ಐದು ವರ್ಷ ಬಳಿಕ ಕರಾವಳಿ ಕರ್ನಾಟಕ ಭಾಗದಲ್ಲಿ ಅಧಿಕ ಮುಂಗಾರು! ವಾಡಿಕೆಗಿಂತ ಶೇ.11ರಷ್ಟು ಅಧಿಕ ಮಳೆ

KannadaprabhaNewsNetwork | Updated : Oct 04 2024, 10:30 AM IST

ಸಾರಾಂಶ

ದ.ಕ. ಜಿಲ್ಲೆಯಲ್ಲಿ ಈ ಮುಂಗಾರು ಅವಧಿಯಲ್ಲಿ 44.191 ಹೆಕ್ಟೇರ್‌ ಕೃಷಿ, 18.807 ಹೆಕ್ಟೇರ್‌ ತೋಟಗಾರಿಕಾ ಪ್ರದೇಶ ಹಾನಿಗೀಡಾಗಿದೆ. ಒಟ್ಟು 7048 ವಿದ್ಯುತ್‌ ಕಂಬಗಳು, 89 ಟ್ರಾನ್ಸ್‌ಫಾರ್ಮರ್‌ಗಳು, 85 ಸೇತುವೆಗಳು, 242 ಕಿ.ಮೀ.ಗೂ ಅಧಿಕ ರಸ್ತೆ ಹಾನಿ ಸಂಭವಿಸಿದೆ.

ಸಂದೀಪ್‌ ವಾಗ್ಲೆ

 ಮಂಗಳೂರು : ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಕರ್ನಾಟಕ ಭಾಗದಲ್ಲಿ ಕಳೆದ ವರ್ಷ (2023) ಮುಂಗಾರು ಅವಧಿಯಲ್ಲಿ (ಜೂ.1ರಿಂದ ಸೆ.30) ವಾಡಿಕೆಗಿಂತ ಶೇ.19ರಷ್ಟು ಕಡಿಮೆ ಮಳೆಯಾಗಿ ಕೆಲವು ತಾಲೂಕುಗಳು ಬರಪೀಡಿತವಾಗಿದ್ದರೆ, ಈ ಬಾರಿ ಕರಾವಳಿ ಕರ್ನಾಟಕದಲ್ಲಿ ವಾಡಿಕೆಗಿಂತ ಶೇ.21ರಷ್ಟು ಅಧಿಕ ಮಳೆ ಸುರಿದು ಆಶಾದಾಯಕ ಬೆಳವಣಿಗೆ ಕಂಡಿದೆ.ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.11ರಷ್ಟು ಅಧಿಕ ಮುಂಗಾರು ಮಳೆ ಸುರಿದಿದ್ದರೆ, ಉಡುಪಿಯಲ್ಲಿ ಶೇ.12 ಹಾಗೂ ಉತ್ತರ ಕನ್ನಡದಲ್ಲಿ ಶೇ.31ರಷ್ಟು ಅಧಿಕ ಮಳೆ ದಾಖಲಾಗಿದೆ. ಮಳೆ ಹೆಚ್ಚಿದಷ್ಟೂ ಅತಿವೃಷ್ಟಿ ಹಾನಿಯ ಪ್ರಮಾಣವೂ ಹೆಚ್ಚಾಗಿದೆ.5 ವರ್ಷ ಬಳಿಕ ಅಧಿಕ ಮಳೆ: ಕರಾವಳಿ ಕರ್ನಾಟಕವು 5 ವರ್ಷಗಳ ಬಳಿಕ ಅತ್ಯಧಿಕ ಮಳೆಗೆ ಮತ್ತೆ ಈ ವರ್ಷ ಸಾಕ್ಷಿಯಾಗಿದೆ. 2019ರಲ್ಲಿ ವಾರ್ಷಿಕವಾಗಿ ಕರಾವಳಿ ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ.24ರಷ್ಟು ಅಧಿಕ ಮಳೆ ಸುರಿದಿತ್ತು. 2020ರಲ್ಲಿ ಶೇ.12ರಷ್ಟು ಅಧಿಕ ಮಳೆ, 2021ರಲ್ಲಿ ಶೇ.8, 2022ರಲ್ಲಿ ಶೇ.4ರಷ್ಟು ಅಧಿಕ ಮಳೆ ದಾಖಲಾಗಿದ್ದರೆ, ಕಳೆದ ವರ್ಷ 2023ರಲ್ಲಿ ವಾಡಿಕೆಗಿಂತ ಶೇ.19ರಷ್ಟು ಕಡಿಮೆ ಮಳೆಯಾಗಿ ಆತಂಕ ಸೃಷ್ಟಿಯಾಗಿತ್ತು. ಆದರೆ ಈ ವರ್ಷ ಮತ್ತೆ ಅಧಿಕ ಮಳೆ ಸುರಿದು ಬರ ಕಾರ್ಮೋಡದ ಸಾಧ್ಯತೆ ಇಳಿಮುಖವಾಗಿದೆ.

ಉಡುಪಿ ಪ್ರಥಮ, ದ.ಕ. ದ್ವಿತೀಯ!: ಈ ವರ್ಷ ಸೆಪ್ಟೆಂಬರ್‌ ಒಂದೇ ತಿಂಗಳಲ್ಲಿ ವಾಡಿಕೆಗಿಂತ ಅತ್ಯಧಿಕ ಮಳೆ ದಾಖಲಾದ ಜಿಲ್ಲೆಗಳ ಪೈಕಿ ಉಡುಪಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನ ದಕ್ಷಿಣ ಕನ್ನಡದ್ದು. ಉಡುಪಿಯಲ್ಲಿ ಸೆಪ್ಟೆಂಬರ್‌ನಲ್ಲಿ ವಾಡಿಕೆ ಮಳೆ 390.9 ಮಿಮೀ ಆಗಬೇಕಿದ್ದಲ್ಲಿ 593 ಮಿಮೀ ಮಳೆಯಾಗಿ ಶೇ.52ರಷ್ಟು ಅಧಿಕ ಮಳೆ ದಾಖಲಾಗಿದೆ. ದಕ್ಷಿಣ ಕನ್ನಡದಲ್ಲಿ ವಾಡಿಕೆ ಮಳೆ 326 ಮಿಮೀ ಇರುವಲ್ಲಿ 481 ಮಿಮೀ ಮಳೆಯಾಗಿ ಶೇ.48ರಷ್ಟು ಅಧಿಕ ಮಳೆಯಾಗಿದೆ.

ಇದೇ ಅವಧಿಯಲ್ಲಿ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ.66ರಷ್ಟು ಕಡಿಮೆ ಮಳೆಯಾಗಿದ್ದರೆ, ಉತ್ತರ ಒಳನಾಡಿನಲ್ಲಿ ಶೇ.27ರಷ್ಟು ಕಡಿಮೆ ಮಳೆ ದಾಖಲಾಗಿದೆ. ಮಲೆನಾಡು ಜಿಲ್ಲೆಗಳಲ್ಲಿ ಶೇ.1ರಷ್ಟು ಮಾತ್ರ ಅಧಿಕ ಮಳೆಯಾಗಿದೆ. ಮಳೆಗಾಲದ ಕೊನೆ ತಿಂಗಳಲ್ಲಿ ಕರಾವಳಿಯಲ್ಲಿ ಅಧಿಕ ಮಳೆ ಸುರಿದಿರುವುದು ಕೂಡ ಆಶಾದಾಯಕವೇ ಆಗಿದೆ. ಆದರೆ ಅಡಕೆ ಕೃಷಿಗೆ ಕೊಳೆ ರೋಗ ತಗುಲಿ ಕೊಂಚ ಹಿನ್ನಡೆಯಾಗಿತ್ತು.

ದ.ಕ.ದಲ್ಲಿ 11 ಸಾವು!: ಮಳೆ ಹೆಚ್ಚಿದಷ್ಟೂ ಸಾವು ನೋವಿನ ಪ್ರಮಾಣವೂ ಹೆಚ್ಚಿದೆ. ದಕ್ಷಿಣ ಕನ್ನಡದಲ್ಲಿ ಈ ವರ್ಷ ಮಳೆಯಿಂದಾಗಿ ಜನವರಿಯಿಂದ ಈವರೆಗೆ ಒಟ್ಟು 11 ಜನರು ಸಾವಿಗೀಡಾಗಿದ್ದರೆ, 8 ಮಂದಿ ಗಾಯಗೊಂಡಿದ್ದಾರೆ. 166 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 1010 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. 10 ದೊಡ್ಡ ಜಾನುವಾರುಗಳು ಹಾಗೂ 6 ಸಣ್ಣ ಜಾನುವಾರುಗಳು ಮೃತಪಟ್ಟಿವೆ. ಅತಿವೃಷ್ಟಿಯಿಂದಾಗಿ 236 ಮಂದಿ ಸರ್ಕಾರದ ಕಾಳಜಿ ಕೇಂದ್ರಗಳಲ್ಲಿ ವಾಸ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಿತ್ತು.

ಇತರ ಹಾನಿಗಳು: ದ.ಕ. ಜಿಲ್ಲೆಯಲ್ಲಿ ಈ ಮುಂಗಾರು ಅವಧಿಯಲ್ಲಿ 44.191 ಹೆಕ್ಟೇರ್‌ ಕೃಷಿ, 18.807 ಹೆಕ್ಟೇರ್‌ ತೋಟಗಾರಿಕಾ ಪ್ರದೇಶ ಹಾನಿಗೀಡಾಗಿದೆ. ಒಟ್ಟು 7048 ವಿದ್ಯುತ್‌ ಕಂಬಗಳು, 89 ಟ್ರಾನ್ಸ್‌ಫಾರ್ಮರ್‌ಗಳು, 85 ಸೇತುವೆಗಳು, 242 ಕಿ.ಮೀ.ಗೂ ಅಧಿಕ ರಸ್ತೆ ಹಾನಿ ಸಂಭವಿಸಿದೆ.

ಕರಾವಳಿಯಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಅಲ್ಲಲ್ಲಿ ಉತ್ತಮ ಮಳೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Share this article