ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶೀತಪೀಡಿತ ಗ್ರಾಮಗಳ ರೈತರಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಪಟ್ಟಣದ ಹೇಮಾವತಿ ಜಲಾಶಯ ಯೋಜನೆ ವ್ಯಾಪ್ತಿಗೆ ಸೇರಿದ ಎಚ್.ಎಲ್.ಬಿ.ಸಿ ನಂ 03 ಉಪ ವಿಭಾಗೀಯ ಕಚೇರಿಗೆ ಆಗಮಿಸಿದ ತಾಲೂಕಿನ ಕಳ್ಳನಕೆರೆ ಮತ್ತು ಗಂಗನಹಳ್ಳಿ ಗ್ರಾಮಸ್ಥರು ಪೀಠೋಪಕರಣಗಳನ್ನು ಜಪ್ತಿ ಮಾಡಿದರು.ಹೇಮಾವತಿ ಜಲಾಶಯ ಯೋಜನಾ ವ್ಯಾಪ್ತಿಯ ಹೇಮಾವತಿ ಎಡದಂಡೆ ನಾಲೆ ಗ್ರಾಮದ ಸಮೀಪ ಹಾದುಹೋಗಿರುವ ಕಾರಣ ತಗ್ಗು ಪ್ರದೇಶದ ಕಳ್ಳನೆರೆ ಮತ್ತು ಗಂಗನಹಳ್ಳಿ ಗ್ರಾಮಗಳು ಶೀತಪೀಡಿತವಾಗಿವೆ. ಈ ಗ್ರಾಮಗಳ ಪುನರ್ ವಸತಿ ಮತ್ತು ಯೋಜನಾ ನಿರಾಶ್ರಿತರಿಗೆ ನೀರಾವರಿ ಇಲಾಖೆ ಯಾವುದೇ ಪರಿಹಾರ ನೀಡಿಲ್ಲ.
ಪುನರ್ ವಸತಿ ಮತ್ತು ಸೂಕ್ತ ಪರಿಹಾರಕ್ಕಾಗಿ ಎರಡೂ ಗ್ರಾಮಗಳ ಜನ ಪಟ್ಟಣದ ಸಿವಿಲ್ ನ್ಯಾಯಾಲಯದಲ್ಲಿ ಶ್ರೀರಂಗಪಟ್ಟಣದ ವಕೀಲ ಪುಟ್ಟೇಗೌಡರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ನೀರಾವರಿ ಇಲಾಖೆ ವಿರುದ್ಧ ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಪರಿಹಾರದ ಆದೇಶ ಪಡೆದಿದ್ದಾರೆ.ಗ್ರಾಮಸ್ಥರ ಪುನರ್ ವಸತಿ ಮತ್ತು ಸೂಕ್ತ ಪರಿಹಾರಕ್ಕೆ ನ್ಯಾಯಾಲಯ ಆದೇಶಿಸಿದ್ದರೂ ನೀರಾವರಿ ಇಲಾಖೆ ನ್ಯಾಯಾಲಯದ ಆದೇಶವನ್ನು ಇದುವರೆಗೂ ಪಾಲಿಸಿಲ್ಲ. ನ್ಯಾಯಾಲಯದ ಆದೇಶ ಉಲ್ಲಂಘನೆ ಕಾರಣದಿಂದ ಈ ಹಿಂದೆ ಎರಡು ಮೂರು ಸಲ ನೀರಾವರಿ ಇಲಾಖೆಯ ಜಪ್ತಿಗೆ ನ್ಯಾಯಾಲಯ ಆದೇಶಿಸಿತ್ತು.
ನ್ಯಾಯಾಲಯದ ಅಮೀನರು ರೈತರ ಜೊತೆ ಜಪ್ತಿಗೆ ಬಂದಾಗಲೆಲ್ಲಾ ನೀರಾವರಿ ಇಲಾಖೆ ಎಂಜಿನಿಯರುಗಳು ಸಬೂಬು ಹೇಳಿ ಶೀಘ್ರವೇ ಗ್ರಾಮಸ್ಥರಿಗೆ ಪರಿಹಾರ ನೀಡುವ ಭರವಸೆ ನೀಡಿ ಜಪ್ತಿ ಕಾರ್ಯದಿಂದ ತಪ್ಪಿಸಿಕೊಳ್ಳುತ್ತಿದ್ದರು.ಸುಳ್ಳು ಭರವಸೆ ನೀಡಿ ಪರಿಹಾರ ನೀಡದೆ ಹಾಗೂ ಪುನರ್ವಸತಿ ಕಲ್ಪಿಸಿಕೊಡಲು ಬೇಜವಾಬ್ದಾರಿತನ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಹೇಮಾವತಿ ಜಲಾಶಯ ಯೋಜನೆಯ ನಂ.03 ವಿಭಾಗದ ಕಾರ್ಯಪಾಲಕ ಅಭಿಯಂತರರ ಕಚೇರಿ ಪೀಠೋಪಕರಣ ಜಪ್ತಿ ಮಾಡಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದ ಸಿಬ್ಬಂದಿಯೊಂದಿಗೆ ನೀರಾವರಿ ಇಲಾಖೆ ಕಚೇರಿಗೆ ಆಗಮಿಸಿದ ಕಳ್ಳನಕೆರೆ ಹಾಗೂ ಗಂಗನಹಳ್ಳಿಯ ಗ್ರಾಮಸ್ಥರು ಪೀಠೋಪಕರಣಗಳನ್ನು ತಮ್ಮ ವಾಹನಗಳಿಗೆ ತುಂಬಿಕೊಂಡು ತೆರಳಿದರು.
ಈ ವೇಳೆ ಮಾತನಾಡಿದ ಎಂಜಿನಿಯರ್ ಜಯರಾಮ್, ಸರ್ಕಾರವು ನಮ್ಮ ಯೋಜನಾ ವ್ಯಾಪ್ತಿಯ ಶೀತಪೀಡಿತ ಗ್ರಾಮಗಳ ಪುನರ್ವಸತಿಗೆ ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಪರಿಹಾರ ನೀಡಲು ವಿಳಂಬವಾಗಿದೆ. ಶೀಘ್ರ, ನೊಂದಿರುವ ರೈತ ಬಾಂಧವರಿಗೆ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಈ ವೇಳೆ ಹೇಮಾವತಿ ಜಲಾಶಯ ಯೋಜನೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಆನಂದ್, ವಿಶ್ವನಾಥ್ ಚಂದ್ರೇಗೌಡ ಹಾಗೂ ಕಚೇಯ ಸಿಬ್ಬಂದಿ ಉಪಸ್ಥಿತರಿದ್ದರು.