ಸತ್ಯದ ಶೋಧನೆ ನ್ಯಾಯಾಂಗದ ಕರ್ತವ್ಯ

KannadaprabhaNewsNetwork | Published : May 18, 2025 1:53 AM
Follow Us

ಸಾರಾಂಶ

ಈ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ, ಅಲ್ಪಸಂಖ್ಯಾತರ ಹಕ್ಕುಗಳ ದಮನವೇ ಮೊದಲಾದ ಸಮಸ್ಯೆಗಳು ತಲೆದೋರಿದಾಗ ನ್ಯಾಯಾಂಗವು ಆ ಕ್ಯಾನ್ಸರನ್ನು ಗುಣಪಡಿಸುವ ಮದ್ದಿನಂತೆ ಕಾರ್ಯೋನ್ಮುಖವಾಗಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ನ್ಯಾಯಾಂಗದ ವಾಸ್ತವವಾದ ಕರ್ತವ್ಯವು ಸತ್ಯದ ಶೋಧನೆಯಾಗಿದೆ ಮತ್ತು ಸತ್ಯವೇ ನ್ಯಾಯದ ತಳಹದಿಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ತಿಳಿಸಿದರು.ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನ ಪಿ.ಎಂ. ಚಿಕ್ಕಬೋರಯ್ಯ ಸಭಾಂಗಣದಲ್ಲಿ ಕೆ. ಪುಟ್ಟಸ್ವಾಮಿಯವರ ನೆನಪಿನ 6ನೇ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗದ ಪಾತ್ರ ಕುರಿತು ಉಪನ್ಯಾಸ ನೀಡಿದರು.ಪ್ರಜಾಪ್ರಭುತ್ವದ ಮೂಲಬೇರು ಗ್ರೀಕ್ ನಾಗರಿಕತೆಯಲ್ಲಿದೆ. ಈ ವ್ಯವಸ್ಥೆಯು ಪ್ರಜೆಗಳಿಗೆ ತಮ್ಮ ಅವಶ್ಯಕತೆಗಳಿಗೆ ಅನುಸಾರವಾಗಿ ಸರ್ಕಾರವನ್ನು ಬದಲಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡುತ್ತದೆ. ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಾನತೆಯನ್ನು ನೀಡುವ ಮುಖಾಂತರ ಮಾನವಹಕ್ಕುಗಳ ರಕ್ಷಣೆಯಲ್ಲಿ ನಿರ್ಣಾಯಕವಾದ ಪಾತ್ರವನ್ನು ವಹಿಸುತ್ತದೆ ಎಂದರು.ಈ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ, ಅಲ್ಪಸಂಖ್ಯಾತರ ಹಕ್ಕುಗಳ ದಮನವೇ ಮೊದಲಾದ ಸಮಸ್ಯೆಗಳು ತಲೆದೋರಿದಾಗ ನ್ಯಾಯಾಂಗವು ಆ ಕ್ಯಾನ್ಸರನ್ನು ಗುಣಪಡಿಸುವ ಮದ್ದಿನಂತೆ ಕಾರ್ಯೋನ್ಮುಖವಾಗಬೇಕು. ಹೀಗಾಗಿಯೇ ನ್ಯಾಯಾಂಗವನ್ನು ಸಂವಿಧಾನದ ಕಾವಲುಗಾರ ಎಂದು ಕರೆಯಲಾಗಿದೆ ಎಂದು ಅವರು ಹೇಳಿದರು.ಸಂವಿಧಾನವು ಪ್ರಜಾಪ್ರಭುತ್ವದ ಸಂರಕ್ಷಕ ಎನ್ನುವುದು ನಮಗೆಲ್ಲ ತಿಳಿದೇ ಇದೆ. ಅಂತಹ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯವನ್ನು ತನ್ನ ಅರ್ಥವಿವರಣೆಯ ಕಾರ್ಯದ ಮೂಲಕ ನ್ಯಾಯಾಂಗವು ಸಮರ್ಥವಾಗಿ ಮಾಡುತ್ತದೆ. ಪ್ರಜಾಪ್ರಭುತ್ವದ ಹೃದಯ ಎನ್ನುವುದಾಗಿ ಪರಿಗಣಿಸಲ್ಪಡುವ ಮೂಲಭೂತ ಹಕ್ಕುಗಳಿಂದ ಜನರು ವಂಚಿತರಾಗದಂತೆ ಕಾಪಾಡುವ ಕರ್ತವ್ಯ ನ್ಯಾಯಾಂಗದ್ದು ಎಂದರು.ಅಮೇರಿಕಾದಂತಹ ದೇಶಗಳಂತೆಯೇ ಭಾರತದಲ್ಲಿ ಸಹ ನ್ಯಾಯಾಂಗವು ಶಾಸಕಾಂಗ ಮತ್ತು ಕಾರ್ಯಾಂಗಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದಾಗಲೆಲ್ಲ ಅವುಗಳನ್ನು ನಿರ್ಬಂಧಿಸಿ ಕಾನೂನಿನ ಆಡಳಿತವನ್ನು ಮುನ್ನೆಲೆಗೆ ತಂದು ಸಮಾಜ ವ್ಯವಸ್ಥೆಯ ಸುಸ್ಥಿರತೆಗೆ ಕಾರಣವಾಗುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಅಂಗವು ಜುಡಿಶಿಯಲ್ ಆಕ್ಟಿವಿಸಂನ ಮೂಲಕ ಪ್ರಜೆಗಳ ಹಕ್ಕುಗಳನ್ನು ರಕ್ಷಿಸುತ್ತದೆ. ಈ ಪ್ರಕ್ರಿಯೆಯಲ್ಲಿ ನ್ಯಾಯಾಲಯಗಳು ಸರ್ಕಾರದ ಇತರ ಅಂಗಗಳ ವಿರುದ್ಧ ಗಟ್ಟಿಯಾದ ನಿಲುವುಗಳನ್ನು ತಳೆಯುವ ಮತ್ತು ಅವುಗಳು ರೂಪಿಸಿದ ನಿಯಮಗಳನ್ನು ಮುರಿಯುವ ಹಂತಕ್ಕೂ ನಡೆಯುತ್ತವೆ. ತನ್ಮೂಲಕ ಪ್ರಜಾಪ್ರಭುತ್ವದ ಭದ್ರತೆಗೆ ಕಾರಣವಾಗುತ್ತವೆ ಎಂದರು.ವಿದ್ಯಾವರ್ಧಕ ಸಂಘದ ಗೌರವ ಅಧ್ಯಕ್ಷ ಗುಂಡಪ್ಪ ಗೌಡ, ಗೌರವ ಕಾರ್ಯದರ್ಶಿ ಪಿ. ವಿಶ್ವನಾಥ್‌, ವಿದ್ಯಾವರ್ಧಕ ಕಾನೂನು ಕಾಲೇಜಿನ ಸಿಎಂಸಿ ಅಧ್ಯಕ್ಷ ಎಸ್. ಶಿವಲಿಂಗಯ್ಯ, ಪ್ರಾಂಶುಪಾಲೆ ಡಾ.ಪಿ. ದೀಪು ಇದ್ದರು. ಸಹಾಯಕ ಪ್ರಾಧ್ಯಾಪಕರಾದ ಎಚ್.ಎಸ್. ಶಿವಕುಮಾರ್ ಸ್ವಾಗತಿಸಿದರು. ಎಂ.ಜೆ. ಇಂದುಮತಿ ನಿರೂಪಿಸಿದರು. ಡಾ. ಶ್ರೀದೇವಿ ಕೃಷ್ಣ ವಂದಿಸಿದರು.----ಕೋಟ್...ಎಲ್ಲೆಲ್ಲಿ ಅಸ್ತಿತ್ವದಲ್ಲಿರುವ ಕಾನೂನುಗಳು ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಸೋಲುತ್ತವೆಯೋ ಅಲ್ಲೆಲ್ಲ ನ್ಯಾಯಾಂಗವು ನ್ಯಾಯ ಮತ್ತು ನೈತಿಕತೆಗಳ ತಳಹದಿಯ ಮೇಲೆ ನಿರ್ಣಯಗಳನ್ನು ನೀಡುವ ಮೂಲಕ ಸಮಾಜ ಮತ್ತು ಕಾನೂನುಗಳ ನಡುವೆ ಇರುವ ಕಂದಕಕ್ಕೆ ಸೇತುವೆಯಾಗಿ ಒದಗಿ ಬರುತ್ತದೆ.- ಎಚ್.ಪಿ. ಸಂದೇಶ್, ನ್ಯಾಯಮೂರ್ತಿ, ಕರ್ನಾಟಕ ಹೈಕೋರ್ಟ್