ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹೇಮಾವತಿ ಜಲಾಶಯದ ಎಡದಂಡೆ ಮುಖ್ಯ ನಾಲೆಯಿಂದ ತಾಲೂಕಿನ ಕೆರೆ- ಕಟ್ಟೆಗಳಿಗೆ ನೀರು ಹರಿಸುವ ಸಂಬಂಧ ಹೇಮಾವತಿ ಜಲಾಶಯದ ಮುಖ್ಯ ಇಂಜಿನಿಯರ್ ಮಂಜುನಾಥ್ ಸಮ್ಮುಖದಲ್ಲಿ ಮಂಗಳವಾರ ರೈತರು ಮತ್ತು ಅಧಿಕಾರಿಗಳ ಸಭೆ ನಡೆಯಿತು.ಜಲಾಶಯದಿಂದ ನೀರು ಹರಿಸುವಂತೆ ಆಗ್ರಹಿಸಿ ತಾಲೂಕು ರೈತಸಂಘ ಮಾರ್ಚ್ 20ರಂದು ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಲು ನಿರ್ಧರಿಸಿತ್ತು. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಹೇಮಾವತಿ ಜಲಾಶಯದ ಮುಖ್ಯ ಇಂಜಿನಿಯರ್ ಮಂಜುನಾಥ್, ಪ್ರಸ್ತುತ ಜಲಾಶಯದಲ್ಲಿ 20.156 ಟಿಎಂಸಿ ನೀರಿದೆ. ಹೇಮಾವತಿ ಜಲಾಶಯದ ನೀರಾವರಿ ಸಲಹಾ ಸಮಿತಿ ನಿರ್ಣಯದಂತೆ ಹಾಸನ, ತುಮಕೂರು ಮತ್ತು ಮಂಡ್ಯ ಜಿಲ್ಲೆಗಳ ಜನರ ಕುಡಿಯುವ ನೀರಿನ ಉದ್ದೇಶಕ್ಕಾಗಿ 5.800 ಟಿಎಂಸಿ ನೀರನ್ನು ಕಾಯ್ದಿರಿಸಲಾಗಿದೆ.ಬೇಸಿಗೆಯಲ್ಲಿ ನದಿ ಬತ್ತದಂತೆ ಕಾಯ್ದುಕೊಳ್ಳಲು 0.500 ಟಿಎಂಸಿ ಮತ್ತು ಕೈಗಾರಿಕೆಗಳಿಗೆ 0.769 ಟಿಎಂಸಿ ನೀರಿನ ಅಗತ್ಯತೆ ಇದೆ. ಮುಂದಿನ ಜೂನ್ ತಿಂಗಳವರೆಗೆ ಜಲಾಶಯದಲ್ಲಿ 1,632 ಟಿಎಂಸಿ ನೀರು ಉಳಿಯಲಿದೆ. ಆದ್ದರಿಂದ ನಾಲೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದರು.
ಇಲಾಖಾ ವರದಿಯಂತೆ ಕೆ.ಆರ್.ಪೇಟೆ ತಾಲೂಕಿನ ಎಲ್ಲಾ ಕೆರೆಗಳಲ್ಲೂ ಶೇ.25 ರಿಂದ ಶೆ.50 ರವರೆಗೆ ನೀರಿದ್ದು, ಜನರಿಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು. ಈ ವೇಳೆ ರೈತ ಮುಖಂಡರು ಕುಡಿಯುವ ನೀರಿನ ವಿಚಾರದಲ್ಲಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರಿದರು.ರೈತ ಮುಖಂಡ ಎಂ.ವಿ.ರಾಜೇಗೌಡ ಮಾತನಾಡಿ, ಇಲಾಖೆ ವರದಿ ಪ್ರಕಾರ ಜಲಾಶಯದಿಂದ ರಾಬಿ ಮತ್ತು ಖಾರೀಫ್ ಬೆಳೆಗೆ ನೀರು ಬಿಟ್ಟಿರುವುದಾಗಿ ಹೇಳಿದ್ದೀರಿ. ಇದು ಸುಳ್ಳು ವರದಿ. ಏಕ ಕಾಲಕ್ಕೆ ಒಂದು ನಾಲೆಯಲ್ಲಿ ರೈತರು ರಾಬಿ ಮತ್ತು ಖಾರೀಫ್ ಬೆಳೆಯನ್ನು ಹೇಗೆ ಬೆಳೆಯಲು ಸಾಧ್ಯ ಎಂದು ಪ್ರಶ್ನಿಸಿದರು. ಈ ಭಾಗದಲ್ಲಿ ಯಾವ್ಯಾವ ರೈತರು ರಾಬಿ ಮತ್ತು ಖಾರೀಫ್ ಬೆಳೆ ಬೆಳೆದಿದ್ದಾರೆನ್ನುವುದನ್ನು ಅಂಕಿ ಅಂಶಗಳ ಪ್ರಕಾರ ಮಾಹಿತಿ ನೀಡಲಿ ಎಂದು ನೀರಾವರಿ ಇಲಾಖೆ ಇಂಜಿನಿಯರುಗಳನ್ನು ತರಾಟೆಗೆ ತೆಗೆದುಕೊಂಡರು. ತಾಲೂಕಿನಲ್ಲಿ ತೀವ್ರ ಬರಗಾಲವಿದೆ. ಕೆರೆ- ಕಟ್ಟೆಗಳು ಬತ್ತಿವೆ. ಪ್ರತಿ ಬೇಸಿಗೆಯಲ್ಲೂ ಹೇಮಾವತಿ ನೀರಿಗಾಗಿ ರೈತರು ಬೀದಿಗಿಳಿಯಬೇಕಾಗಿದೆ. ನೀರಿನ ಬಗ್ಗೆ ರೈತರಿಗೆ ಶಾಸನ ಬದ್ದ ಹಕ್ಕು ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಕೇಂದ್ರದಿಂದ ನೀರಾವರಿ ಪರಿಶೀಲನಾ ತಂಡ ಬಂದು ನಮ್ಮ ಅಣೆಕಟ್ಟೆಗಳಲ್ಲಿನ ನೀರಿನ ಸಂಗ್ರಹ ಮಾಹಿತಿ ಪರಿಶೀಲಿಸಿದ್ದಾರೆ. ತಮಿಳುನಾಡಿಗೆ ಜಲಾಶಯದ ನೀರನ್ನು ಕಸಿಯುವ ಮುನ್ನ ನೀರನ್ನು ನಮಗೆ ಕೊಡಿ ಎಂದು ಪಟ್ಟು ಹಿಡಿದು ಅಧಿಕಾರಿಗಳು ಹೊರಗೆ ಹೋಗದಂತೆ ತಾಲೂಕು ಆಡಳಿತ ಸೌಧದ ಪ್ರಾಂಗಣದಲ್ಲಿ ಧರಣಿ ಕುಳಿತರು.ಈ ವೇಳೆ ಇಂಜಿನಿಯರುಗಳು ನೀರು ಬಿಡುವ ವಿಚಾರದಲ್ಲಿ ಮೈಸೂರಿನ ಪ್ರಾದೇಶಿಕ ಆಯುಕ್ತರು ನಿಧಾರ ತೆಗೆದುಕೊಳ್ಳುವ ಹಕ್ಕು ಹೊಂದಿದ್ದಾರೆ. ಮಾ.20 ರಂದು ಅವರನ್ನು ಭೇಟಿ ಮಾಡಿ ರೈತರ ಸಮಸ್ಯೆ ವಾಸ್ತವತೆ ತಿಳಿಸಿ ನೀರು ಕೊಡಿಸಲು ಪ್ರಯತ್ನಿಸುತ್ತೇವೆ. ಅಲ್ಲಿಯವರೆಗೆ ಪ್ರತಿಭಟನೆ ಕೈಬಿಟ್ಟು ಸಮಯ ಕೊಡುವಂತೆ ಮನವೊಲಿಸಿದರು.
ನಿಮ್ಮ ಮನವಿಗೆ ಸ್ಪಂದಿಸಿ ಚಳವಳಿ ತಾತ್ಕಾಲಿಕವಾಗಿ ಮುಂದೂಡುತ್ತಿದ್ದೇವೆ. ನಾಲೆಗಳಿಗೆ ನೀರು ಬಿಡದಿದ್ದರೆ ಮತ್ತೆ ಮತ್ತೆ ಹೋರಾಟಕ್ಕಿಳಿಯುವ ಎಚ್ಚರಿಕೆ ನೀಡಿ ನಿರ್ಗಮಿಸಿದರು.ಸಭೆಯಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಅಧೀಕ್ಷಕ ಇಂಜಿನಿಯರ್ ಗಂಗಾಧರ್, ಕಾರ್ಯಪಾಲಕ ಇಂಜಿನಿಯರ್ ಚಂದ್ರೇಗೌಡ, ಸಹಾಯಕ ಕಾರ್ಯಪಾಲಕ ಇಂಜಿನಿಯರುಗಳಾದ ಆನಂದ್, ವಿಶ್ವನಾಥ್, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಮುಖಂಡರಾದ ಎಂ.ವಿ.ರಾಜೇಗೌಡ, ಎಲ್.ಬಿ.ಜಗದೀಶ್, ಮರುವನಹಳ್ಳಿ ಶಂಕರ್, ಬೂಕನಕೆರೆ ನಾಗರಾಜು, ಮಡುವಿನಕೋಡಿ ಪ್ರಕಾಶ್, ಮುದ್ದುಕುಮಾರ್, ನಾಗೇಗೌಡ, ಕೃಷ್ಣಾಪುರ ರಾಜಣ್ಣ, ಚೌಡೇನಹಳ್ಳಿ ನಾರಾಯಣಸ್ವಾಮಿ, ಕರೋಟಿ ತಮ್ಮಯ್ಯ, ನಗರೂರು ಕುಮಾರ್ ಸೇರಿದಂತೆ ಹಲವರಿದ್ದರು.