟೀಲ ತಿಳಿಸಿದ್ದಾರೆ.
ಉತ್ತಮವಾದ ರೀತಿಯಲ್ಲಿ ಮಳೆಯಾಗಬೇಕು, ಆ ಮೇಲೆ ಚಳಾ.. ಚಳಾ ಬಿಸಿಲು ಬೀಳಬೇಕು ಅಂದಾಗ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. ಈರುಳ್ಳಿ ಬಿತ್ತನೆಗಾಗಿ ಸ್ಪಿಂಕ್ಲರ್ ಮೂಲಕ ನೀರು ಹಾಯಿಸಿ ಹೊಲ ಸಿದ್ಧಗೊಳಿಸುತ್ತಿದ್ದೇವೆ. ಹೆಸರು ಬೆಳೆಗೂ ನೀರು ಹಾಯಿಸುತ್ತಿದ್ದೇವೆ ಸವಡಿ ಗ್ರಾಮದ ರೈತ ರಾಮನಗೌಡ ಅರಹುಣಸಿ ತಿಳಿಸಿದ್ದಾರೆ.