ಕನ್ನಡಪ್ರಭ ವಾರ್ತೆ ಭಾರತೀನಗರ
ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲು ನಮ್ಮ ವಿದ್ಯಾಸಂಸ್ಥೆ ಸಾಕಷ್ಟು ಶ್ರಮಿಸುತ್ತಿದೆ ಎಂದು ಶಾಸಕ ಹಾಗೂ ಭಾರತೀ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಮಧು ಜಿ.ಮಾದೇಗೌಡ ತಿಳಿಸಿದರು.ಭಾರತೀ ಎಜುಕೇಷನ್ ಟ್ರಸ್ಟ್ ಆಶ್ರಯದ ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಭಾರತಿ ಉಲ್ಲಾಸ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಈ ವಿದ್ಯಾಸಂಸ್ಥೆಯಿಂದ ಬಡ, ಮಧ್ಯಮ ವರ್ಗದವರು, ಕೂಲಿಕಾರ್ಮಿಕ ಮಕ್ಕಳು ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗಿದೆ. ಇದರಿಂದ ಈ ಭಾಗದಲ್ಲಿ ಆರ್ಥಿಕ ಮಟ್ಟವು ಸುಧಾರಿಸಲು ಕಾರಣವಾಗಿದೆ ಎಂದರು.ಶಿಕ್ಷಕರೆಂಬ ಪದದಲ್ಲಿಯೇ ಶಿಕ್ಷಕ, ಕಲಿಸುವವರು ಎಂಬರ್ಥವಿದೆ. ಆದರೆ ಇಂದು ಮಕ್ಕಳನ್ನು ಶಿಕ್ಷಕರು ದಂಡಿಸದಂತೆ, ಶಿಕ್ಷೆ ನೀಡದಂತೆ ಪಾಠ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಯಾವ ಮಕ್ಕಳು ದಂಡನೆಗೆ, ಶಿಕ್ಷೆಗೆ ಒಳಗಾಗುವುದಿಲ್ಲವೋ ಅಂತಹ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಪೋಷಕರ ವಿರೋಧದ ಇಂತಹ ವಾತಾವರಣದಲ್ಲಿ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಲು ಕಷ್ಟವಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಹೈಟೆಕ್ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾರಂಭಿಸಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸ ನೀಡಲು ಮುಂದಾಗಲಿದ್ದೇವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ನಮ್ಮ ತಂದೆ ಕಟ್ಟಿದ ವಿದ್ಯಾಸಂಸ್ಥೆಯ ಜವಾಬ್ದಾರಿಯನ್ನು ನನ್ನ ಹೆಗಲಿಗೆ ಇರಿಸಲಾಗಿದೆ. ಹಾಗಾಗಿ ಅವರ ಹಾದಿಯಲ್ಲೇ ನಡೆಯಲು ಮುಂದಾಗಿದ್ದೇನೆ ಎಂದರು.ಅಭಿನಂದನೆ ಸ್ವೀಕರಿಸಿದ ನಿವೃತ್ತ ಪ್ರಾಂಶುಪಾಲ ನವಿಲೂರು ಪ್ರಕಾಶ್ ಮಾತನಾಡಿ, ಕೌಶಲ್ಯಕ್ಕೆ ಹೆಚ್ಚು ಬೆಲೆ, ಮಾನ್ಯತೆಯಿದ್ದು ವಿದ್ಯಾಲಯಗಳು ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿಗೊಳಿಸಲು ಹೆಚ್ಚು ಒತ್ತು ನೀಡಬೇಕೆಂದರು.
ಗ್ರಾಮೀಣ ಭಾಗದಲ್ಲಿ ದಿ.ಜಿ.ಮಾದೇಗೌಡರು ಭಾರತೀ ವಿದ್ಯಾಸಂಸ್ಥೆ ತೆರೆದು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದ ಹಲವು ಬಡವಿದ್ಯಾರ್ಥಿಗಳು ಶಿಕ್ಷಣ ಪಡೆದು ಉನ್ನತ ಉದ್ಯೋಗಗಳನ್ನು ಅಲಂಕರಿಸಿರುವುದು ಈ ಭಾಗಕ್ಕೆ ಮಾದರಿಯಾಗಿದೆ ಎಂದರು. ಇದೇ ಹಾದಿಯಲ್ಲಿ ಪುತ್ರ ಮಧು ಜಿ. ಮಾದೇಗೌಡ, ಮೊಮ್ಮಗ ಆಶಯ್ ಜಿ.ಮಧು ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಉತ್ತಮ ಬೆಳೆವಣಿಗೆ ಎಂದರು.ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ದಿ.ಜಿ.ಮಾದೇಗೌಡರು ಈ ಭಾಗದಲ್ಲಿ ಭಾರತೀ ವಿದ್ಯಾಸಂಸ್ಥೆಯನ್ನು ತೆರೆಯದಿದ್ದರೆ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಈ ಸಂಸ್ಥೆಯ ಅನೇಕ ಬಡ ಕುಟುಂಬಗಳು ಉನ್ನತ ಉದ್ಯೋಗಗಳನ್ನು ಪಡೆದು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದರು.
ಇದೇ ವೇಳೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಮದ್ದೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ಕಾಳೀರಯ್ಯ. ಬಿಇಟಿ ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಸಿದ್ದೇಗೌಡ, ಟ್ರಸ್ಟಿಗಳಾದ ಬಿ.ಬಸವೇಗೌಡ, ಎಸ್.ಜಯರಾಮು,ಹೈಟೆಕ್ ಕಾಲೇಜು ಪ್ರಾಂಶುಪಾಲ ಸಿ.ವಿ.ಮಲ್ಲಿಕಾರ್ಜುನ್, ಮುಖ್ಯಶಿಕ್ಷಕಿ ಎಚ್.ಪಿ.ಪ್ರತಿಭಾ ಸೇರಿದಂತೆ ಮತ್ತಿತರರು ಪಾಲ್ಗೊಂಡದ್ದರು.