ವಿಜಯಪುರ : ಜನರಿಗೆ ಹಾಗೂ ರೈತರಿಗೆ ಇಂಧನ ಇಲಾಖೆಯಿಂದ ಸಮರ್ಪಕ ವಿದ್ಯುತ್ ಹಾಗೂ ಸರಿಯಾದ ಸೇವೆ ನೀಡಬೇಕೆಂಬುದು ಸಿಎಂ, ಇಂಧನ ಸಚಿವರ ಆಶಯವಿದೆ. ಅವರ ಆಶಯದಂತೆ ಅಪಘಾತ ರಹಿತ ಹೆಸ್ಕಾಂ ಮಾಡುವ ಗುರಿ ಇಟ್ಟುಕೊಂಡು ಏಳು ಜಿಲ್ಲೆಗಳಲ್ಲಿ ನಾವು ಸಂಚಾರ ಮಾಡುತ್ತಿದ್ದೇವೆ ಎಂದು ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಂಪೀರ ಖಾದ್ರಿ ಹೇಳಿದರು.
ನಗರದ ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ- ಸಕ್ರಮ ಯೋಜನೆಯಲ್ಲಿ ಹೆಸ್ಕಾಂ ವ್ಯಾಪ್ತಿಯಲ್ಲಿ 2023ರವರೆಗೆ ₹10 ರಿಂದ 15 ಸಾವಿರ ಹಣ ಕಟ್ಟಿದ 15,200 ರೈತರಿಗೆ ಐಪಿಸೆಟ್ (ಪಂಪ್ ಸೆಟ್)ಗಳಿಗೆ ಸಂಪರ್ಕ ಕೊಡಲಾಗುತ್ತಿದೆ. ರಾತ್ರಿ ವೇಳೆ 7 ಗಂಟೆ 3 ಫೇಸ್ ವಿದ್ಯುತ್ ನೀಡಲಾಗುತ್ತಿದ್ದು, ರೈತರಿಗೆ ಇನ್ನಷ್ಟು ಅನಕೂಲ ಕಲ್ಪಿಸಬೇಕೆಂಬ ಉದ್ದೇಶದಿಂದ ಹಗಲು ಹೊತ್ತಿನಲ್ಲೂ 7 ಗಂಟೆ 3 ಫೇಸ್ ವಿದ್ಯುತ್ ನೀಡಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಮೊದಲಿಗೆ ಚಿಕ್ಕಬಳ್ಳಾಪುರ, ಗದಗ ಜಿಲ್ಲೆಗಳಲ್ಲಿ ಒಂದೊಂದು ಗ್ರಾಮದಲ್ಲಿ ಹಗಲು ಹೊತ್ತಿನಲ್ಲಿ 7 ಗಂಟೆ 3 ಫೇಸ್ ವಿದ್ಯುತ್ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂದೆ ಎಲ್ಲ ಕಡೆಗಳಲ್ಲಿ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.
350 ಲೈನ್‌ಮೆನ್‌ಗಳ ನೇಮಕ:
ಹೆಸ್ಕಾಂ ವ್ಯಾಪ್ತಿಯ 7 ಜಿಲ್ಲೆಗಳಿಗೆ ಸೇರಿ ಪಾರದರ್ಶಕತೆ ಹಾಗೂ ಮೆರಿಟ್ ಮೇಲೆ 350 ಲೈನ್ ಮೆನ್‌ಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಎಲ್ಲರನ್ನೂ ಹಾಗೂ ಎಲ್ಲ ಜಿಲ್ಲೆಗಳನ್ನು ಪರಿಗಣಿಸಿ, ಕೌನ್ಸೆಲಿಂಗ್ ಮಾಡಿ ಯಾವ ಜಿಲ್ಲೆಯಲ್ಲಿ ಅವಶ್ಯಕತೆ ಇದೆ ಎಂಬುದನ್ನು ಗಮನಿಸಿ ಲೈನ್ ಮೆನ್‌ಗಳನ್ನು ನೇಮಿಸಲಾಗುವುದು. ಇಲಾಖೆಯಲ್ಲಿ ಯಾವುದೇ ಅವ್ಯವಹಾರಕ್ಕೆ ಅವಕಾಶ ನೀಡಲ್ಲ. ರೈತರಿಗೆ ಟಿಸಿ ನೀಡಿಕೆಯಲ್ಲಿ ದುರಸ್ತಿ ಮಾಡಿಕೊಡುವಲ್ಲಿ ತ್ವರಿತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅನಧಿಕೃತ ಟಿಸಿ ಹಾಕಿಕೊಂಡವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಸೂಫಿ ಸಂತರ ಸಮಾವೇಶ ಕುರಿತು ಅಪಸ್ವರ ಎತ್ತಿದ ಖಾದ್ರಿ, ಅದು ಸೂಫಿ ಸಂತರ ಸಮಾವೇಶ ಅಲ್ಲ, ಇತರೆಲ್ಲರ ಸಮಾವೇಶವಾಗಿದೆ. ಸಚಿವ ಜಮಿರ್ ಅಹ್ಮದ್ ಖಾನ್ ಬೆಂಬಲಿಸುವ ಸೂಫಿಗಳು ಮುಖಂಡರು ಭಾಗಿಯಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಸಚಿವರು ನಿರಂತರ ಕೆಲಸ ಕಾರ್ಯ ಮಾಡುವವರು. ಸಮಾವೇಶಕ್ಕೂ ನಮಗೂ ಸಂಬಂಧವಿಲ್ಲ. ನಾನು ಸಮಾವೇಶಕ್ಕೆ ಹೋಗುವುದಿಲ್ಲ ಎನ್ನುವ ಮೂಲಕ ಸೂಫಿ ಸಂತರ ಸಮಾವೇಶ ಕುರಿತು ಅಸಮಾಧಾನ ಹೊರ ಹಾಕಿದರು.
ಪರಿಹಾರ ಚೆಕ್ ವಿತರಣೆ:
ಇದೇ ವೇಳೆ ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದ ತಾಲೂಕಿನ ಹಿಟ್ಟಿನಹಳ್ಳಿಯ ಹೆಸ್ಕಾಂ ಸಿಬ್ಬಂದಿ ಸುರೇಶ ಗೆಣ್ಣೂರ ಅವರ ₹ 12 ಲಕ್ಷ ಪರಿಹಾರದ ಚೆಕ್‌ನ್ನು ಅವರ ಪತ್ನಿ ರೇಣುಕಾ ಗೆಣ್ಣೂರಗೆ ವಿತರಣೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ಸಿದ್ದಪ್ಪ ಬಿಂಜಗೇರಿ, ಸೈಯ್ಯದ ಅಹಮ್ಮದ ಖಾಜಿ, ಶಫೀಕ್‌ಅಹಮ್ಮದ ಜಾಹಗಿರದಾರ ಮುಂತಾದವರು ಹಾಜರಿದ್ದರು.
2023ರ ವರೆಗೆ ಕೇವಲ ₹ 50 ಭರಿಸಿ ಆರ್‌ಆರ್ ನಂಬರ್ ತೆಗೆದುಕೊಂಡಿರುವ ಹೆಸ್ಕಾಂ ವ್ಯಾಪ್ತಿಯ 7 ಜಿಲ್ಲೆಗಳಲ್ಲಿನ 23 ಸಾವಿರ ರೈತರಿಗೆ ಐಪಿ ಸೆಟ್ ಕನೆಕ್ಷನ್ ಕೊಡುತ್ತಿದ್ದೇವೆ. ವಿಜಯಪುರದಲ್ಲಿ ಶೀಘ್ರದಲ್ಲೇ ಯುಜಿ ಕೇಬಲ್ ಹಾಕುವ ಕೆಲಸ ಕೂಡ ಆಗಲಿದೆ. ಜಿಲ್ಲೆಯಲ್ಲಿ 2.21 ಲಕ್ಷ ಐಪಿ ಸೆಟ್‌ಗಳು ಇವೆ, 4.60 ಲಕ್ಷ ಸಾವಿರ ಗೃಹ ಜ್ಯೋತಿ ಕನೆಕ್ಷನ್ ಇವೆ.
- ಸೈಯದ್ ಅಜೀಂಪೀರ ಖಾದ್ರಿ, ಹೆಸ್ಕಾಂ ನಿಗಮದ ಅಧ್ಯಕ್ಷ