ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಹೇಮಾವತಿ ಜಲಾಶಯದ ಮುಖ್ಯ ನಾಲೆ ಆಧುನೀಕರಣ ಕಾಮಗಾರಿ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ಗಮನಕ್ಕೆ ತಾರದೆ ಪರಿಶೀಲನೆಗೆ ಬಂದಿದ್ದ ನಾಗಮೋಹನ್ ದಾಸ್ ವಿಚಾರಣಾ ಆಯೋಗದ ತಂಡಕ್ಕೆ ದೂರುದಾರರು ತಡೆಯೊಡ್ಡಿ ಪ್ರಶ್ನಿಸಿದ ಘಟನೆ ನಡೆದಿದೆ.
ನಾಲಾ ಆಧುನೀಕರಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಲೈನಿಂಗ್‌ನ ಎರಡೂ ಬದಿಗಳಲ್ಲೂ ಕಬ್ಬಿಣದ ಕಾಂಕ್ರೀಟ್ ಮಾಡಿಲ್ಲ. ಅಲ್ಲಲ್ಲಿ ಸಿಮೆಂಟ್ ಲೈನಿಂಗ್ ಬಿದ್ದು ಹೋಗುತ್ತಿದೆ. ನಾಲೆ ಏರಿ ಮೇಲೆ ರಕ್ಷಣಾ ತಡೆ ಕಲ್ಲುಗಳ ಅಳವಡಿಸಿಲ್ಲ. ಸರ್ಕಾರಿ ದಾಖಲೆಯಲ್ಲಿಯೇ ಇಲ್ಲದ ಹಳ್ಳಿಯೊಂದರ ಹೆಸರಿನಲ್ಲಿ ನಾಲಾ ಕಾಮಗಾರಿಗೆ ಅಗತ್ಯವಾದ ಮಣ್ಣು ತೆಗೆದಿರುವುದಾಗಿ ದಾಖಲಿಸಲಾಗಿದೆ.
ಟಿ.ನರಸೀಪುರದ ಬಳಿ ಕಾವೇರಿ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗೆ ನಿಷೇಧವಿದ್ದರೂ ಅಲ್ಲಿಂದ ಮರಳು ತರಲಾಗಿದೆ. ಸದರಿ ಕಾಮಗಾರಿಯಲ್ಲಿ ಸುಮಾರು ₹500 ಕೋಟಿ ನಷ್ಟು ಸರ್ಕಾರಿ ಹಣ ದುರುಪಯೋಗ ಸೇರಿದಂತೆ ಹಲವು ಲೋಪದೋಷಗಳನ್ನು ಪತ್ತೆಹಚ್ಚಿ ತಾಲೂಕು ರೈತ ಸಂಘದ ಮಾಜಿ ಅಧ್ಯಕ್ಷ ಪಿ.ಬಿ.ಮಂಚನಹಳ್ಳಿ ನಾಗೇಗೌಡ ನೇತೃತ್ವದಲ್ಲಿ ನಾಲಾ ಆಧುನೀಕರಣ ಕಾಮಗಾರಿ ಅವ್ಯವಹಾರದ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದರು.ನಾಲಾ ಕಾಮಗಾರಿ ಹಗರಣದ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದು ಲೋಕಾಯುಕ್ತ ತಾಂತ್ರಿಕ ತಜ್ಞರು ಕಾಮಗಾರಿಗೆ ಕ್ಲೀನ್ ಚಿಟ್ ನೀಡಿದ್ದರು. ಇದರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗದ ತಂಡ ಯಾವುದೇ ಪೂರ್ವ ಮಾಹಿತಿಯಿಲ್ಲದೆ ಸೋಮುವಾರ ನಾಲಾ ಏರಿ ಮೇಲೆ ಸಂಚರಿಸಿ ಕಾಮಗಾರಿಯ ಪರಿವೀಕ್ಷಣೆಗೆ ಮುಂದಾಗಿತ್ತು.
ಆದರೆ, ಇವರಿಗೆ ತನಿಖಾ ತಂಡ ಎಲ್ಲಿಗೆ ಹೋಗಿದೆ ಎನ್ನುವುದರ ಮಾಹಿತಿ ದೊರಕಲಿಲ್ಲ. ಅಂತಿಮವಾಗಿ ಸೋಮವಾರ ಸಂಜೆ ವೇಳೆಗೆ ತನಿಖಾ ತಂಡ ತಾಲೂಕಿನ ಅಗ್ರಹಾರಬಾಚಹಳ್ಳಿ ಕೆರೆಕೋಡಿಯ ಬಳಿ ಇರುವುದನ್ನು ಪತ್ತೆಹಚ್ಚಿದ ದೂರುದಾರರ ತಂಡ ಯಾವುದೇ ಪೂರ್ವ ಸೂಚನೆಯಿಲ್ಲದೆ ಮತ್ತು ದೂರುದಾರರ ಗಮನಕ್ಕೆ ಬರದಂತೆ ನಾಲಾ ಕಾಮಗಾರಿಯ ಪರಿವೀಕ್ಷಣೆಗೆ ಬಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಆಗ ಮಧ್ಯೆ ಪ್ರವೇಶಿಸಿದ ಮುಖ್ಯ ಎಂಜಿನಿಯರ್ ಎಂ.ಮಂಜುನಾಥ್ ಮತ್ತು ದೂರುದಾರರ ತಂಡದ ಸದಸ್ಯರ ನಡುವೆ ವಾಕ್ ಸಮರ ನಡೆಯಿತು. ಅಂತಿಮವಾಗಿ ಎಲ್ಲಾ ಘಟನಾವಳಿಗಳನ್ನು ತಮ್ಮ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದ ದೂರುದಾರರ ತಂಡದವರು ನಾವು ಇಂದು ನಾಲಾ ಆಧುನೀಕರಣ ಅವ್ಯವಹಾರದ ಕಾಮಗಾರಿ ಪರಿಶೀಲನೆಗೆ ಬಂದಿಲ್ಲ. ಮತ್ತೊಮ್ಮೆ ನಿಮ್ಮ ಗಮನಕ್ಕೆ ತಂದು ಪರಿಶೀಲನೆಗೆ ಬರುತ್ತೇವೆ ಎನ್ನುವ ವಾಯ್ಸ್ ರೆಕಾರ್ಡ್ ಹೇಳಿಕೆ ಪಡೆದು ಹಿಂತಿರುಗಿದರು.