ಇಲ್ಲಿದೆ ನೋಡಿ ಮಾರಿಕಣಿವೆ ಒಡಲ ನೀರಿನ ಡೀಟೈಲ್ : ಮಹರಾಷ್ಟ್ರ, ಕರ್ನಾಟಕ ಹಾಗೂ ಆಂದ್ರ ಪ್ರದೇಶ ರಾಜ್ಯಗಳಿಗೆ ನೀರು ಬಳಕೆ ಹಕ್ಕು

KannadaprabhaNewsNetwork | Updated : Mar 07 2025, 11:35 AM IST

ಸಾರಾಂಶ

ಕರ್ನಾಟಕದಲ್ಲಿರುವ ನದಿ ನೀರು ಬಳಕೆ ವಿಚಾರದಲ್ಲಿ ಕಾವೇರಿ ಹಾಗೂ ಕೃಷ್ಣಾ ಕೊಳ್ಳ ಎಂಬುದಾಗಿ ಪ್ರತ್ಯೇಕಿಸಲಾಗಿದೆ. ಕಾವೇರಿಗಿಂತ ಕೃಷ್ಣಾ ನದಿ ತುಂಬಾ ವಿಸ್ತಾರವಾಗಿದ್ದು ಮಹರಾಷ್ಟ್ರ, ಕರ್ನಾಟಕ ಹಾಗೂ ಆಂದ್ರ ಪ್ರದೇಶ ರಾಜ್ಯಗಳು ನೀರು ಬಳಕೆ ವಿಚಾರದಲ್ಲಿ ಹಕ್ಕು ಪಡೆದಿವೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

  ಚಿತ್ರದುರ್ಗ : ಕಣ್ಣೆದುರಿಗೆ ಇರುವುದೆಲ್ಲ ನಮ್ಮದಲ್ಲ, ಡ್ಯಾಂ ತುಂಬಿದಾಕ್ಷಣ ನಮ್ಮದೆಂದು ಸಂಭ್ರಮದಿಂದ ಮಿಂದೇಳುವಂತಿಲ್ಲ. ಈ ನೀರೆಲ್ಲ ನಮ್ಮದು, ಯಾರೂ ಮುಟ್ಟುವಂತಿಲ್ಲ, ಯಾರಿಗೂ ಬಳಕೆಗೆ ಅವಕಾಶ ಮಾಡಿಕೊಡುವುದಿಲ್ಲವೆಂಬ ಫರ್ಮಾನು ಹೊರಡಿಸುವಂತಿಲ್ಲ, ಕರ್ನಾಟಕದಲ್ಲಿ ಲಭ್ಯವಾಗುವ ನದಿ ಮೂಲದ ನೀರು ಬಳಕೆ ಅದರದ್ದೇ ಆದ ಲೆಕ್ಕಾ ಚಾರದ ಸೂತ್ರವಿದೆ. ನ್ಯಾಯಾಧೀಕರಣ ಉಲ್ಲಂಘಿಸಿ ಯಾವುದೇ ಹೊಸ ಯೋಜನೆ ರೂಪಿಸುವಂತಿಲ್ಲ.

ಕರ್ನಾಟಕದಲ್ಲಿರುವ ನದಿ ನೀರು ಬಳಕೆ ವಿಚಾರದಲ್ಲಿ ಕಾವೇರಿ ಹಾಗೂ ಕೃಷ್ಣಾ ಕೊಳ್ಳ ಎಂಬುದಾಗಿ ಪ್ರತ್ಯೇಕಿಸಲಾಗಿದೆ. ಕಾವೇರಿಗಿಂತ ಕೃಷ್ಣಾ ನದಿ ತುಂಬಾ ವಿಸ್ತಾರವಾಗಿದ್ದು ಮಹರಾಷ್ಟ್ರ, ಕರ್ನಾಟಕ ಹಾಗೂ ಆಂದ್ರ ಪ್ರದೇಶ ರಾಜ್ಯಗಳು ನೀರು ಬಳಕೆ ವಿಚಾರದಲ್ಲಿ ಹಕ್ಕು ಪಡೆದಿವೆ. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಕರ್ನಾಟಕಕ್ಕೆ ಲಭ್ಯವಿರುವ ನೀರಿನ ಪ್ರಮಾಣ, ಕೆಡಬ್ಲ್ಯೂಡಿಟಿ(ಕೃಷ್ಣಾ ಜಲವಿಾದ ನ್ಯಾಯಾಧಿಕರಣ)ಯಿಂದ ಕರ್ನಾಟಕಕ್ಕೆ ಹಂಚಿಕೆಯಾಗಿರುವ ಪ್ರಮಾಣ ಹಾಗೂ ಭವಿಷ್ಯದಲ್ಲಿ ಕರ್ನಾಟಕಕ್ಕೆ ಲಭ್ಯವಾಗುವ ನೀರಿನ ಪ್ರಮಾಣ ಆಧರಿಸಿ ಪ್ರಯೋಜನಕಾರಿ ಬಳಕೆಗಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದ್ದು ಅದರ ಅನ್ವಯ ಕರ್ನಾಟಕಕ್ಕೆ 734 ಟಿಎಂಸಿ ನೀರು ಲಭ್ಯವಾಗಿದೆ. ನೀರು ಹಂಚಿಕೆ ಮಾಡುವಾಗ ನೀರಾವರಿ ಹಾಗೂ ಸಣ್ಣ ನೀರಾವರಿಗೆಂದು ಪ್ರತ್ಯೇಕಿಸಲಾಗುತ್ತದೆ. ಕೆರೆಗಳ ತುಂಬಿಸುವ ಕೈಂಕರ್ಯ ಮಾತ್ರ ಸಣ್ಣ ನೀರಾವರಿ ಇಲಾಖೆಯದು.

ಅಂದರೆ ಇಡೀ ಕೃಷ್ಣ ಕೊಳ್ಳದಲ್ಲಿ ಬರುವ ಎಲ್ಲ ಉಪ ನದಿಗಳಿಂದ ಸಂಗ್ರಹವಾದ ನೀರು ಬಳಕೆ ಪ್ರಮಾಣ ಇದಾಗಿದೆ. ಅದೇ ರೀತಿ ಕಳೆದ ನೂರು ವರ್ಷಗಳ ನೀರಿನ ಹರಿವು ಪ್ರಮಾಣ ಆಧರಿಸಿ ವಿವಿ ಸಾಗರ ಜಲಾಶಯದ ನೀರು ಸಂಗ್ರಹ ಹಾಗೂ ಬಳಕೆ ಪ್ರಮಾಣವನ್ನು ಕೇವಲ 5.25 ಟಿಎಂಸಿಗೆ ನಿಗಧಿಪಡಿಸಲಾಗಿದೆ. ಅಂದರೆ ವಿವಿ ಸಾಗರದಿಂದ ಯಾವುದೇ ಯೋಜನೆಗಳ ಕೈಗೊಂಡರೂ ವಾರ್ಷಿಕ ನೀರಿನ ಬಳಕೆ ಮಿತಿ 5.25 ಟಿಎಂಸಿ ಮೀರುವಂತಿಲ್ಲ. ಹಾಗೊಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾದರೆ ಹೆಚ್ಚುವರಿ ಎಂದೇ ಪರಿಗಣಿಸಿ ಕೆಳಬಾಗದವರು ನೀರಿಗಾಗಿ ಕೋರಿಕೆ ಸಲ್ಲಿಸಬಹುದಾಗಿದೆ.

ವಿವಿ ಸಾಗರದಲ್ಲಿ ಹೆಚ್ಚುವರಿ ಸಂಗ್ರಹವಾಗಿರುವ ನೀರನ್ನು ಇದೇಜಲಾಶಯದಿಂದಲೇ ಬೇರೆ ರಾಜ್ಯಗಳು ಪಡೆಯಬೇಕೆಂದೇನಿಲ್ಲ. ತುಂಗಭದ್ರಾ, ಆಲಮಟ್ಟಿ ಜಲಾಶಯದಿಂದ ಡ್ರಾ ಮಾಡಬಹುದಾಗಿದೆ. ವಿವಿ ಸಾಗರ ಜಲಾಶಯದ ಕೆಳ ಭಾಗದಲ್ಲಿ ಬೈರನತಿಪ್ಪ ಜಲಾಶಯವಿದ್ದು ಸಹಜವಾಗಿ ಆಂದ್ರ ಕುಡಿವ ನೀರಿಗಾಗಿ ಈ ಡ್ಯಾಂಗೆ ನೀರು ಹರಿಸುವಂತೆ ಕೋರಿಕೆ ಮಂಡಿಸಬಹುದಾಗಿದೆ. ಹಾಗಾಗಿ ವಿವಿ ಸಾಗರ ಜಲಾಶಯದಲ್ಲಿ ಸಂಗ್ರಹವಾಗಿರುವ 30 ಟಿಎಂಸಿ ನೀರಿನಲ್ಲಿ ಈ ಭಾಗದವರು 5.25 ಟಿಎಂಸಿ ಬಳಕೆ ಹಕ್ಕು ಪಡೆಯುತ್ತಾರೆ. ಹಾಗೊಂದು ವೇಳೆ ಹೆಚ್ಚುವರಿಯಾಗಿ ಬಳಕೆ ಮಾಡಲು ಮುಂದಾದರೆ ನೀರು ಹಂಚಿಕೆ ವ್ಯಾಪ್ತಿಗೆ ಒಳಪಟ್ಟಿರಬೇಕು. ಇಲ್ಲವಾದಲ್ಲಿ ಕೃಷ್ಣಾ ಜಲವಿವಾದ ನ್ಯಾಯಾಧಿಕರಣದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

ಕೃಷ್ಣ ಕೊಳ್ಳದಲ್ಲಿ ಬಳಕೆ ಮಾಡಲು ವಿವಿದ ಯೋಜನೆಗಳಡಿ ನಿಗಧಿಯಾದ ನೀರಿನ ಪ್ರಮಾಣ(ಟಿಎಂಸಿಯಲ್ಲಿ)

1 ದೂದ್ ಗಂಗಾ-4.00

2 ಕೃಷ್ಣಾ ಮೇಲ್ದಂಡೆ-173.00

3 ಹಿಪ್ಪರಗಿ-12.10

4 ಗೋಕಾಕ್ ಕಾಲುವೆ-1.40

5 ಘಟಪ್ರಭ-1, 2,3-87.70

6 ಮಾರ್ಕಂಡೇಯ-4.00

7 ರಾಮೇಶ್ವರ ಏತ ನೀರಾವರಿ-2.20

8ಬೆಳ್ಳಾರಿ ನಾಲಾ ಲಿಫ್ಟ್-1.91

9ಕೊಲ್ಚಿ ಯೋಜನೆ-0.70

10ಮಲಪ್ರಭ-27.00

11 ಹರಿನಾಲ-0.64

12 ರಾಮಥಾಲ್ ಲಿಫ್ಟ್-4.50

13 ಬೆಣ್ಣೆ ಹಳ್ಳ-1.80

14 ಕೊಣ್ಣೂರು ಲಿಫ್ಟ್-0.39

15 ಹತಿಕೊನಿ-0.40

16ಅಪ್ಪರ್ ಮುಲಿಮಾರಿ-1.08

17 ಚಂದ್ರಂಪಳ್ಳಿ-1.90

18 ಆಮ್ರಿಯಾ-1.92

19ಬೆಣ್ಣೆತೊರೆ-5.75

20ಲೋಯರ್ ಮುಲಿಮಾರಿ-2.61

21 ಭೀಮಾ ಲಿಫ್ಟ್-6.00

22 ಗಂಡೋರಿ ನಾಲಾ-2.16

23 ಭೀಮಾ ಬ್ಯಾರೇಜ್ -5.00

24 ಕಂಗ್ನಾ-2.00

25 ಸೋಂತಿ ಸ್ಟೇಜ್ 1-4.00

26 ಜಂಬದಹಳ್ಳಿ ಪ್ರಾಜೆಕ್ಟ್-0.70

27 ಅಂಬಿ ಐಗೊಳ-1.10

28 ಅಂಜನಾಪುರ-2.50

29 ಧರ್ಮ ಯೋಜನೆ 1.10

30 ಹಗರಿಬೊಮ್ಮನಹಳ್ಳಿ-2.00

31ರಾಜೋಳಿ ಬಂಡಾ-1.20

32 ತುಂಗಾ ಜಲಾಶಯ-11.50

33 ಭದ್ರಾ ಜಲಾಶಯ-61.70

34 ಭದ್ರಾ ಅಣೆಕಟ್ಟೆ-3.10

35ತುಂಗ ಭದ್ರಾ ಡ್ಯಾಂ--132.00

36 ವಿಜಯನಗರ ಕಾಲುವೆ-12.05

37 ಹಿರೇಹಳ್ಳ-2.27

38 ಮಸ್ಕಿ ನಾಲಾ-0.78

39 ಸಿಂಗಟಾಲೂರು-18.55

40 ತುಂಗಾ ಮೇಲ್ದಂಡೆ-12.24

41 ಗುಡ್ಡದ ಮಲ್ಲಾಪುರ-1.00

42 ಭದ್ರಾ ಮೇಲ್ದಂಡೆ ಹಂತ1-10.00

43 ಬಸಾಪುರ ಲಿಫ್ಟ್-0.60

44 ಗಾಯತ್ರಿಜಲಾಶಯ-0.45

45 ವಾಣಿವಿಲಾಸ ಸಾಗರ-5.25

ಸಣ್ಣ ನೀರಾವರಿ ಯೋಜನೆಗೆ-92.75

ಚೆನ್ನೈಗೆ ಕುಡಿವ ನೀರು-5.00

ಒಟ್ಟು: 734-00 ಟಿಎಂಸಿ

Share this article