ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆಯಲ್ಲಿರುವ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು ಇದರ ಯಶಸ್ವಿಗೆ ಪೋಷಕರ ಸಹಕಾರ ಅಗತ್ಯವಾಗಿ ಬೇಕಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಅವರು ಹೇಳಿದರು.ಸ್ಥಳೀಯ ಕೆಇಬಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನವ ಹಕ್ಕುಗಳ ಸಂಘಟನೆಯ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಬಾರದಂತೆ ಮುಂಜಾಗೃತಾ ಕ್ರಮವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುತ್ತಿದ್ದು, ಇಂದು ಬೂತ್‌ಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಮಾ.4 ರಿಂದ ಮಾ.6ರವರೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯಿಂದ ಮನೆ ಮನೆಗೆ ತೆರಳಿ ಲಸಿಕೆಯನ್ನು ಹಾಕಲಾಗುತ್ತದೆ ಎಂದು ತಿಳಿಸಿದರು.ನಗರ ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಮಾತನಾಡಿ, ಪೋಲಿಯೋ ಕಾಯಿಲೆಯು ಮುಂಜಾಗೃತಾ ಕ್ರಮಗಳನ್ನು ವಹಿಸಿಕೊಳ್ಳುವಂತಹ ಕಾಯಿಲೆಯಾಗಿದ್ದು, ಪೋಲಿಯೋ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಮಾತನಾಡಿ, ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ ಪಲ್ಸ್ ಪೋಲಿಯೋ ಹನಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹನಿಹಾಕಿಸಬೇಕು ಎಂದು ಮನವಿ ಮಾಡಿದರು.ಲಸಿಕೆ ಅಭಿಯಾನದಡಿ ಜಿಲ್ಲೆಯಲ್ಲಿ 1 ರಿಂದ 5 ವರ್ಷದ 2.50 ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಿಸುವ ಗುರಿ ಹೊಂದಿದ್ದು, ಮೊದಲ ದಿನ ವಿವಿಧ ಸ್ಥಳಗಳಲ್ಲಿ ಲಸಿಕೆ ಹಾಕಿದ್ದು, ಮುಂದಿನ ದಿನಗಳಲ್ಲಿ ಮನೆ ಮನೆಗೆ ಹೋಗಿ ಲಸಿಕೆ ಹಾಕಿಸುವ ಕಾರ್ಯವನ್ನು ಸಹ ಮಾಡಲಾಗುವುದು ಎಂದರು.
ಇದೇ ವೇಳೆ 5ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಲಾಯಿತು.ಈ ಸಂದರ್ಭದಲ್ಲಿ ಜಿಪಂ ಸಿಇಒ ರಾಹುಲ್ ತುಕಾರಾಮ ಪಾಂಡ್ಚೆ, ತಹಸೀಲ್ದಾರ್ ಸುರೇಶ ವರ್ಮಾ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ನಂದಿತಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಕುಮಾರ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಶಾಕೀರ ಮೊಯಿನುದ್ದಿನ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಜ್ವಲ್ ಕುಮಾರ, ಅಕ್ಷರ ದಾಸೋಹ ಅಧಿಕಾರಿ ಈರಣ್ಣ, ಚಂದ್ರಕಾಂತ, ಮಹೇಶ, ಮಂಜುನಾಥ, ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.