ಪೈರು ಕಟಾವಿಗೆ ಸಿದ್ಧಗೊಂಡಿದ್ದರೂ ಮಳೆಯ ಕಾರಣದಿಂದ ಕಟಾವು ಮುಂದೂಡಿಕೆಪ್ರಸಾದ್ ನಗರೆ
ಕನ್ನಡಪ್ರಭ ವಾರ್ತೆ ಹೊನ್ನಾವರಕೃಷಿ ಎಂದರೆ ಮೂಗು ಮುರಿಯುವವರ ಸಂಖ್ಯೆಯೇ ಅಧಿಕ. ಅದರಲ್ಲೂ ಈಗಿನ ಯುವಜನತೆ ಕೃಷಿಯಿಂದ ದೂರವಾಗಿ ಕೇವಲ ಕಂಪ್ಯೂಟರ್, ಮೊಬೈಲ್ ಎನ್ನುತ್ತಾ ಕಾಲ ಕಳೆಯುವುದೇ ಹೆಚ್ಚು. ಇಂತಹ ಕಾಲ ಘಟ್ಟದಲ್ಲಿ ಪ್ರಾಕೃತಿಕ ಅಸಮತೋಲನ ಉಂಟಾದರೆ ಕೃಷಿ ನಂಬಿ ಕೆಲಸ ಮಾಡುವವರ ಪಾಡು ದೇವರಿಗೆ ಪ್ರೀತಿ. ಅದರಂತೆ ಇದೀಗ ತಾಲೂಕಿನಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಈಶಾನ್ಯ ಮಾರುತದ ಮಳೆ ಬತ್ತ ಬೆಳೆದವರ ಪರಿಸ್ಥಿತಿ ಹದಗೆಡಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಬತ್ತ ಕೃಷಿ ನಶಿಸುತ್ತಿದೆ. ಆದರೂ ಬತ್ತ ಕೃಷಿಯನ್ನೇ ನೆಚ್ಚಿಕೊಂಡಿರುವ ನೂರಾರು ಕುಟುಂಬಗಳಿವೆ. ದೀಪಾವಳಿ ಹಬ್ಬಮುಗಿದು ಇದೀಗ ಬತ್ತದ ಬೇಸಾಯದ ಕಟಾವಿನ ಸಮಯವಾಗಿದ್ದು, ಇದಕ್ಕೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ಆದರೆ ನಿರಂತರ ಮಳೆ ಸುರಿಯುತ್ತಿರುವ ಕಾರಣ ಕಟಾವು, ತೆನೆ ಬೇರ್ಪಡಿಸುವಿಕೆ, ಬತ್ತ ಸಂಗ್ರಹ ಮತ್ತು ಬತ್ತ ಒಣಗಿಸುವಿಕೆಗೆ ಸಮಸ್ಯೆಯಾಗಿ ಕಾಡುತ್ತಿದೆ. ಅನೇಕ ಗದ್ದೆಗಳಲ್ಲಿ ಪೈರು ಕಟಾವಿಗೆ ಸಿದ್ಧಗೊಂಡಿದ್ದರೂ ಮಳೆಯ ಕಾರಣದಿಂದ ರೈತರು ಕಟಾವು ಮುಂದೂಡುತ್ತಿದ್ದಾರೆ. ಹೀಗೆ ಮುಂದುವರಿದರೆ ಪೈರುಗಳು ಬಾಗಿ ಗದ್ದೆಯಲ್ಲೇ ಮಕಾಡೆ ಮಲಗುವ ಸಾಧ್ಯತೆ ಹೆಚ್ಚಿದೆ.
ತಾಲೂಕಿನ ಮಂಕಿ ಮತ್ತು ಹೊನ್ನಾವರ ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು ಎಂಟುನೂರು ಹೆಕ್ಟೇರ್‌ನಷ್ಟು ಬತ್ತದ ನಾಟಿ ಮಾಡಲಾಗಿದ್ದು, ಅದು ಕಟಾವಿಗೆ ಸಿದ್ದವಿದೆ. ಮಾವಿನಕುರ್ವ ಹೋಬಳಿಯಲ್ಲಿ ಅಂದಾಜು ಇನ್ನೂರು ಹೆಕ್ಟೇರ್ ನಾಟಿ ಮಾಡಲಾಗಿದ್ದು, ಇನ್ನೂ ಕಟಾವಿಗೆ ಬಂದಿಲ್ಲ. ನಾಟಿ ಮಾಡಿದ್ದು ವಿಳಂಬ ಆಗಿರುವುದರಿಂದ ಮತ್ತೆ ಹದಿನೈದು ದಿನ ಬಿಟ್ಟು ಕಟಾವಿಗೆ ಬರಲಿದೆ.ಕೀಟಗಳಿಂದಲೂ ಬೆಳೆನಾಶ:
ಬತ್ತ ಕೃಷಿ ನಾಟಿ ಮಾಡಿ ಬೆಳೆಯುವ ಹಂತದಲ್ಲಿ ಒಂದು ಕಡೆ ಕ್ರಿಮಿಕೀಟಗಳ ಸಮಸ್ಯೆಯಾದರೆ, ಇನ್ನೊಂದು ಕಡೆ ಹಕ್ಕಿಗಳು, ನವಿಲು, ಹಂದಿ ಮುಂತಾದ ಪ್ರಾಣಿಪಕ್ಷಿಗಳ ಸಮಸ್ಯೆ ರೈತರನ್ನು ಹೈರಾಣಾಗಿಸುತ್ತಿದೆ. ಇದೆಲ್ಲ ಹಂತವನ್ನು ಸವಾಲಿನ ರೀತಿಯಲ್ಲಿ ಸ್ವೀಕರಿಸಿ ಇನ್ನೇನು ಬತ್ತದ ಪೈರು ಕಟಾವಿನ ಹಂತಕ್ಕೆ ಬಂದು ನಿಂತಿರುವಾಗ ಮಳೆ ಸಮಸ್ಯೆ ತಂದೊಡ್ಡಿದೆ.ಬತ್ತದ ಕೃಷಿಗೆ ರೈತರ ಹಿಂದೇಟು:
ಇನ್ನು ಆಧುನಿಕ ಉಪಕರಣಗಳು ಬಂದರೂ ಸಹ ರೈತರು ಬತ್ತವನ್ನು ಬೆಳೆಸಲು ಮನಸ್ಸು ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಸ್ಥಿರವಾದ ಬೆಲೆ ಇರುವುದಿಲ್ಲ. ಅಗತ್ಯವಾಗಿ ಬೇಕಾದಾಗ ಕೆಲಸ ನಿರ್ವಹಿಸಲು ಕೂಲಿಗಳ ಸಮಸ್ಯೆ ಹಾಗೂ ಕೂಲಿಯವರ ದಿನಗೂಲಿ ಸಹ ಏರಿಕೆ ಇರುವುದರಿಂದ ಬತ್ತ ಬೆಳೆಯಲು ಪೂರೈಸುವುದಿಲ್ಲ ಎಂಬ ಹಂತಕ್ಕೆ ಬೆಳೆಗಾರರು ಬಂದಿದ್ದಾರೆ.ತಂತ್ರಜ್ಞಾನ ಎಷ್ಟೆ ಮುಂದುವರೆದರೂ ಸಹ ಅನ್ನ ಊಟ ಮಾಡುವುದು ಬದಲಾಗಿಲ್ಲ. ಬತ್ತವನ್ನು ಬೆಳೆಯುವವರ ಸಂಖ್ಯೆ ಇಳಿಮುಖವಾಗುತ್ತಾ ಸಾಗಿದರೆ ಅಕ್ಕಿಯನ್ನು ಮಾಡುವುದು ಸಹ ದುಸ್ತರವಾಗುತ್ತದೆ. ಇದನ್ನೆ ನಂಬಿಕೊಂಡಿರುವ ಗಿರಣಿಗಳು, ವ್ಯಾಪಾರಿಗಳು ತಮ್ಮ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಇದು ಆರ್ಥಿಕ ಕ್ಷೇತ್ರದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ಪ್ರಾಕೃತಿಕ ಅನಾನುಕೂಲತೆಗಳು ಉಂಟಾದಲ್ಲಿ ಕೃಷಿ ಮಾಡುವ ಮನಸ್ಸನ್ನು ರೈತರು ಕಳೆದುಕೊಳ್ಳಲಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ರೈತನ ಬಾಳು ಹಸನಾಗಲಿ.ಈ ಬಾರಿ ನಾವು ಉತ್ತಮ ಫಸಲು ಬರಬಹುದು ಎಂಬ ಆಸೆಯೊಂದಿಗೆ ಬತ್ತ ಬೆಳೆದಿದ್ದೆವು. ಆದರೆ ನಾವು ಅಂದುಕೊಂಡಂತೆ ಆಗಲಿಲ್ಲ. ಮಳೆಯ ಪ್ರಮಾಣ ತೀವ್ರವಾಗಿ ಕಟಾವಿಗೆ ಬಂದ ಬೆಳೆಯನ್ನು ಕೊಯ್ಲು ಮಾಡುವುದು ಯಾವಾಗ. ಅದನ್ನು ಸಂಗ್ರಹಿಸಿಟ್ಟುಕೊಳ್ಳುವುದು ಹೇಗೆ ಎಂಬೆಲ್ಲಾ ಸಮಸ್ಯೆ ನಮ್ಮನ್ನು ಕಾಡುತ್ತಿವೆ ಎನ್ನುತ್ತಾರೆ ಬತ್ತ ಬೆಳೆಗಾರ ರುಕ್ಮಯ್ಯ ಮೇಸ್ತ.